ಬಸವರಾಜ್ ಎಸ್. ಉಳ್ಳಾಗಡ್ಡಿ, ವಿಜಯಪುರ
ಮಳೆಗೆ ರೈತರ ಮೊಗದಲ್ಲಿ ಮಂದಹಾಸ
ಸಂಗಮನಾಥ ಗರ್ಭಗುಡಿ ಜಲಾವೃತ
ನಗರದ ಜನ ಜೀವನ ಅಸ್ತವ್ಯಸ್ಥ
ಸೋಮವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ಕೆರೆ, ಹಳ್ಳಕೊಳ್ಳಗಳು ಉಕ್ಕಿಹರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ನಗರದ ಹಲವಡೆ ಮನೆ, ಅಂಗಡಿಗಳಿಗೆ ಮಳೆನೀರು ನುಗ್ಗಿ, ರಸ್ತೆಗಳು, ಕಟ್ಟಡಗಳು, ವಾಹನಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಳಿಸಿದೆ.
ಕಳೆದ ವರ್ಷ ತೀವ್ರ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯ ರೈತರಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಒಳ್ಳೆಯ ಫಸಲು ಬರುವ ನಿರೀಕ್ಷೆಯಲ್ಲಿದ್ದಾರೆ. ಕಳೆದೊಂದು ವಾರದಿಂದ ಶಾಂತವಾಗಿದ್ದ ವರುಣದೇವ ಸೋಮವಾರ ರಾತ್ರಿಯಿಡಿ ಅಬ್ಬರಿಸಿದ್ದಾನೆ.
ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಮುಂದಿನ ನಾಲ್ಕೈದು ದಿನ ಇನ್ನೂ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಹಿಂಗಾರಿನಲ್ಲಿ ರೈತರು ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ, ಕಡಲೆ, ಗೋಧಿ ಹಾಗೂ ಇತರೆ ಬೆಳೆಗಳಿಗೆ ಅತ್ಯಗತ್ಯ ಸಂದರ್ಭದಲ್ಲೇ ಮಳೆಯಾಗಿ ಅನ್ನದಾತರಲ್ಲಿ ಬೆಳೆ ಕೈಹಿಡಿಯುವ ವಿಶ್ವಾಸ ಮೂಡಿದೆ. ರಾತ್ರಿಯಿಡಿ ಐದು ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಗುಡುಗು ಸಹಿತ ಕುಂಭದ್ರೋಣ ಮಳೆಗೆ ಜಿಲ್ಲೆಯ ಅನೇಕ ಕೆರೆ, ಹಳ್ಳಕೊಳ್ಳಗಳು ಉಕ್ಕಿ ಹರಿದು ಮಲೆನಾಡ ಮೈಸಿರಿ ಮೂಡಿಸಿದೆ.
ಇತ್ತ ಕಳೆದ ರಾತ್ರಿ ಒಂದೇ ದಿನ ಸುರಿದ ಭಾರಿ ಮಳೆಗೆ ಇಡಿ ಗುಮ್ಮಟನಗರಿ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ನಗರದ ವಾರ್ಡ್ ನಂ 6, 10, 11, 13, 14, 20, 24, 26, 33 ಹಾಗೂ 33 ಹಾಗೂ ಬಾಗವಾನ ಕಾಲೋನಿ, ಪ್ರೈಮ್ ನಗರ, ಕೆ.ಸಿ.ನಗರ, ಆಲಕುಂಟೆ ನಗರ, ಗಚ್ಚಿನಕಟ್ಟಿ ಕಾಲೋನಿಯ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಮನೆಯಿಂದ
ನೀರು ಎತ್ತಿ ಹೊರ ಹಾಕುವುದರಲ್ಲೇ ರಾತ್ರಿ ಕಳೆದಿದ್ದಾರೆ. ಇನ್ನೂ ರಾಮನಗರ, ರಾಜಾಜಿನಗರ ಮನಗೂಳಿ ಅಗಸಿ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳು, ಮನೆ,ಅಂಗಡಿ, ವಾಹನಗಳು ಜಲಾವೃತಗೊಂಡು ಜನ ನರಕಯಾತನೆ
ಅನುಭವಿಸಿದ್ದಾರೆ.
