ವಿಶ್ವವಾಣಿ ಸಂದರ್ಶನ: ಪ್ರದೀಪ್ ಕುಮಾರ್ ಎಮ್.
ಪುನೀತ್ ರಾಜ್ಕುಮಾರ್ಗೆ ನಾಳೆ ಸಹಕಾರ ರತ್ಮ ಪ್ರಶಸ್ತಿ ಪ್ರದಾನ
ಪುನೀತ್ ಋಣ ತೀರಿಸುವ ಒಂದು ಸಣ್ಣ ಪ್ರಯತ್ನ
ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದವರಿಗೆ ಪ್ರತಿ ವರ್ಷ ನೀಡುವ ಸಹಕಾರ ರತ್ನ ಪ್ರಶಸ್ತಿಗೆ ಪುನೀತ್ ರಾಜ್ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಮಾ.20ರಂದು ಕೆಂಗೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಸಿನಿಮಾ ರಂಗದಲ್ಲಿ ಅಪಾರ ಸಾಧನೆ ಮಾಡಿದ ಪುನೀತ್ ರಾಜ್ಕುಮಾರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡುತ್ತಿರುವುದರ ಹಿಂದಿನ ಉದ್ದೇಶ ಮತ್ತು ಸಹಕಾರ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಕುರಿತಂತೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇ ಗೌಡ ಅವರು ‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿ ಕೊಂಡಿದ್ದಾರೆ.
ಈ ಬಾರಿ ಸಹಕಾರ ರತ್ನ ಪ್ರಶಸ್ತಿಗೆ ಪುನೀತ್ ರಾಜ್ಕುಮಾರ್ ಅವರನ್ನು ಆಯ್ಕೆ ಮಾಡಿದ್ದರ ಹಿಂದಿನ ಉದ್ದೇಶವೇನು?
ಪುನೀತ್ ರಾಜ್ಕುಮಾರ್ ಸಿನಿಮಾ ನಟರಾಗಿದ್ದರೂ ಸಹಕಾರ ಕ್ಷೇತ್ರಕ್ಕೆ, ಅದರಲ್ಲೂ ಕರ್ನಾಟಕ ಹಾಲು ಮಹಾಮಂಡಳಕ್ಕೆ (ಕೆಎಂಎಫ್) ಅಮೂಲ್ಯ ಕೊಡುಗೆ ನೀಡಿದ್ದಾರೆ. ಕೆಎಂಎಫ್ ರಾಯಭಾರಿಯಾಗಿ ಹಾಲು ಉತ್ಪಾದಕರು ಮತ್ತು ಗ್ರಾಹಕರ ನಡುವಿನ
ಸೇತುವೆಯಾಗಿ ಕೆಲಸ ಮಾಡಿದ್ದರು. ಇದರಿಂದಾಗಿ ಕೆಎಂಎಫ್ ಮಾತ್ರವಲ್ಲ, ಎಲ್ಲಾ ಹಾಲು ಒಕ್ಕೂಟಗಳು, ಉತ್ಪಾದಕರಿಗೆ ಸಾಕಷ್ಟು ಲಾಭವಾಗಿದೆ. ಈ ಕಾರಣಕ್ಕಾಗಿ ಅವರಿಗೆ ಮರಣೋತ್ತರವಾಗಿ ಸಹಕಾರ ರತ್ನ ಪ್ರಶಸ್ತಿ ನೀಡಿ ಅವರು ಈ ಕ್ಷೇತ್ರಕ್ಕೆ ನೀಡಿದ ಸೇವೆಯ ಋಣ ತೀರಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ ಅಷ್ಟೆ.
ಸಹಕಾರ ಕ್ಷೇತ್ರಕ್ಕೂ ಪುನೀತ್ ಅವರಿಗೂ ಸಂಬಂಧವೇನು? ಸಹಕಾರ ಕ್ಷೇತ್ರದ ಬಗ್ಗೆ ಅವರಿಗೆ ಯಾವ ಅಭಿಪ್ರಾಯವಿತ್ತು?
