ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಒಳಮೀಸಲು ವಿಚಾರದಲ್ಲಿ ಕಾಂಗ್ರೆಸ್ ಗೊಂದಲಕ್ಕೆ ಸಿಲುಕಿದ್ದು, ಇದರ ಗರಿಷ್ಠ ಲಾಭ ಪಡೆದುಕೊಳ್ಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ರಾಜ್ಯ ಸರಕಾರ ಚುನಾವಣಾ ಹೊಸ್ತಿಲಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಹೆಚ್ಚಿಸಲು ತೀರ್ಮಾನಿಸಿದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್, ಇದು ನಮ್ಮ ಅವಧಿಯ ಪ್ರಯತ್ನ. ಬಿಜೆಪಿಗೆ ಇದರಿಂದ ಲಾಭವೇನೂ ಆಗುವುದಿಲ್ಲ ಎಂದು ಕೊಂಕು ನುಡಿಯುತ್ತಾ ಕುಳಿತಿದೆ. ಆದರೆ ವಾಸ್ತವದಲ್ಲಿ ಮೀಸಲು ಪ್ರಮಾಣ ಹೆಚ್ಚಳಕ್ಕಿಂತ ಒಳ ಮೀಸಲು ಹೆಚ್ಚಿನ ರೀತಿಯ ರಾಜಕೀಯ ಲಾಭ ನಿರ್ಧರಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಅಂದರೆ ಪರಿಶಿಷ್ಜ ಪಂಗಡದ ಮೀಸಲನ್ನು ಶೇ.೩ರಿಂದ ೭ಕ್ಕೆ ಏರಿಕೆ ಮಾಡುವುದರಿಂದ (ಸಂವಿಧಾನದ ಪರಿಚ್ಛೇಧ ೯ಕ್ಕೆ ಸೇರಿದರೆ) ಬಿಜೆಪಿಗೆ ಲಾಭ ವಾಗಬಹುದು. ಆದರೆ ಪರಿಶಿಷ್ಜ ಜಾತಿ ವಿಚಾರಕ್ಕೆ ಬಂದರೆ ಇಲ್ಲಿ ಮೀಸಲು ಪ್ರಮಾಣ ಹೆಚ್ಚಳಕ್ಕಿಂತ ಒಳ ಮೀಸಲಾತಿ ಕಲ್ಪಿಸುವುದು ಹೆಚ್ಚು ಲಾಭದಾಯಕ. ಇದನ್ನು ಮನಗಂಡಿರುವ ಬಿಜೆಪಿ ಈಗ ಪರಿಶಿಷ್ಜರ ಒಳ ಮೀಸಲು ಬೇಡಿಕೆ ಇಟ್ಟಿರುವ ಮಾದಿಗರು ಮತ್ತು ಅಲೆಮಾರಿ ಸೇರಿ ಇತರ ಸಮು ದಾಯಗಳ ಪರ ನಿರ್ಧಾರಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊ ಳ್ಳುವ ಸಾಧ್ಯತೆ ಇದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಇನ್ನೂ ಗೊಂದಲದ ಮುಳುಗಿ ದಂತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಕಾಂಗ್ರೆಸ್ ಗೊಂದಲ?
ಮೀಸಲು ಏರಿಕೆ ಕುರಿತು ಎರಡು ದಿನಗಳ ಹಿಂದೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಒಳಮೀಸಲು ವಿಚಾರ ಪ್ರಸ್ತಾಪವಾಗದ ಬಿಜೆಪಿಯ ಮುಖಂಡರು ಪರವಾಗಿಯೇ ಮಾತನಾಡಿದರು. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೂಡ ಒಳಮೀಸಲು ಆಗಲೇಬೇಕೆಂದು ಪ್ರತಿಪಾದಿಸಿದರು. ಆದರೆ ಕಾಂಗ್ರೆಸ್ ಸರದಿ ಬಂದಾಗ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಒಬ್ಬರನ್ನು ಬಿಟ್ಟರೆ ಉಳಿದವರು ತುಟಿ ಬಿಚ್ಚಲಿಲ್ಲ ಎನ್ನಲಾಗಿದೆ. ಅದರಲ್ಲೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಳಮೀಸಲು ಕೊಡಬೇಕೇ, ಬೇಡವೇ ಎಂದು ಏನನ್ನೂ ಸ್ಪಷ್ಟವಾಗಿ ಹೇಳಲೇ ಇಲ್ಲ ಎನ್ನಲಾಗಿದೆ.
