ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ಸಂಗತಿ ಬಹಿರಂಗ
ಬಾಲಕೃಷ್ಣ ಎನ್. ಬೆಂಗಳೂರು
ಕೃಷ್ಣ ಶರಾವತಿ ತುಂಗಾ.. ಕಾವೇರಿಯ ವರರಂಗಾ… ಎಂದು ರಾಷ್ಟ್ರಕವಿ ಕುವೆಂಪು ಕರ್ನಾಟಕದ ನದಿಗಳನ್ನು ಹಾಡಿ ಹೊಗಳಿ
ದ್ದಾರೆ. ಆದರೆ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕಲುಷಿತ ನದಿಗಳಿರುವುದೂ ಕರ್ನಾಟಕದಲ್ಲೇ..!
ಸತ್ಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪ್ರಕಾರ ಉತ್ತರ ಭಾರತದ ಕೆಲವು ರಾಜ್ಯಗಳು ಮತ್ತು ಮಹಾರಾಷ್ಟ್ರದ ಬಳಿಕ ಅತಿ ಹೆಚ್ಚು ಕಲುಷಿತ ನದಿಗಳಿರು ವುದು ಕರ್ನಾಟಕದಲ್ಲೇ. ಅಷ್ಟೇ ಅಲ್ಲ, ನಾವು ದಿನನಿತ್ಯ ಕುಡಿಯಲು ಬಳಸುತ್ತಿರುವ
ನೀರೂ ಶುದ್ಧವಾಗಿಲ್ಲ. ವಾರ್ಷಿಕ ೯ ಲಕ್ಷ ಮಿಲಿಯನ್ಗೂ ಹೆಚ್ಚು ಲೀಟರ್ ಚರಂಡಿ ನೀರು ರಾಜ್ಯದ ನದಿಗಳೊಡಲನ್ನು ಸೇರುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ವರದಿ ತಿಳಿಸಿದೆ.
ಈ ಮಧ್ಯೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಂತೆ, ಪ್ರತಿದಿನ ೩, ೭೭೭ ಮಿಲಿಯನ್ ಲೀಟರ್ ಚರಂಡಿ ನೀರು ನದಿ ನೀರಾಗಿ ಪರಿವರ್ತಿತವಾಗುತ್ತಿದೆ. ಈ ಪೈಕಿ ೧೩೦೪ ಮಿಲಿಯನ್ ಲೀಟರ್ ಮಾತ್ರ ಮರುಬಳಕೆ ಮಾಡಲಾಗುತ್ತದೆ.
ಉಳಿದ ೨೪೭೩ ಮಿಲಿಯನ್ ಲೀಟರ್ ಕಲುಷಿತ ನೀರು. ಇನ್ನು ವಾರ್ಷಿಕ , ಕೈಗಾರಿಕಾ ತ್ಯಾಜ್ಯ ನೀರು ನದಿಗಳನ್ನು ಸೇರುತ್ತಿದೆ. ರಾಜ್ಯದಲ್ಲಿ ಶೇ. ೧೬ ರಷ್ಟು ಸ್ಥಳೀಯ ಸಂಸ್ಥೆಗಳು ಮಾತ್ರ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿವೆ. ೨೧೯ ಸ್ಥಳೀಯ ಸಂಸ್ಥೆಗಳಲ್ಲಿ ಕೇವಲ ೩೬ರಲ್ಲಿ ಮಾತ್ರ ನೀರು ಸಂಸ್ಕರಣಾ ಘಟಕಗಳಿವೆ.
ಕಾವೇರಿ ಏನಾಗಿದೆ?: ಕಾವೇರಿಯಿಂದ ಯುಮನೆಯವರೆಗಿನ ದೇಶದ ದೊಡ್ಡ ನದಿಗಳೆಲ್ಲವೂ ಕಲುಷಿತಗೊಂಡಿದ್ದು, ಈ ನದಿ ಗಳಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಅಪಾಯ ತಂದೊಡ್ಡಲಿದೆ ಎಂಬ ಅಧ್ಯಯನ ವರದಿಯನ್ನು ಬೆಂಗಳೂರಿನ
ಭಾರತೀಯ ವಿeನ ಸಂಸ್ಥೆ(ಐಐಎಸ್ಸಿ) ಹಾಗೂ ದಯಾನಂದ ಸಾಗರ ಇನ್ಸ್ಟಿಟ್ಯೂಟ್ಗಳು ನೀಡಿವೆ.