ಪುನೀತ್ ರಾಜ್ಕುಮಾರ್ ಕೇವಲ ನಟ ಮಾತ್ರ ಆಗಿರಲಿಲ್ಲ. ಸಮಾಜದ ಬಗ್ಗೆ ಅಪಾರ ಕಳಕಳಿ, ಕಾಳಜಿ ಹೊಂದಿದ್ದರು. ಅದೇ ರೀತಿ ಸಹಕಾರ ಕ್ಷೇತ್ರದ ಬಗ್ಗೆಯೂ ಅವರಿಗೆ ಅಭಿಮಾನವಿತ್ತು. ಸಹಕಾರ ಸಂಘದ ಮೂಲಕ ರೈತರಿಗೆ ಹಸುಗಳನ್ನು ಕೊಡುವುದು, ಕೃಷಿ, ತೋಟಗಾರಿಕೆಗೆ ಬಡ್ಡಿ ರಹಿತ ಮತ್ತು ತೀರಾ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಯೋಜನೆಗಳ ಬಗ್ಗೆ ಅವರು ಮೆಚ್ಚುಗೆ
ವ್ಯಕ್ತಪಡಿಸುತ್ತಿದ್ದರು. ಈ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು. ಮುಂದೆ ತಾವೂ ಏನಾದರೂ ಮಾಡಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು.
ಪುನೀತ್ ರಾಜ್ಕುಮಾರ್ ಅವರೊಂದಿಗೆ ನಿಮ್ಮ ಒಡನಾಟ ಹೇಗಿತ್ತು?
ವರನಟ ಡಾ.ರಾಜ್ಕುಮಾರ್ ಅವರ ಕಾಲದಿಂದಲೂ ಅವರ ಕುಟುಂಬದ ಜತೆ ಆತ್ಮೀಯ ಒಡನಾಟವಿತ್ತು. ನಾನೂ ರೈತ ಕುಟುಂಬದಿಂದ ಬಂದವನು. ಅವರ ಬಂಗಾರದ ಮನುಷ್ಯ ಚಿತ್ರವನ್ನು ಒಂಬತ್ತು ಬಾರಿ ನೋಡಿ ನಾನಾ ರೀತಿಯ ಬೆಳೆಗಳನ್ನು ಬೆಳೆದು ಯಶಸ್ವಿ ರೈತ ಎನಿಸಿಕೊಂಡಿದ್ದೆ. ರಾಜ್ಕುಮಾರ್ ಅವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಇಡೀ ಕುಟುಂಬಕ್ಕೆ ಪೌರ ಸನ್ಮಾನ ಮಾಡಿದ್ದೆ. ರಾಜ್ ನಿಧನಾನಂತರ ಪಾರ್ವತಮ್ಮ ರಾಜ್ಕುಮಾರ್ ಮತ್ತು ಅವರ ಮಕ್ಕಳೊಂದಿಗೂ ಅದೇ ಒಡನಾಟ ಮುಂದುವರಿದಿತ್ತು. ಅದರಲ್ಲೂ ಪುನೀತ್ ರಾಜ್ಕುಮಾರ್ ಅವರೊಂದಿಗೆ ಹೆಚ್ಚು ಆತ್ಮೀಯತೆ ಇತ್ತು. ಸಹಕಾರ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಏಕೆಂದರೆ, ಈ ಕ್ಷೇತ್ರದ ಬಗ್ಗೆ ಪುನೀತ್ ಅವರಿಗೆ ಅಪಾರ ಗೌರವವಿತ್ತು. ಡಾ. ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿ ಎಷ್ಟು ಜನಪ್ರಿಯ ರಾಗಿದ್ದರೋ ಅದಕ್ಕಿಂತ ನೂರು ಪಟ್ಟು ಹೆಚ್ಚಾಗಿ ಪುನೀತ್ ಜನರ ಹೃದಯದಲ್ಲಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಸುದೀರ್ಘ ಅವಧಿ ಕೆಲಸ ಮಾಡಿದ್ದೀರಿ. ನಿಮ್ಮ ಕೆಲಸಗಳ ಬಗ್ಗೆ ಸಮಾಧಾನ ಇದೆಯೇ?