ಪ್ರತಿ ಬಾರಿ ಮಳೆಯಾದಾಗ ಸಂತಸ ಪಡುವ ಬದಲು ನಗರ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿ ನರಕಯಾತನೆ ಅನುಭವಿಸುವುದು ಸಾಮಾನ್ಯವಾಗಿದೆ. ಮಳೆಯಾದಗಷ್ಟೇ ತಾತ್ಕಾಲಿಕ ಪರಿಹಾರ ಕೈಗೊಳ್ಳುವ ಬದಲು ಜನಪ್ರತಿನಿಧಿ ಗಳು, ಅಧಿಕಾರಿಗಳು ಮಳೆಯಿಂದಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿ, ನಗರ ನಿವಾಸಿಗಳ ಸಂಕಷ್ಟ ಗಳಿಗೆ ಮುಕ್ತಿ ನೀಡುವ ಕೆಲಸ ಮಾಡಬೇಕು ಎಂದು ಸಿಟಿಜನ್ ಫಾರಂನ ಮುಖ್ಯಸ್ಥ ಮುನ್ನಾ ಭಕ್ಷಿ ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಬೆಳಿಗ್ಗೆ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ರಾತ್ರಿಯಿಡಿ ಮಳೆಯಿಂದ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ಧು ಭೇಟಿ ನೀಡಿ, ಪರೀಶೀಲಿಸಬೇಕು. ಸಂತ್ರಸ್ತ ಜನರ ನೆರವಿಗೆ ಧಾವಿಸಿ, ಜಿಲ್ಲೆಯ ಲ್ಲಾದ ಬೆಳೆಹಾನಿ, ಆಸ್ತಿಪಾಸ್ತಿ ನಷ್ಟದ ಕುರಿತು ಪ್ರಾಥಮಿಕ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ ಕಳೆದ ರಾತ್ರಿಯಾದ ಮಳೆಯಿಂದ ಜನ ಆತಂಕಪಡುವ ಅಗತ್ಯವಿಲ್ಲ, ಸರ್ಕಾರ ಸದಾ ಜನಹಿತ
ಕಾಯಲು ಬದ್ಧವಾಗಿದೆ ಎಂದು ಸಚಿವರು ಅಭಯ ಹೇಳಿದ್ದಾರೆ.
ಸಚಿವರ ಸೂಚನೆ ಬೆನ್ನಲ್ಲೇ ಡಿಸಿ, ಪಾಲಿಕೆ ಆಯುಕ್ತರು, ಮೇಯರ್, ಉಪಮೇಯರ್ ಮಳೆಯಿಂದ ಸಮಸ್ಯೆ ಎದುರಿಸುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಹಾರ ಕ್ರಮಕೈಗೊಳ್ಳಲು ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಕ್ರಮಕೈಗೊಳ್ಳುವಂತೆ ಡಿಸಿ ಟಿ.ಭೂಬಾಲನ್ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ – ಏನೇನು ಹಾನಿ
ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ 76 ಎಂಎಂ, ಇಂಡಿ ತಾಲೂಕಿನಲ್ಲಿ ಕನಿಷ್ಠ 7 ಎಂಎಂ, ವಿಜಯಪುರ ನಗರ ಸೇರಿದಂತೆ ವಿಜಯಪುರ ತಾಲೂಕಿನಲ್ಲಿ 40 ಎಂಎಂ ಮಳೆಯಾಗಿದ್ದು, ವಿಜಯಪುರ ನಗರದಲ್ಲಿ ವಿವಿಧೆಡೆ ನೀರು ನಿಂತಿರುವ ಪ್ರದೇಶಗಳಲ್ಲಿ ಪಾಲಿಕೆಯಿಂದ ಯಂತ್ರಗಳ ಮೂಲಕ ನೀರು ಹೊರ ಹಾಕುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 57 ಮನೆಗಳು ಭಾಗಶಃ ಹಾನಿಯಾಗಿವೆ. ಯಾವುದೇ ಸಂಪೂರ್ಣ ಮನೆಹಾನಿ, ಜನ-ಜಾನುವಾರ ಹಾನಿ ಸಂಭವಿಸಿರುವುದಿಲ್ಲ. 2000 ಹೆಕ್ಟೆರಷ್ಟು ಅಂದಾಜು ಬೆಳೆ ಹಾನಿಯಾಗಿದೆ. ಸಮೀಕ್ಷೆ ಕೈಗೊಂಡಿದ್ದು, ಸಮೀಕ್ಷೆ ಮುಗಿದ ನಂತರ ನಿಖರ ಮಾಹಿತಿ ದೊರೆಯಲಿದೆ. ಸೆ.25 ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಮನವಿ ಹಾಗೂ ಜಿ.ಪಂ ಕಾರ್ಯಾಲಯದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ, ಸಚಿವರ ನಿರ್ದೇಶನದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಡಿಸಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಇದನ್ನೂ ಓದಿ:Vijayapura News: ವಿಧ್ಯಾಭೂಷಣ ಪ್ರಶಸ್ತಿ ನೀಡಲಾಯಿತು- ಸುಭಾಷಚಂದ್ರ ನಾವಿ