ಕೈದಿಗಳಿಂದಲೇ ನಿರ್ವಹಣೆಯಾಗಲಿರುವ ರಾಜ್ಯದಲ್ಲಿ ಮೊದಲ ಪೆಟ್ರೋಲ್ ಬಂಕ್! |
ಬಂಕ್ಗಳಲ್ಲಿ ಕೆಲಸ ಮಾಡುವ ಕೈದಿಗಳಿಗೆ ಪಗಾರ
ಪ್ರಶಾಂತ ಲೋಕಾಪುರ
ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಕೈದಿಗಳಲ್ಲಿ ಹುಮ್ಮಸ್ಸು ತುಂಬಲು ಅವರ ಮನಃ ಪರಿವರ್ತನೆಗೊಳಿಸಲು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ಕೇಂದ್ರ ಕಾರಾಗೃಹ ದಲ್ಲಿರುವ ಕೈದಿಗಳಿಗೆ ಎಫ್ಎಂ ರೇಡಿಯೋ ಕೇಂದ್ರ, ಕೈದಿಗಳ ಭೇಟಿಗೆ ಹೊಸ ತಂತ್ರeನ, ಕೃಷಿ ಚಟುವಟಿಕೆಯೊಂದಿಗೆ ಕೈದಿಗಳಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ.
ಈಗ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ಇನ್ನು ಮುಂದೆ ಪೆಟ್ರೋಲ್ ಬಂಕ್ ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ. ಜತೆಗೆ ಸಂಬಳವನ್ನು ಪಡೆಯುವ ಅವಕಾಶಕ್ಕೆ ಮುಂದಾಗಿದ್ದಾರೆ. ಹೌದು! ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಕೆಲಸ ನೀಡಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಹಭಾಗಿತ್ವದಲ್ಲಿ ಜೈಲು ಆವರಣದಲ್ಲಿ ಒಂದು ಎಕರೆ ಜಾಗ ಗುರುತಿಸಲಾಗಿದೆ.
ಕೈದಿಗಳಿಂದಲೇ ನಿರ್ವಹಣೆಗೊಳ್ಳುತ್ತಿರುವ ರಾಜ್ಯದ ಮೊದಲ ಪೆಟ್ರೋಲ್ ಬಂಕ್ ಇದಾಗಲಿದೆ. ಪೆಟ್ರೋಲ್ ಬಂಕ್ಗಳಲ್ಲಿ ಕೆಲಸ ಮಾಡುವ ಕೈದಿಗಳಿಗೆ ದಿನನಿತ್ಯ ಕೂಲಿ ನೀಡಿ ತಿಂಗಳ ಕೊನೆಯಲ್ಲಿ ದುಡಿದ ಹಣ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈಗಾಗಲೇ ಪೆಟ್ರೋಲ್ ಬಂಕ್ ತೆರೆಯಲು ಅಧಿಕಾರಿಗಳು ಸಭೆ ನಡೆಸಿದ್ದು, ಸದ್ಯ ದಲ್ಲಿಯೇ ಪೆಟ್ರೋಲ್ ಬಂಕ್ ಆರಂಭವಾಗಲಿದೆ. ಇದರೊಂದಿಗೆ ದೊಡ್ಡ ಶಾಪಿಂಗ್ ಮಾಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಪೆಟ್ರೋಲ್ ಬಂಕ್ನ ಉಸ್ತುವಾರಿಯನ್ನು ಜೈಲು ಹಕ್ಕಿಗಳೇ ನೋಡಿಕೊಳ್ಳ ಲಿದ್ದಾರೆ.
ಈ ಪೆಟ್ರೋಲ್ ಬಂಕ್ನಲ್ಲಿ ಜೈಲಿನಲ್ಲಿರುವ ಕೈದಿಗಳು ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ತುಂಬಿಸಲಿದ್ದಾರೆ ಎನ್ನಲಾಗಿದೆ. ಕೈದಿಗಳಿಗೆ ಉದ್ಯೋಗ ನೀಡುವ ಈ ಯೋಜನೆ ಇದಾಗಿದೆ. ಈಗಾಗಲೇ ಸ್ವತಃ ಕೈದಿಗಳು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ.