ಇದನ್ನು ಗಮನಿಸಿದ ಬಿಜೆಪಿಯ ಶಾಸಕರು ಒಳಮೀಸಲು ಬೇಕೇಬೇಕು ಎಂದು ವಾದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಈ ವಿಚಾರದಲ್ಲಿ ಗೊಂದಲಕ್ಕೀಡಾಗಿದೆ ಎಂದು ತಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಒಳಮೀಸಲು ಕಲ್ಪಿಸುವ ಅಗತ್ಯವಿದೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಮಾಧ್ಯಮಗಳ ಮುಂದೆಯೇ ಪ್ರಕಟಿಸಿದರು.
ತಮಿಳುನಾಡು ಮಾದರಿ ಒಳಮೀಸಲು
ತಮಿಳುನಾಡು ಮಾದರಿ ಒಳಮೀಸಲು ಮಾಡಿದರೆ ಹೇಗೆ ಎಂದು ಬಿಜೆಪಿ ಒಳಗೆ ಚರ್ಚೆ ಆರಂಭವಾಗಿದೆ. ಅಂದರೆ ಈ ವಿಷಯದಲ್ಲಿ ಬಿಜೆಪಿ ಒಳಗೂ ಕೊಂಚ ವಿರೋಧ ಇರುವ ಕಾರಣ ಬೇಕೆನ್ನುವವರನ್ನು ಮಾತ್ರ ಪ್ರತ್ಯೇಕಗೊಳಿಸಿ ಮೀಸಲು ನಿಗದಿ ಮಾಡುವುದು. ಅಂದರೆ ಪರಿಶಿಷ್ಜ ಜಾತಿಯಲ್ಲಿನ ಮಾದಿಗ ಸಮುದಾಯಕ್ಕೆ ಶೇ.೬ರಷ್ಟು ಮೀಸಲು ಕಲ್ಪಿಸಿ, ವಿರೋಧಿಸುವವರನ್ನು ಉಳಿಕೆ ಮೀಸಲು ಪ್ರಮಾಣದಲ್ಲಿ ಇರಿಸಿದರೆ ಹೇಗೆ ಎಂಬ ಚಿಂತನೆ ಇದೆ.
ಈ ಮಾದರಿ ತಮಿಳುನಾಡಿನಲ್ಲಿ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದಾಗ ಅರುಂಧರಿಯಾರ್ ಸಮುದಾಯಕ್ಕೆ ಶೇ.೩ರಷ್ಟು ಒಳಮೀಸಲು ಕಲ್ಪಿಸಿ
ಪ್ರತ್ಯೇಕ ಮೀಸಲು ನೀಡಲಾಗಿತ್ತು. ಇದೇ ಬಿಜೆಪಿಯೊಳಗೂ ಚರ್ಚೆಯಾಗುತ್ತಿದೆ. ಒಂದೊಮ್ಮೆ ಇದು ಅನುಷ್ಟಾನಕ್ಕೆ ಬಂದರೆ ಒಳಮೀಸಲು ಪಡೆಯುವ
ಮಾದಿಗ ಸಮುದಾಯ ಹೆಚ್ಚಿನ ರೀತಿಯಲ್ಲಿ ಬಿಜೆಪಿ ಕಡೆ ವಾಲುವ ಸಾಧ್ಯತೆ ಇದೆ. ಕಾಂಗ್ರೆಸ್ ತನ್ನ ಗೊಂದಲದ ನಿಲುವಿನಿಂದ ಆ ಸಮುದಾಯದಿಂದ ಇನ್ನಷ್ಟು ದೂರವಾಗುವ ಸಂಭವ ಕೂಡ ಇದೆ ಎಂದು ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.
*
ಸರ್ವಪಕ್ಷಗಳ ಸಭೆಯಲ್ಲಿ ಒಳಮೀಸಲು ಕುರಿತು ಪ್ರಸ್ತಾಪವಾದಾಗ ಕಾಂಗ್ರೆಸ್ ಸರಿಯಾದ ನಿಲುವು ಪ್ರಕಟಿಸಲಿಲ್ಲ. ಆದರೆ ಈ ವಿಷಯದಲ್ಲಿ ನಮ್ಮ ಪಕ್ಷ ಒಳಮೀಸಲು ಪರವಾಗಿದೆ. ಮುಂದಿನ ಸಂಪುಟದಲ್ಲಿ ತೀರ್ಮಾನಿಸುತ್ತೇವೆ. ಇದನ್ನು ವಿಧಾನಸಭೆಯಲ್ಲಿ ಚರ್ಚಿಸುವಾಗ ಕಾಂಗ್ರೆಸ್ ನಿಲುವು ಸ್ಪಷ್ಟ ವಾಗುತ್ತದೆ.
– ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ಮತ್ತು ಸಮಾಜ ಕಲ್ಯಾಣ ಸಚಿವ