ಹಿರಿ ಮನ್ಸೆ ಅಂತ ಒಳಿಕ್ ಬುಟ್ಕಳವತ್ಗೆ ಒಲೆ ಮುಂದೆ ಉಚ್ಚೆ ಉಯ್ದಿದ್ಲಂತೆ
ವಿಶೇಷ ವರದಿ: ವೆಂಕಟೇಶ ಆರ್.ದಾಸ್
ವಾರದಿಂದ ಕಾಣ್ದೆ ಇದ್ದ ಗುಡ್ದಳ್ಳಿ ಸೀನ, ಬೆಳ್ಳಂಬೆಳಗ್ಗೆ ಹಳ್ಳಿಕಟ್ಟೆ ಕಡಿಕ್ ಬಂದ್ ಕೂತ್ಕಂಡಿದ್ದ, ಅಪರೂಪದಂಗೆ ಹಳ್ಳಿಕಟ್ಟೆ ಮ್ಯಾಕ್ ಬಂದ ಸೀನನ್ ಕಂಡ ತುಂಡೈಕ್ಳೆಲ್ಲ ಸುತ್ಕಂಡ್ ನಿಂತ್ಕಂಡು, ಸೀನ ಹೇಳೋ ಸುಳ್ನೆಲ್ಲ ಕೇಳಿಸ್ಕತ್ತಾ ಇದ್ರು. ಪಟೇಲಪ್ಪ ವತ್ತಾರನೇ ಎದ್ದು ನೀರ್ ಕಡಿಕೆ ಅಂತ ಕೆರೆ ತಕ್ಕೋಗಿದ್ ಬತ್ತಿದ್ದನು, ಸೀನುನ್ ಪಟಾಲಂ ಕಂಡು ಹಳ್ಳಿಕಟ್ಟೆ ಕಡಿಕ್ ಬಂದ.
ಏನ್ಲಾ ಸೀನಾ, ಎಲ್ಲೋಗಿದ್ದೋ ನಾಲ್ಕೈದ್ ದಿನದಿಂದ ಕಾಣ್ತಾ ಇರ್ಲಿಲ್ಲ, ಇವತ್ತು ಇದ್ದಕ್ಕಿದ್ದಂಗೆ ಬಂದು, ಹುಡ್ಲು ನೆಲ್ಲ ಗುಡ್ಡಾಕಂಡು, ಏನೋ ಯವಾರ ನಡಿಸ್ತಿದ್ದೀಯಾ, ಏನ್ಲಾ ಸಮಾಚಾರ ಅಂದ ಪಟೇಲಪ್ಪ.
ಏನಿಲ್ಲ ಕಣ್ ಬಾ ದೊಡ್ಡಪ್ಪ, ನಾನು ವಾರದಿಂದ ಊರಲ್ಲಿ ಇರ್ನಿಲ್ಲ, ಬೆಳಗಾವಿನಲ್ ಅಽವೇಶನ ನಡೀತೈತಲ್ಲ ಅದ್ಕೆ ಆ ಕಡಿಕ್ ಹೋಗಿದ್ದೆ. ರಾತ್ರಿ ತಾನೇ ಬಂದ್ನಲ್ಲ, ಅದ್ಕೆ ಎಲ್ರುನೂ ಮಾತಾ ಡ್ಸುಮಾ ಅಂತ ಈ ಕಡಿಕ್ ಬಂದೆ. ಬಾ ದೊಡ್ಡಪ್ಪ ಕೂತ್ಕೋ, ಇಷ್ಟೊತ್ಗೆ ಹೋಗಿ ಎಲ್ಲೇನ್ ಗೆಣುಸ್ ಕೆತ್ತೀಯಾ, ದೊಡ್ಡವ್ವ ನಿಂಗೆ ರೊಟ್ಟಿ ಬಡುದ್ ಕೊಡೊದು ಇನ್ನೂ ಲೇಟಲ್ವೇ ಅಂದ ಸೀನ.
