ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಚುನಾವಣಾ ವಿಳಂಬಕ್ಕೆ ಮೂರು ವರ್ಷ
ಮೀಸಲು ಪಟ್ಟಿ ಸಿದ್ಧವಿಲ್ಲ
ನ್ಯಾಯಾಲಯದತ್ತ ಚುನಾವಣೆ ಆಯೋಗ
ಅಂದುಕೊಂಡಂತೆ ರಾಜ್ಯದಲ್ಲಿ ಸಮಯಕ್ಕೆ ಸರಿಯಾಗಿ ಲೋಕಸಭಾ ಚುನಾವಣೆಯೇನೋ ಮುಗಿಯಿತು. ಆದರೆ ಗ್ರಾಮೀಣ ಭಾಗದ ಅಭ್ಯುದಯದ
ಪ್ರತೀಕವಾದ ಪಂಚಾಯಿತಿ ಗಳ ಚುನಾವಣೆಗೆ ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ. ರಾಜ್ಯದಲ್ಲಿ ೩೧ ಜಿ ಪಂಚಾಯಿತಿಗಳು ಮತ್ತು ೨೩೯ ತಾಲೂಕು ಪಂಚಾಯಿತಿಗಳು ಮೂರು ವರ್ಷ ಗಳಿಂದ ಚುನಾವಣೆಯನ್ನೇ ಕಾಣದೆ ಒಣಗುತ್ತಿವೆ. ಇದರಿಂದ ಪಂಚಾಯಿತಿಗಳು ಜನಪ್ರತಿನಿಧಿಗಳನ್ನು
ಕಾಣದೆ ಮೂರು ವರ್ಷಗಳೇ ಕಳೆದಿದ್ದು, ಇದರಿಂದ ಪಂಚಾಯಿತಿಗಳ ಆಡಳಿತ ನೆಲಕಚ್ಚಿದೆ.
ಎಲ್ಲ ಪಂಚಾಯಿತಿಗಳಲ್ಲೂ ಸುದೀರ್ಘ ಸೇವೆಯಲ್ಲಿರುವ ಸರಕಾರದ ಆಡಳಿತಾಧಿಕಾರಿಗಳ ಕಾರುಬಾರು ಜೋರಾಗಿದ್ದು, ಇವರು ಮೂರು ವರ್ಷಗಳಿಂದ
ತುರ್ತು ಕೆಲಸಗಳನ್ನು ಬಿಟ್ಟು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತವಾಗಿ, ಸೇವಾ, ಸೌಲಭ್ಯಗಳು ಕಡತಗಳಿಗೆ ಸೀಮಿತ ವಾಗಿವೆ. ಇದರಿಂದ ಪಂಚಾಯಿತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗಬೇಕಾದ ಅನು ದಾನಗಳಿಗೆ ಕತ್ತರಿ ಬೀಳುತ್ತಿದ್ದು, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಣಕಾಸಿನ ಪರದಾಟ ಶುರುವಾಗಿದೆ.
ಅಷ್ಟೇ ಅಲ್ಲ, ಅವರು ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತದ ಮೊರೆ ಹೋಗುವ ಅನಿವಾರ್ಯ ಉಂಟಾಗಿದೆ. ಎಲ್ಲ ನಿರೀಕ್ಷೆಯಂತೆ ನಡೆದಿದ್ದರೆ, ರಾಜ್ಯದಲ್ಲಿ ಪಂಚಾಯಿತಿಗಳಲ್ಲಿ ಇಷ್ಟೊತ್ತಿಗೆ ಜನಪ್ರತಿನಿಧಿಗಳ ಆಡಳಿತ ಇರಬೇಕಿತ್ತು. ಆದರೆ ಇನ್ನೇನೋ ಚುನಾವಣೆ ನಡೆಯಬೇಕು ಎನ್ನುವ ವೇಳೆಗೆ ಸರಕಾರ ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮಾಡುವ ನಿರ್ಧಾರ ಮಾಡಿತ್ತು. ಹಾಗೆಯೇ ಮೀಸಲು ನಿಗದಿ ಮಾಡುವ ನಿರ್ಧಾರವನ್ನೂ
ಪ್ರಕಟಿಸಿತ್ತು. ಅಷ್ಟೇ ಅಲ್ಲ, ರಾಜ್ಯ ಚುನಾವಣಾ ಆಯೋಗಕ್ಕೆ ಇದ್ದ ಪುನರ್ ವಿಂಗಡಣೆ ಮತ್ತು ಮೀಸಲು ನಿಗದಿ ಅಽಕಾರ ತನಗಿರಲಿ ಎಂದು ಪಡೆದುಕೊಂಡ ಸರಕಾರ, ಅದಕ್ಕಾಗಿ ಕಾನೂನು ತಿದ್ದುಪಡಿಯನ್ನೂ ಮಾಡಿಕೊಂಡಿತು.
