ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ದೇಶದ ಗಮನ ಸೆಳೆದಿರುವ ರಾಜ್ಯ ಸರಕಾರ ಮತ್ತು ರಾಜಭವನ ನಡುವಿನ ಸಂಘರ್ಷ ಈಗ ರಾಷ್ಟ್ರಪತಿ ಅವರನ್ನು ಕರ್ನಾಟಕದ ಕಡೆ ನೋಡುವಂತೆ ಮಾಡಿದೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವುದರ ವಿರುದ್ಧ ರಾಷ್ಟ್ರಪತಿ ಬಳಿಗೆ ಪರೇಡ್ ನಡೆಸುವುದಾಗಿ ಕಾಂಗ್ರೆಸ್ ಹೇಳುತ್ತಿರುವಾಗಲೇ ರಾಷ್ಟ್ರಪತಿ ಅವರು ಪ್ರಕರಣಕ್ಕೆ
ಸಂಬಂಧಿಸಿದಂತೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಬಗ್ಗೆ ಗಮನ ಹರಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿzರೆ. ಅಂದರೆ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದ ಸಂದರ್ಭದಲ್ಲಿ ರಾಷ್ಟ್ರಪತಿ ಅವರಿಗೆ ಕೆಪಿಸಿಸಿ ಮಾಧ್ಯಮ ಮತ್ತು
ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸಲ್ಲಿಸಿದ್ದ ದೂರೊಂದಕ್ಕೆ ರಾಷ್ಟ್ರಪತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ವಿಚಾರಣೆಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರಿನ ವಿಷಯವಾಗಿ ಸೂಕ್ತ ರೀತಿಯಲ್ಲಿ ಗಮನ ಹರಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ರಾಷ್ಟ್ರಪತಿ ಅವರು ಸೂಚನೆ ನೀಡಿದ್ದಾರೆ. ಇದರೊಂದಿಗೆ ಈಗ ಕಾರ್ಯದರ್ಶಿ ಅವರು ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದ ಬಗ್ಗೆ ಗಮನ ಹರಿಸಿ ಕೈಗೊಂಡ ಕ್ರಮದ ಬಗ್ಗೆ ಸೂಕ್ತ ಮಾಹಿತಿಯನ್ನು ದೂರುದಾರರಿಗೆ ನೀಡಬೇಕಾಗಿದೆ. ಆದರೆ ಈ
ವಿಚಾರದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರು ಕಾನೂನು ವ್ಯಾಪ್ತಿಯಲ್ಲಿ ಏನೆಮಾಡಲು ಸಾಧ್ಯವಿದೆ. ರಾಜ್ಯಪಾಲರ ನಿರ್ಧಾರ ಬಗ್ಗೆ ಅವರು ಹೇಗೆ ಗಮನ ಹರಿಸಬೇಕಾಗುತ್ತದೆ ಎನ್ನುವ ಬಗ್ಗೆ ಗೊಂದಲವಿದೆ. ಹಾಗೆಯೇ ಇದಕ್ಕೆ ಮುಖ್ಯಕಾರ್ಯದರ್ಶಿ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ. ಇದರ ಬಗ್ಗೆ ರಾಷ್ಟ್ರಪತಿ ಅವರಿಗೆ ಹೇಗೆ ವಾಪಸ್ ಮಾಹಿತಿ ನೀಡುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ಏನಿದು ದೂರುಗಳ ಮೇಲ್ ಆಟ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮದ ಬಗ್ಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆಗ ೧೯ರಂದು ಬೆಳಗ್ಗೆ ೧೧ ಗಂಟೆಗೆ ಇ ಮೇಲ್ ಮೂಲಕ ದೂರು ಸಲ್ಲಿಸಿದ್ದರು. ರಾಜ್ಯಪಾಲರು ಬಿಜೆಪಿ ಮತ್ತು ಜೆಡಿಎಸ್ ಒತ್ತಡಕ್ಕೆ ಮಣಿದು ಕಾನೂನುಬಾಹಿರವಾಗಿ ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ಮೂಲಕ ರಾಜ್ಯಪಾಲರು ಸ್ಪಷ್ಟ ಜನಾದೇಶದೊಂದಿಗೆ ಅಸ್ಥಿತ್ವಕ್ಕೆ ಬಂದ ಸರಕಾರವನ್ನು ಅಸ್ಥಿರಗೊಳಿಸಿ ಸಂವಿಧಾನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. ಈ ವಿಚಾರವಾಗಿ ರಾಷ್ಟ್ರಪತಿ ಅವರು ಮಧ್ಯಪ್ರವೇಶ ಮಾಡಿ ರಾಜ್ಯಪಾಲರು ನೀಡಿರುವ ವಿಚಾರಣಾ ಅನುಮತಿಯನ್ನು ವಾಪಸ್ ಪಡೆಯುವಂತೆ ಮಾಡಬೇಕು ಎಂದೂ ವಿನಂತಿಸಿದ್ದರು.
ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವುದನ್ನು ರದ್ದುಗೊಳಿಸುವಂತೆ ಕೋರಿದ ಅರ್ಜಿಗೆ ರಾಷ್ಟ್ರಪತಿ ಪ್ರತಿಕ್ರಿಯಿಸಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಅವರು ಏನು ಮಾಡುತ್ತಾರೋ ನೋಡೋಣ. ನಂತರ ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ.
-ರಮೇಶ್ ಬಾಬು
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