ಊ ಕನ್ ತಗಳ್ಲಾ, ನಿಮ್ ದೊಡ್ಡವ್ವ ಮಾಡದು ಹಂಗೆಯಾ ನೀನ್ ಅಣುಕ್ಸದು ಹಂಗೆಯಾ, ಆ ಬಡ್ಡಿ ನಂಗೊ ಟ್ಟೆಗ್ ಹಾಕೋವತ್ಗೆ ಏಳ್ ಮಧ್ಯಾಹ್ನ ಆಯ್ತದೆ. ಅದ್ಕೆ, ಪದ್ದಕ್ಕನ್ ಹೋಟ್ಲಲ್ಲೇ ಎಲ್ಡ್ ಇಡ್ಲಿ ತಂದ್ಕಂಡ್ ಹೋಗಿರ್ತೀನಿ ನಾನು ಕಣ್ ತಗಾ, ಅದ್ಕಂಡು ಕಟ್ಟೆ ಮೇಲ್ ಕೂತ್ಕಂಡ ಪಟೇಲಪ್ಪ, ಏನ್ಲಾ ಯಾರ್ ಜತೆಗ್ಲಾ ಹೋಗಿದ್ದೆ ಬೆಳಗಾವಿಗೆ, ಹೆಂಗಿತ್ತಪ್ಪ ಸೆಷನ್ನು ಅಂದ ಪಟೇಲಪ್ಪ.
ನಾನು ಅಣ್ಣನ್ ಜತ್ಗೆ ಕಣ್ ದೊಡ್ಡಪ್ಪ, ಅಣ್ಣ ಸೆಷನ್ಗೆ ಹೋಯ್ತಿದ್ದೀನಿ ಕಣ್ಲಾ ಸೀನ, ಬತ್ತೀಯಾ ಹೆಂಗ್ಲಾ ನಂಗೂವೆ ಅಲ್ಲಿ ಕಂಪ್ನಿ ಕೊಡೋರ್ ಯಾರೂ ಇಲ್ಲ ಅಂದ್ರು, ಅದುಕ್ಕೆ ನಾನು ಹೋಗಿದ್ದೆ ಕಣಾ, ಅಲ್ಲಿ ಪಾಪ ಅಣ್ಣಂಗೆ ಎಲ್ಲ ಯವಸ್ಥೆ ಮಾಡ್ಬೇಕಲ್ಲ ಯಾರ್ ಮಾಡ್ತಾರೆ, ಅದ್ಕೆ ಹೋಗಿದ್ದೆ, ಸೆಷನ್ನು ಚೆನ್ನಾಗೈತೆ ಕಣ್ ದೊಡ್ಡಪ್ಪ, ಆದ್ರೆ, ಅಲ್ಲಿ ಉಂಡು ನಂಗೆ ವಸಿ ಕುಂಡಿಲ್ ಕಾರ ಕಿತ್ಕಳ್ಳಕ್ ಸುರುವಾಗ್ಯದೆ ಅಷ್ಟೇಯಾ ಅಂದ ಸೀನ.