ಈ ಮಧ್ಯೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆ ಇನ್ನೂ ವಿಳಂಬವಾಗುವ ಸಾಧ್ಯತೆ ಕಾಣುತ್ತಿದ್ದು, ಇದನ್ನರಿತು ರಾಜ್ಯ ಚುನಾವಣಾ ಆಯೋಗ ಮತ್ತೆ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ನಿಚ್ಚಳವಾಗಿದೆ. ಇದರಿಂದ ಪಂಚಾಯಿತಿ ಚುನಾವಣೆ ಮತ್ತೆ ಕಟಕಟೆಯಲ್ಲಿ ಚರ್ಚೆಯಾಗಲಿದ್ದು, ಸರಕಾರ ಮತ್ತು ಆಯೋಗದ ನಡುವೆ ಹೊಸ ರೀತಿಯ ಸಮರ ಶುರುವಾಗುವ ಸಾಧ್ಯತೆ ಇದೆ.
ಇವರದೇನು ಪಂಚಾಯಿತಿ?
ರಾಜ್ಯದಲ್ಲಿ ೩೦ ಜಿ ಪಂಚಾಯಿತಿ ಮತ್ತು ೨೭೬ ತಾಲೂಕು ಪಂಚಾಯಿತಿಗಳಿಗೆ ೨೦೨೧ರ ಮೇನಲ್ಲೇ ಮುಗಿದಿದ್ದರಿಂದ ತಕ್ಷಣವೇ ಚುನಾವಣೆ ನಡೆಯ ಬೇಕಿತ್ತು. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಅಂದಿನ ಸಿದ್ಧತೆ ಪ್ರಕಾರ, ೨೦೨೧ರ ಆಗ ವೇಳೆ ಚುನಾವಣಾ ಪ್ರಕ್ರಿಯೆ ಪೂರ್ಣವಾಗಿರಬೇಕಿತ್ತು. ಆದರೆ ರಾಜ್ಯ ಸರಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಮುಂದಾ ಗಿತ್ತು. ಈ ಹಂತದಲ್ಲಿ ಚುನಾವಣೆ ಮುಂದೂಡುವುದು ಬೇಡ ಎಂದು ಆಯೋಗ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬೇಡ ಎಂದು ಆಯೋಗ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು. ಆದರೂ ಸರಕಾರ ಕ್ಷೇತ್ರ ಪುನರ್ ವಿಂಗಡಣೆ ಮಾತ್ರವಲ್ಲದೆ, ನಂತರದ ಕ್ಷೇತ್ರಗಳ ಮೀಸಲು ನಿಗದಿ ಅಧಿಕಾರವನ್ನು ಆಯೋಗದ ಬದಲು ತಾನೇ ಇರಿಸಿಕೊಳ್ಳುವ ನಿರ್ಧಾರ ಪ್ರಕಟಿಸಿತ್ತು.