ಖಂಡಿತ ಸಮಾಧಾನ ತಂದಿಲ್ಲ. ಆದರೂ ಸಹಕಾರ ಕ್ಷೇತ್ರದ ಪ್ರಗತಿಗೆ ಏನಾದರೂ ಪ್ರಯತ್ನ ಮಾಡಲೇಬೇಕು ಎಂದು ನನ್ನ ಕೆಲಸ
ಮುಂದುವರಿಸುತ್ತಿದ್ದೇನೆ. ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಣ, ತರಬೇತಿ ನೀಡುವ ಮಾತೃ ಸಂಸ್ಥೆ ಇದು. ಬಿಇ ಮಾಡಿ ದವರಿಗೆ ಎಂಜಿನಿಯರ್ ಎನ್ನುತ್ತಾರೆ. ಎಂಬಿಬಿಎಸ್ ಮಾಡಿದವ ರಿಗೆ ವೈದ್ಯರು ಎಂದು ಗೌರವಿಸುತ್ತಾರೆ. ಆದರೆ, ಸಹಕಾರ ವಿಭಾಗ ದಲ್ಲಿ ಎಂಎ ಮಾಡಿದವರು ಸೇರಿದಂತೆ ಸಹಕಾರಕ್ಕೆ ಸಂಬಂಧಿಸಿದ ಶಿಕ್ಷಣಕ್ಕೆ ಸರಕಾರಗಳು ಆದ್ಯತೆ ಕೊಟ್ಟಿಲ್ಲ. ಅದು ಆಗಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಸಹಕಾರ ಕ್ಷೇತ್ರವನ್ನು ದೇಶದ ಆರ್ಥಿಕತೆಯ ಹೆಬ್ಬಾಗಿಲು ಎನ್ನುತ್ತಿದ್ದರು. ಈಗಲೂ ಅದು ಹೆಬ್ಬಾಗಿಲಾಗಿಯೇ ಉಳಿದಿದೆ. ಆದರೂ ಸರಕಾರಗಳಿಂದ ನಿರೀಕ್ಷಿತ ಮಟ್ಟದಲ್ಲಿ ‘ಸಹಕಾರ’ ಸಿಗುತ್ತಿಲ್ಲ.
ಅದಕ್ಕಾಗಿ ಸರಕಾರ ಏನು ಮಾಡಬೇಕು ಎಂದು ಬಯಸುತ್ತೀರಿ?
ಪಠ್ಯ ಪುಸ್ತಕದಲ್ಲಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ಅಳವಡಿಸಬೇಕು ಎಂದು ಅನೇಕ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಇದುವರೆಗೆ ಆ ಕೆಲಸ ಆಗಿಲ್ಲ. ಶಾಲಾ ಪಠ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ಅಳವಡಿಸಿದರೆ ಮುಂದೆ ತನ್ನಿಂತಾ ನಾಗಿಯೇ ಈ ಕ್ಷೇತ್ರದ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗುತ್ತದೆ. ಆಗ ಸರಕಾರವೂ ಈ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಲು ಮನಸ್ಸು ಮಾಡುತ್ತದೆ.
ಯಾವ ರೀತಿಯಲ್ಲಿ ಸಹಕಾರ ಸಂಘಗಳಿಗೆ ಶಕ್ತಿ ತುಂಬಬಹುದು?
ಹಿಂದೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಹಸು, ಕೃಷಿ ಉಪಕರಣಗಳನ್ನು ಸಹಕಾರ ಸಂಘಗಳ ಮೂಲಕ ರೈತರಿಗೆ ಶೇ. 25ರಿಂದ ಶೇ. 75ರಷ್ಟು ರಿಯಾಯಿತಿ ಪ್ರಮಾಣದಲ್ಲಿ ವಿತರಿಸಲಾಗುತ್ತಿತ್ತು. ಆದರೆ, ನಂತರದಲ್ಲಿ ಅದನ್ನು ತೆಗೆದು ಆಯಾ ಇಲಾಖೆಗಳ ಮೂಲಕವೇ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ಅದರ ಬದಲು ರೈತರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನೂ ಸಹಕಾರ ಸಂಸ್ಥೆಗಳಿಗೆ ವಹಿಸಿದರೆ ರೈತರೊಂದಿಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಇದರಿಂದ ರೈತರೂ ಬೆಳೆಯುತ್ತಾರೆ, ಸಹಕಾರ ಸಂಘಗಳೂ ಬೆಳೆಯುತ್ತವೆ.
ಸಹಕಾರ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರಕಾರ ಹೊಸ ಕಾಯಿದೆ ಜಾರಿಗೆ ತರುತ್ತಿದೆಯಲ್ಲಾ?
ಹೌದು, ಕೇವಲ ಕಾಯಿದೆ ಜಾರಿಗೆ ತಂದು ಸಹಕಾರ ಸಂಘಗಳನ್ನು ಪುನರುಜ್ಜೀವನಗೊಳಿಸಿದರೆ ಸಾಲದು. ಅದರ ಜತೆಗೆ ಈ ಸಹಕಾರ ಸಂಘಗಳಿಗೆ ಎಲ್ಲಾ ರೀತಿಯ ಶಕ್ತಿ ತುಂಬುವ ಕೆಲಸ ಆಗಬೇಕು. ಕೇವಲ ಕೇಂದ್ರ ಸರಕಾರ ಮಾತ್ರವಲ್ಲ, ರಾಜ್ಯ
ಸರಕಾರವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.