ಉತ್ತರ ಕರ್ನಾಟಕದ್ ಖಾರ ತಿಂದ್ರೆ ಕುಂಡಿಲ್ ಕಿತ್ಕಳ್ಳದೆ ಕಣ್ ತಕಾ, ಅದೇನಪ್ಪ, ಸೆಷನ್ನು ಹೆಸ್ರಿಗೆ ಮಾತ್ರ ನಡುಸ್ತಾವ್ರೆ, ಒಬ್ರು ಎಮ್ಮೆಲ್ಲೆಗಳೇ ಬರುವೊಲ್ರು ಅಂತಿದ್ರು, ನಿಜ್ವೇ, ಅದ್ಯಾಕೆ ಪರಿಷತ್ತಲ್ಲಿ ವಸಿ ಜನ ಬಟ್ಟೆ ಹರ್ಕಂಡ್ ಕಿರುಚಾಡ್ತುದ್ರು? ಟೀವಿಲ್ ತೋರಿಸ್ತಿದ್ರಪ್ಪ, ಹೊರಟ್ಟಿ ಏನೋ ಎಲ್ರೂನೂ ಲಾಜಿಲ್ದೆ
ಹೊರಕ್ ಹಾಕ್ಯವ್ರೆ ಅಂತಾವ ಅಂದ ಪಟೇಲಪ್ಪ. ಊ ಕಣ್ ದೊಡ್ಡಪ್ಪ, ಹೊರಟ್ಟಿದು, ಈ ಎಲೆಕ್ಸನ್ನಲ್ಲಿ ಬಿಜೆಪಿ ಜಾಸ್ತಿ ಬತ್ತಿದ್ದಂಗೆ ಕುರ್ಚಿ ಹೋಯ್ತದೆ ಅಂತಿದ್ರು, ಮೈಸೂರಲ್ಲೊಬ್ಬ ಪುಣ್ಯಾತ್ಮ ಗೆದ್ದು ಹೊರಟ್ಟಿ ಕುರ್ಚಿಗೆ ಯಾವ್ ಸಂಚ್ಕಾರನೂ ಬರ್ದಂಗೆ ಮಾಡ್ಬುಟ್ಟ.
ಅದೇ ಖುಷೀಲಿ ಸಾಹೇಬ್ರು, ಕಾಂಗ್ರೆಸ್ನೋರು ಸ್ಟ್ರೈಕ್ ಮಾಡ್ತಿದ್ರೆ, ಎತ್ತಿ ಆಚೆ ಬಿಸಾಕವ್ರೆ, ಇದೇ ಲಾಸ್ಟ್ ವಾರ್ನಿಂಗು ಇನ್ನೊಂದ್ ಸಲ ಹಿಂಗಾಡಿದ್ರೆ ಸಸ್ಪೆಂಡ್ ಮಾಡ್ತೀನಿ ಎಂದಾವ್ರೆ ಅಂದ ಸೀನ. ಅದು ಸರೀ, ಕಣ್ ಬುಡ್ಲಾ, ಸ್ಪೀಕರ್ರು ಅಂದ್ಮೇಲೆ ಸರಕಾರದ್ ಕಡೀಕ್ ಇರ್ಲೇಬೇಕಲ್ವೇ, ಅದ್ರಲ್ಲೂ ಬಿಜೆಪಿ ಆಳೋ ಪಕ್ಸ ಆದ್ರೂ ಜೆಡಿಎಸ್ಗೆ ಸಭಾಪತಿ ಸ್ಥಾನ ಕೊಟ್ಟವ್ರೆ, ಅದು ಹೊರಟ್ಟಿ ಹಿರಿತನದ್ ಮ್ಯಾಲೆ, ಜತ್ಗೆ ದ್ಯಾವೇಗೌಡ್ರು ಡೆಲ್ಲಿಗ್ ಹೋಗಿ ಲಾಭಿ ಮಾಡಿದುಕ್ಕೆ, ಅಂತದ್ರಲ್ಲಿ, ಪರಿಸ್ಥಿತಿ ಕೈ ಮೀರಿ, ಬಿಜೆಪಿಗೆ ಬಹುಮತ ಬಂದ್ರೆ ಕುರ್ಚಿ ಖಾಲಿ ಮಾಡ್ಬೇಕಿತ್ತು, ಈಗ್ಲೂ ಮನಸ್ ಮಾಡಿದ್ರೆ, ಮಾಡುಸ್ಬೋದು.