ಈ ನದಿಗಳು ಪ್ರತಿಜೀವಿಕ ನಿರೋಧಕ ಬ್ಯಾಕ್ಟಿರಿಯಾಗಳ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿವೆ. ಇದು ಜನರ ಆರೋಗ್ಯಕ್ಕೆ ಕಂಟಕ ವಾಗಿ ಪರಿಣಮಿಸಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ದಕ್ಷಿಣ ಭಾರತದ ಪ್ರಮುಖ ನದಿಯಾಗಿರುವ ಕಾವೇರಿ ನದಿ ಮೇಲೆ ಬಹು ಅಧ್ಯಯನ ಕೈಗೊಳ್ಳಲಾಗಿದೆ. ಈ ಎಲ್ಲ ಅಧ್ಯಯನಕ್ಕೆ ಬಳಸಿಕೊಳ್ಳಲಾದ ಸ್ಯಾಂಪಲ್ಗಳೆಲ್ಲವೂ ಕಾವೇರಿ ನದಿ ಕಲುಷಿತ ಗೊಂಡಿರುವ ಎಚ್ಚರಿಕೆಯನ್ನು ರವಾನಿಸಿವೆ. ದೇಶದ ನಗರ ಪ್ರದೇಶಗಳು ೬೧,೯೪೮ ಎಂಎಲ್ಡಿ ಭೂಗತ ಒಳಚರಂಡಿ ನೀರು ಉತ್ಪಾದಿಸುತ್ತವೆ. ಅದರಲ್ಲಿ ಕೇವಲ ೨೩,೨೭೭ ಎಂಎಲ್ಡಿ ನೀರನ್ನು ಸಂಸ್ಕರಿಸಿ ನಂತರ ನದಿಗಳು ಮತ್ತು ತೊರೆಗಳಿಗೆ ತಿರುಗಿಸಲಾಗುತ್ತದೆ. ಉಳಿದವು ಹಾಗೆಯೇ ನದಿ ಸೇರುತ್ತವೆ.
ಶೇ.೧೫-೨೦ರಷ್ಟು ಯೋಗ್ಯವಿಲ್ಲ
ಕೃಷ್ಣಾ, ಮಲಪ್ರಭಾ, ಘಟಪ್ರಭಾ ಒಳಗೊಂಡತೆ ಅನೇಕ ನದಿಗಳ ನೀರು ಕುಡಿಯಲು ಹಾಗೂ ಬಳಕೆಗೆ ಯೋಗ್ಯವಿಲ್ಲ. ಗ್ರಾಮದ ತ್ಯಾಜ್ಯ ನೀರು, ಪ್ರಾಣಿಗಳ ಸಾವು ಸೇರಿದಂತೆ ಅನೇಕ ಕಾರಣಗಳಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಕೊಳವೆ ಬಾವಿ, ತೆರೆದ ಬಾವಿ ಸೇರಿ ಜಲ ಮೂಲಗಳಿಂದ ಸಂಗ್ರಹಿಸಿದ ನೀರಿನ ಮಾದರಿ ತಪಾಸಣೆಯಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಶೇ.೧೫ರಿಂದ ೨೦ರಷ್ಟು ನೀರು ಕುಡಿಯಲು ಯೋಗ್ಯವಿಲ್ಲ ಎನ್ನುವ ವರದಿಯಾಗಿದೆ. ಆಯಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗಳ ತ್ಯಾಜ್ಯವನ್ನು ಹೊರತುಪಡಿಸಿ, ನಗರಗಳು ಮತ್ತು ಪಟ್ಟಣಗಳಲ್ಲಿನ ಒಳಚರಂಡಿಯಿಂದ ಹೊರ ಸೂಸುವ ತ್ಯಾಜ್ಯಗಳು ನದಿ ಕಲುಷಿತಗೊಳ್ಳಲು ಕಾರಣವಾಗಿದೆ ಎಂದು ವರದಿಗಳು ಹೇಳುತ್ತವೆ.
***
? ವಾರ್ಷಿಕ ೯,೦೩,೬೪೫ ಮಿಲಿಯನ್ ಲೀ. ತ್ಯಾಜ್ಯ ನದಿಯೊಡಲು ಸೇರುತ್ತಿದೆ.
***
ಯಾವುವು ೧೭ ನದಿಗಳು?
ಅರ್ಕಾವತಿ, ಲಕ್ಷ್ಮಣ ತೀರ್ಥ, ಮಲಪ್ರಭಾ, ತುಂಗಭದ್ರಾ, ಕಾವೇರಿ, ಭದ್ರಾ, ತುಂಗಾ, ಕಬಿನಿ, ಕಾಗಿನಾ, ಅಸಂಗಿ, ಕಾಳಿ, ಕೃಷ್ಣ, ಶಿಮ್ಷಾ, ಭೀಮಾ, ಕುಮಾರಧಾರ, ನೇತ್ರಾವತಿ ಮತ್ತು ಯಗಚಿ ನದಿಗಳು ಕಲುಷಿತಗೊಂಡಿರುವ ಕರ್ನಾಟಕದ ೧೭ ನದಿಗಳು.