ಈಗ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಪೆಟ್ರೋಲ್ ಬಂಕ್ ತೆರೆದು ಜೈಲು ಕೈದಿಗಳನ್ನೇ ನಿಯೋಜಿಸಿಕೊಂಡು ಉದ್ಯೋಗ ಒದಗಿಸಲು ಮುಂದಾಗಿದ್ದು, ಕಾರಾಗೃಹದ ಆವರಣದಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲು ಕಾರಾಗೃಹ ಕೈಗೊಂಡಿರುವ ಮೊದಲ ಪ್ರಯತ್ನ ಇದಾಗಿದೆ.ಧಾರವಾಡ ಕೇಂದ್ರ ಕಾರಾಗೃಹವು ಮಾದರಿ ಕಾರಾಗೃಹವಾಗಿ ಮಾರ್ಪಟ್ಟಿದೆ.
ಇದರೊಂದಿಗೆ ಕಾರಾಗೃಹದ ಜಮೀನಿನಲ್ಲಿ ೧೦೦ ತೆಂಗಿನ ಗಿಡಗಳು, ೧೦೦ ಮಾವಿನ ಮರಗಳು, ಹಾಗೂ ಸಪೋಟ, ಹುಣಸೆ, ಆಲದ ಮರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ೮ ರಿಂದ ೧೦ ಜೋಡಿ ಎತ್ತುಗಳನ್ನು ಟ್ರ್ಯಾಕ್ಟರ್ ಇದ್ದು, ಹೈನುಗಾರಿಕೆಗಾಗಿ ೮೦ ಹಸುಗಳನ್ನು ಸಾಕಲಾಗುತ್ತಿದೆ. ಇವುಗಳೆಲ್ಲವನ್ನೂ ಕೈದಿಗಳೇ ನಿರ್ವಹಣೆ ಮಾಡುತ್ತಿರುವುದರಿಂದ ಎ ಕಹಿ ಘಟನೆಗಳು ಮರೆತು
ಉತ್ತಮ ನಡೆತೆ ರೂಪಿಸಿಕೊಳ್ಳಲು ವರದಾನವಾಗಿದೆ.
ಕೈದಿಗಳೇ ಕೆಲಸಗಾರರು
ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ಮನಃಪರಿವರ್ತನೆಗೆ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಕೈದಿಗಳಿಗೆ ಗ್ರಂಥಾಲಯ, ಕೃಷಿ ಚಟುವಟಿಕೆ, ರೇಡಿಯೋ ಜಾಕಿ, ಸಾಕ್ಷರತಾ ತರಬೇತಿ, ಯೋಗ,
ಧ್ಯಾನ ಮತ್ತು ಪ್ರಾಣಾಯಾಮ ತರಬೇತಿಯೊಂದಿಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಿದ್ದು, ಸದ್ಯದಲ್ಲಿಯೇ ಪೆಟ್ರೋಲ್ ಬಂಕ್ ಆರಂಭಿಸಿ, ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ. ಜತೆಗೆ ಸಂಬಳವು ಪಡೆಯಲಿದ್ದಾರೆ.
***
ಧಾರವಾಡ ಕೇಂದ್ರ ಕಾರಾಗೃಹದ ಜಮೀನಿನಲ್ಲಿ ಪೆಟ್ರೋಲ್ ಬಂಕ್ ಆರಂಭಿಸಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಯೋಗದಲ್ಲಿ ಶೀಘ್ರ ಆರಂಭವಾಗಲಿದ್ದು, ಈ ಪೆಟ್ರೋಲ್ ಬಂಕ್ನಲ್ಲಿ ಕೈದಿಗಳಿಗೆ ಕೆಲಸ ನಿಯೋಜಿಸಿಕೊಂಡು ಸಂಬಳ ಅವರೇ
ನೀಡಲಿದ್ದಾರೆ. ಇದರ ನಿರ್ವಹಣೆಯನ್ನು ಕೈದಿಗಳೇ ಮಾಡಲಿದ್ದಾರೆ. ಶೀಘ್ರದ ಪೆಟ್ರೋಲ್ ಬಂಕ್ ಆರಂಭವಾಗಲಿದೆ. ಈ ಪೆಟ್ರೋಲ್ ಬಂಕ್ ಈ ರೀತಿ ಆರಂಭ ಮಾಡುತ್ತಿರುವುದು ರಾಜ್ಯದಲ್ಲಿಯೇ ಮೊದಲು.
-ಎಂ.ಎ.ಮರಿಗೌಡರ ಜೈಲು ಅಧೀಕ್ಷಕ