ಆದ್ರೆ, ಯಾಕೆ ಅಂತ ಸುಮ್ನಾಗವ್ರೆ, ಅದಕ್ಕೆ ಸರಕಾರದ್ ಕಡಿಕ್ ಒಂಚೂರ್ ನqಂಡೈತೆ ಬುಡು, ಕಾಂಗ್ರೆಸ್ನೋರೆಲ್ಲ ಯಾಕ್ಲಾ ಟ್ರಾಕ್ಟ್ರು ಹತ್ಕೊಂಡ್ ಬತ್ತೀದ್ರಲ್ಲ ಅಂದ ಪಟೇಲಪ್ಪ. ದೊಡ್ಡಪ್ಪ, ಹೊರಟ್ಟಿ ನಮನ್ನೆಲ್ಲ ಹೊರಗಾಕ್ಯವ್ರೆ, ಇದಕ್ಕೆಲ್ಲ ಏನಾದ್ರೂ ಹೊಸ ಸ್ಟೈಲಲ್ಲಿ ಪ್ರತಿಭಟನೆ ಮಾಡ್ಬೇಕಲ್ಲ ಅಂತ ಎಂಎಲ್ಸಿಗಳೆಲ್ಲ ಸಿದ್ರಾಮಣ್ಣನ್ ಹತ್ರ ಹೇಳಿದ್ರಂತೆ, ಅದ್ಕೆ ಸಿದ್ರಾಮಣ್ಣ, ಆಯ್ತು ಬುಡ್ರೋ, ನಾಳೆ ನಾವೆಲ್ಲ ಟ್ರ್ಯಾಕ್ಟ್ರು ಮ್ಯಾಲೆ ಹೋಗಿ ಪ್ರೊಟೆಸ್ಟ್ ಮಾಡನಾ, ಹೆಂಗೂ ರೈತ್ರು ಸ್ಟ್ರೈಕ್ಗೆ ಕೈ ಜೋಡಿಸ್ದಂಗಾಯ್ತದೆ, ನಮ್ದು ಪ್ರೊಟೆಸ್ಟ್ ಆಯ್ತದೆ ಅಂತ ಹೇಳಿತ್ತಂತೆ ಅದುಕ್ಕೆ ಎಲ್ರೂ ಟ್ರ್ಯಾಕ್ಟ್ರು ಮ್ಯಾಲ್ ಬಂದು ಸುವರ್ಣ ಸೌಧದ್ ಮುಂದೆ ನಿಂತ್ಕಂಡು ಜೈಕಾರ ಹಾಕಿದ್ರು ಅಂದ ಸೀನ.
ಇದು ಅನ್ನು ಇಸ್ಯ, ನಾನೆಲ್ಲೋ ರೈತರ್ ಪರವಾಗಿ ಏನಾದೆರೂ ಸ್ಟ್ರೈಕ್ ಮಾಡಿದ್ರೇನೋ ಅಂದ್ಕಂಡೆ, ಅಷ್ಟುಕ್ಕೂ ಈ ರಮೇಶ್ ಕುಮಾರ್ ಯಾಕಪ್ಪ ಹಂಗೆಲ್ಲ ಮಾತಾಡ್ಬೇಕಿತ್ತು ಸೀನಾ, ಹಿರಿ ಮನ್ಸೆ ಹಿರಿ ಮನ್ಸೆ ಅಂತ ಒಳಿಕ್ ಬುಟ್ಕಳವತ್ಗೆ ಒಲೆ ಮುಂದೆ ಉಚ್ಚೆ ಉಯ್ದಿದ್ಲಂತೆ ಅನ್ನಂಗೆ ಮಾಜಿ ಸ್ಪೀಕರ್ರು, ಊರ್ಗೆಲ್ಲ ಬೋಧನೆ ಮಾಡೋರು ಇಂಥ ಮಾತ್ನಾ ಹೇಳದು ಅಂದ ಪಟೇಲಪ್ಪ. ಊ ಕಣ್ ದೊಡ್ಡಪ್ಪ, ಅವಯ್ಯ ಆಗಾಗ ಇಂಥ ಮಾತ್ನ ಆಡ್ತಿರ್ತದೆ,
ಏನಾದ್ರೂ ವಿವಾದ ಆದ್ರೆ ಸಾಕು, ಕುಯ್ಯೋ ಮರ್ರೋ ಅಂದ್ಕಂಡು, ಕ್ಷಮೆ ಕೇಳದು, ಅದುಕ್ಕೆ ಹಿಂದಿನ್ ವಸಿ ಕತೆಗಳ್ ಹೇಳಿ, ಭಾವುಕರಾಗೋದ್ನೆ ರೂಢಿ ಮಾಡ್ಕಂಡದೆ. ಹಿಂದೊಂದ್ ಸಲ ಇದೇ ಥರಾ ರೇಪು ಅಂತ ಮಾತಾಡಿತ್ತು.