ಇದಕ್ಕಾಗಿ ಪಂಚಾಯತ್ ರಾಜ್ಯ ಕಾಯಿದೆಗೆ ತಿದ್ದುಪಡಿ ತರುವುದಾಗಿ ಕೋರ್ಟ್ನಲ್ಲಿ ವಿನಂತಿಸಿ ಅವಕಾಶ ಪಡೆಯಿತು. ಆದರೂ ನಿಗದಿತ ಕಾಲಕ್ಕೆ ಈ ಪ್ರಕ್ರಿಯೆ ಪೂರ್ಣಗೊಳಿಸದೆ ಸರಕಾರ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿತ್ತಲ್ಲದೆ, ೫ ಲಕ್ಷ ರು. ದಂಡವನ್ನೂ ಹಾಕಿಸಿಕೊಂಡಿತ್ತು. ನಂತರದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಹಿರಿಯ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಅದು ಸರಕಾರಕ್ಕೆ ವರದಿಯನ್ನೂ ಸಲ್ಲಿಸಿತ್ತು. ಆದರೆ ಆ ವರದಿ ಪ್ರಕಾರ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಈಗ ೩೦ರ ಬದಲು ೩೧ಕ್ಕೇರಿದೆ. ತಾಲೂಕು ಪಂಚಾ ಯಿತಿಗಳ ಸಂಖ್ಯೆ ೧೭೬ರಿಂದ ೨೩೯ಕ್ಕೇರಿದೆ. ಆದರೂ ಸರಕಾರ ಇನ್ನೂ ಕ್ಷೇತ್ರ ಪುನರ್ ವಿಂಗಡಣೆ ಮತ್ತು ನಂತರದ ಕ್ಷೇತ್ರ ಮೀಸಲು ನಿಗದಿ ಕಾರ್ಯವನ್ನೂ ಇನ್ನೂ ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ.
ಬಿಜೆಪಿ ತಂತ್ರ ಕಾಂಗ್ರೆಸ್ಗೆ ಲಾಭ
ಹಾಗೆ ನೋಡಿದರೆ, ಚುನಾವಣೆ ನಡೆಸದೆ ವಿಳಂಬ ಮಾಡಿದ್ದು ಅಂದಿನ ಬಿಜೆಪಿ ಸರಕಾರ. ಆದರೆ ಇದನ್ನು ಈಗ ಪ್ರತಿಪಕ್ಷವಾಗಿರುವ ಬಿಜೆಪಿ ಪ್ರಶ್ನೆ ಮಾಡುತ್ತಿಲ್ಲ. ಏಕೆಂದರೆ, ಚುನಾವಣೆ ಕಾಲದಲ್ಲಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಿ, ಆಯೋಗದ ಅಧಿಕಾರ ಕಸಿದುಕೊಂಡು ವಿಳಂಬ ಮಾಡಿದ್ದೇ ಬಿಜೆಪಿಯಾಗಿದ್ದರಿಂದ ಈಗ ಪ್ರಶ್ನಿಸಲಾಗುತ್ತಿಲ್ಲ ಎನ್ನುತ್ತಾರೆ ಆ ಪಕ್ಷದವರು. ಈಗ ಕಾಂಗ್ರೆಸ್ ಕೂಡ ಕಳೆದೊಂದು ವರ್ಷದಿಂದ ಚುನಾವಣೆ ನಡೆಸದೆ ಮತ್ತೆ ವಿಳಂಬ ಮಾಡುತ್ತಿದ್ದು, ಇದನ್ನು ಬಿಜೆಪಿ ಪ್ರಶ್ನಿಸದಿರುವುದು ಕಾಂಗ್ರೆಸ್ಗೆ ಲಾಭವಾಗುತ್ತಿದೆ. ಹೀಗಾಗಿ ಚುನಾವಣೆ ಇನ್ನೂ ವಿಳಂಬವಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು.
*
ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಸರಕಾರ ಕ್ಷೇತ್ರ ವಿಂಗಡಣೆ ಮತ್ತು ಮೀಸಲು ನೀಡಬೇಕು. ಚುನಾವಣೆಗೆ ಸಹಕರಿಸಬೇಕು. ಇಲ್ಲವಾದರೆ ಆಯೋಗ ಕೋರ್ಟ್ ಮೊರೆ ಹೋಗುತ್ತದೆ. ಇನ್ನೂ ವಿಳಂಬವಾಗಲು ಬಿಡುವುದಿಲ್ಲ. -ಬಸವರಾಜು
ರಾಜ್ಯ ಚುನಾವಣಾ ಆಯುಕ್ತರು