ಮಂಜುನಾಥ ಕೆ. ಬೆಂಗಳೂರು
ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಕಳೆದ ೨೧ ದಿನಗಳಿಂದ ಸಬ್ಇನ್ಸ್ಪೆಕ್ಟರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಆದರೆ, ಇದಕ್ಕೆ ಮಂತ್ರಿಯಾದಿಯಾಗಿ ಇದುವರೆಗೂ ಯಾರೊಬ್ಬರು ಸರಿಯಾಗಿ ಸ್ಪಂದಿಸದೇ ಇರುವುದು ವಿಪರ್ಯಾಸ.
ಹೌದು, ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುವುದನ್ನು ತಡೆದು ಸ್ವಚ್ಛತೆ ಕಾಪಾಡುವುದರೊಂದಿಗೆ ದುರ್ವಾಸನೆ ತಡೆಯುವ ಉದ್ದೇಶದಿಂದ ಮಾಡಿದ ಅಭಿಯಾನಕ್ಕೆ ಯಾರೂ ಪ್ರತಿಕ್ರಿಯಿಸುತ್ತಿಲ್ಲ. ಸದಾ ಪ್ರಯಾಣಿಕರು ಮತ್ತು ಜನರಿಂದ ತುಂಬಿ ತುಳುಕುತ್ತಿರುವ ಗೊರಗುಂಟೆಪಾಳ್ಯ ಜಂಕ್ಷನ್, ಸೆಮಿ ಮೆಜೆಸ್ಟಿಕ್ ಎಂದೂ ಕರೆಸಿಕೊಳ್ಳುತ್ತದೆ. ಕೆಂಗೇರಿ, ಲಗ್ಗೆರೆ ಸೇರಿ ಮೈಸೂರು ರಸ್ತೆ ಮಾರ್ಗವಾಗಿ ಬರುವ ಪ್ರಯಾಣಿಕರು ಸಂಚಾರ ದಟ್ಟಣೆಯ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ಗೆ ಹೋಗದೆ ಗೊರಗುಂಟೆ ಪಾಳ್ಯದಲ್ಲಿಯೇ ಬಸ್ಗಳನ್ನು ಹತ್ತಿ ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಾರೆ.
ಹಾಸನ, ತುಮಕೂರು, ಬೀದರ್ ಸೇರಿದಂತೆ ಮುಂದಾದ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರು ಈ ಭಾಗದಲ್ಲಿ ಬಂದು ಬಸ್ಗಳನ್ನು ಹೆಚ್ಚಾಗಿ ಹತ್ತುತ್ತಾರೆ. ಹೀಗೆ ಸದಾ ಜನಜಂಗುಳಿಯಿಂದ ಕೂಡಿರುವ ಈ ಭಾಗದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯಗಳಿಲ್ಲ. ಹೀಗಾಗಿ ಪ್ರಯಾಣಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ಮುಜುಗರದ ಜತೆಗೆ ದುರ್ವಾ ಸನೆಯಿಂದ ಸ್ಥಳೀಯರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಕೆಲವರು ಕುಡಿತ ಮತ್ತಿನಲ್ಲಿ ಮಹಿಳೆಯರು ಇರುವುದನ್ನೂ ಲೆಕ್ಕಿಸದೆ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ.
ಗಮನಹರಿಸದ ಜನಪ್ರತಿನಿಧಿಗಳು: ಗೊರಗುಂಟೆ ಪಾಳ್ಯ ಜಂಕ್ಷನ್ನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಇರುವುದನ್ನು ಮನಗಂಡಿರುವ ವಿಧಾನಸೌಧ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್, ಈ ಬಗ್ಗೆ ಕಳೆದ ೨೧ ದಿನಗಳಿಂದ ಟ್ವಿಟ್ಟರ್ ಅಭಿಯಾನ ಆರಂಭಿಸಿ, ಟ್ವಟರ್ ಮೂಲಕ ಪ್ರಧಾನಿ, ಈ ಭಾಗದ ಸಚಿವರು ಹಾಗೂ ಶಾಸಕರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಆದರೆ, ಇದುವರೆಗೂ ಯಾವ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿಲ್ಲ.
ಪ್ರಧಾನಿಯವರ ಸ್ವಚ್ಛ ಭಾರತ ಜಪ ಮಾಡುತ್ತಿರುವ ಜನಪ್ರತಿನಿಧಿಗಳು ಇನ್ನಾದರೂ ಗಮನಹರಿಸಿ ಜನರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಸಾರ್ವಜನಿಕ
ಶೌಚಾಲಯವನ್ನು ನಿರ್ಮಿಸಿ ಸ್ವಚ್ಛ ಭಾರತ್ಗೆ ಕೈ ಜೋಡಿಸಲಿ ಎಂಬುದು ವಿಶ್ವವಾಣಿಯ ಆಶಯವಾಗಿದೆ.
***
ಸಾರ್ಜಜನಿಕ ಶೌಚಾಲಕ್ಕೆ ಆಗ್ರಹಿಸಿ ಕಳೆದ ೨೧ ದಿನಗಳಿಂದ ಟ್ವಿಟರ್ ಅಭಿಯಾನ ಮಾಡುತ್ತಿದ್ದೇನೆ. ಅದನ್ನು ಟ್ಯಾಗ್ ಮಾಡುವ ಮೂಲಕ ಹಲವು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಪಕ್ಷ ಮೂವಿಂಗ್ (ಮೊಬೈಲ್) ಟಾಯ್ಲೆಟ್ ಆದರೂ ಮಾಡಿ ಎಂದು ಈ ಮೂಲಕ ಮನವಿ ಮಾಡುತ್ತೇನೆ.
-ಶಾಂತಪ್ಪ ಜಡೆಮ್ಮನವರ್ ಸಬ್ ಇನ್ಸ್ಪೆಕ್ಟರ್
***
ಎಲ್ಲಿ ಶೌಚಾಲಯದ ಅಗತ್ಯವಿದೆ?
ಪೀಪಲ್ ಟ್ರೀ ಆಸ್ಪತ್ರೆಯ ಸಮೀಪ
ರಾಜಕುಮಾರ್ ಸಮಾಧಿ ರಸ್ತೆಯ ಜಂಕ್ಷನ್
ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಟ್ವಿಟ್ಟರ್ ಅಭಿಯಾನ
೨೧ ದಿನಗಳಿಂದ ಅಭಿಯಾನ ನಡೆಸುತ್ತಿರುವ ಸಬ್ ಇನ್ ಪೆಕ್ಟರ್
ಎಲ್ಲೆಂದರೆಲ್ಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಜನರು
ಈ ಬಗ್ಗೆ ಗಮನ ಹರಿಸದ ಜನಪ್ರತಿನಿಧಿಗಳು
ಜನಪ್ರತಿನಿಧಿಗಳೆ ಇನ್ನಾದರೂ ಗಮನ ಹರಿಸಿ.