ಆಗ ಇಷ್ಟೊಂದ್ ಏನ್ ಕತೆ ದೊಡ್ದಾ ಗಿರ್ಲಿಲ್ಲ ಬುಡು, ಈ ವಯ್ಯಂಗೆ ರೇಪು ಅಂದ್ರೆ ನಿಮ್ಕಡೆ ರೇಪಲ್ಲ ಸ್ವಾಮಿ, ನಿಮ್ ರೇಪೇ ಬ್ಯಾರೆ, ಈ ರೇಪೇ ಬ್ಯಾರೆ ವಸಿ ನೋಡ್ ಮಾತಾಡಿ ಅಂತ ಯಾರಾರು ಬುದ್ದಿ ಹೇಳ್ಬೇಕು ಅಂದ ಸೀನ. ಅವ್ರು ಬಲ್ ಬುದ್ವಂತ್ರು ಕಣ್ ಬುಡ್ಲಾ, ಅವ್ರಿಗ್ಯಾರ್ ಬುದ್ದಿ ಹೇಳ್ತಾರೆ, ನೋಡೀಗ, ಇಡೀ ದೇಸ್ದಲ್ಲೇ ಕರ್ನಾಟಕದಲ್ಲಿ ಇಂಥ ರಾಜ್ಕಾರಣಿಗಳ್ ಅವ್ರ ಅಂಥ ಮಾತಾಡಂಗೆ ಆಗೋಗ್ಯದೆ. ಅದೇನಪ್ಪ, ಹಿಂದೆ ಕರ್ನಾಟಕ ಅಂದ್ರೆ ದೇಸಕ್ಕೆಲ್ಲ ಮಾದ್ರಿ ಆಗಿತ್ತು. ಈಗ ಅದುನ್ನ ಉಲ್ಟಾ ಮಾಡೋಕ್ ನಿಂತಾವ್ರೆ, ಅದ್ಯಾವಾಗ್ ಇವ್ರೆಲ್ಲ ಬುದ್ದಿಕ್ಲತಕ್ಕತ್ತರೋ ನಾ ಕಾಣೆ ಕಣ್ ಹೋಗು ಅಂದವ್ನೇ ಎದ್ದು ಮನೆಕಡಿಕ್ ಹೊಂಟ ಪಟೇಲಪ್ಪ, ದೊಡ್ಡಪ್ಪೋ ನಾನು ಬತ್ತೀನ್ ತಡೀ, ದೊಡ್ಡವ್ವ ರೊಟ್ಟಿ ಹಾಕಿದ್ರೆ ಎಲ್ಡ್ ರಾಗಿ ರೊಟ್ಟಿ ತಿನ್ಬೇಕು, ಬರೀ ಜೋಳದ್ ರೊಟ್ಟಿ ತಿಂದ್ ಬ್ಯಾಸ್ರ ಬಂದದೆ ನಂಗೆ ಬೆಳ್ಗಾವಿಲಿ ಅಂತ ಪಟೇಲಪ್ಪನ್ ಹಿಂದೇನೆ ಹೊಂಟ ಸೀನ.