ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ
ಮತಾಂತರಗೊಂಡವರ ಮೀಸಲು ರದ್ದು ಕುರಿತೂ ನಿರ್ಣಯ
ವಿಶೇಷ ವರದಿ: ಪ್ರದೀಪ್ ಕುಮಾರ್ ಬೆಂಗಳೂರು
ರಾಜ್ಯದಲ್ಲಿ ಬಲವಂತದ ಮತಾಂತರ ನಿಷೇಧಿಸುವ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ವಿಧೇಯಕ -2021’ನ್ನು ಸರಕಾರ ಈ ಅಧಿವೇಶನದಲ್ಲಿ ಮಂಡಿಸುವುದು ಖಚಿತವಾದರೂ ಉಭಯ ಸದನಗಳ ಒಪ್ಪಿಗೆ ಪಡೆಯುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ.
ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆಯಾದರೂ ವಿಧಾನ ಪರಿಷತ್ತಿನಲ್ಲಿ ಇನ್ನೂ ಬಹುಮತ ಬಂದಿಲ್ಲ. ಈ ಮಧ್ಯೆ ಜೆಡಿಎಸ್, ತಾನು ವಿಧೇಯಕ ವನ್ನು ವಿರೋಧಿಸುವುದಾಗಿ ಹೇಳಿದೆ. ಹೀಗಾಗಿ ಮೇಲ್ಮನೆಯಲ್ಲಿ ವಿಧೇಯಕ ಅಂಗೀಕಾರವಾಗುವುದು ಜೆಡಿಎಸ್ ಸದನದಲ್ಲಿ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿದೆ. ಒಂದೊಮ್ಮೆ ವಿಧಾನಸಭೆಯಲ್ಲಿ ಅಂಗೀಕಾರ ಗೊಂಡು, ವಿಧಾನ ಪರಿಷತ್ತಿನಲ್ಲಿ ತಿರಸ್ಕೃತವಾದರೂ ಆಡಳಿತಾರೂಢ ಬಿಜೆಪಿಗೆ ರಾಜಕೀಯವಾಗಿ ದೊಡ್ಡ ಸಮಸ್ಯೆ ಏನೂ ಆಗುವುದಿಲ್ಲ. ಇದನ್ನು ತಿಳಿದೇ ಬಿಜೆಪಿ, ಈ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಬಿಜೆಪಿ ಸ್ಪಷ್ಟ ತೀರ್ಮಾನಕ್ಕೆ ಬಂದಿದೆ.
ಸಂಪುಟ ಸಭೆ ನಾಳೆ: ಸೋಮವಾರ ಮಧ್ಯಾಹ್ನ 1.30ಕ್ಕೆ ಸಚಿವ ಸಂಪುಟ ಸಭೆಯನ್ನು ಸಿಎಂ ಬೊಮ್ಮಾಯಿ ಕರೆದಿದ್ದಾರೆ. ಇಲ್ಲಿ ಬಲವಂತದ ಮತಾಂತರ ನಿಷೇಧಿಸುವ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ವಿಧೇ ಯಕ- ೨೦೨೧’ ಕುರಿತು ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು. ಬಹುತೇಕ ಬುಧವಾರ ವಿಧೇಯಕವನ್ನು ವಿಧಾನಸಭೆ ಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಅಧಿವೇಶನ ಆರಂಭವಾದ ಬಳಿಕ ಗೃಹ ಸಚಿವರು ಮತ್ತು ಕಾನೂನು ಸಚಿವರು ಎರಡೂ ಇಲಾಖೆ ಹಿರಿಯ ಅಽಕಾರಿಗಳ ಜತೆ ವಿಧೇಯಕದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ವಿಧೇಯಕದಲ್ಲಿ ಯಾವೆಲ್ಲ ಅಂಶ ಸೇರಿಸಬೇಕು ಎಂಬ ಬಗ್ಗೆ ಚರ್ಚಿಸಿ, ಕರಡು ವಿಧೇಯಕ ಸಿದ್ಧಪಡಿಸಲಾಗಿದೆ. ಸಂಪುಟ ಸಭೆ ಯಲ್ಲಿ ಚರ್ಚಿಸಿದ ಬಳಿಕ ವಿಧೇಯಕ ಸಿದ್ಧವಾಗಲಿದೆ.
ವಿಧೇಯಕ ಒಪ್ಪಿಗೆಯಾಗದಿದ್ದರೂ ರಾಜಕೀಯ ಲಾಭ: ವಿಧಾನಸಭೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆಯಬಹುದಾದರೂ ಮೇಲ್ಮನೆಯಲ್ಲಿ ಬಹುಮತವಿಲ್ಲದ ಕಾರಣ ತರಾತುರಿಯಲ್ಲಿ ವಿಧೇಯಕ ಮಂಡಿಸುವುದು ಬೇಡ. ಜ.೫ರ ನಂತರ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ೩೭ಕ್ಕೇರುತ್ತದೆ. ಜತೆಗೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಂಬಲ ಪಡೆದು ವಿಧೇಯಕಕ್ಕೆ ಒಪ್ಪಿಗೆ ಪಡೆಯಬಹುದು.
ಹೀಗಾಗಿ ಮುಂದಿನ ಅಧಿವೇಶನದಲ್ಲಿ ಮಂಡಿಸೋಣ ಎಂದು ಬಿಜೆಪಿಯ ಕೆಲ ಶಾಸಕರು ಸಲಹೆ ನೀಡಿದ್ದರು. ಆದರೆ, ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸುವುದಾಗಿ ಘೋಷಣೆ ಮಾಡಿದ್ದರಿಂದ ಅಂತಿಮ ಕ್ಷಣದಲ್ಲಿ ಹಿಂದೆ ಸರಿದರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಅದರ ಬದಲು ವಿಧೇಯಕ ಮಂಡಿಸಿ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆಯೋಣ.
ಜೆಡಿಎಸ್ ಸಭಾತ್ಯಾಗ ಮಾಡದಿದ್ದರೆ ವಿಧಾನ ಪರಿಷತ್ತಿನಲ್ಲಿ ವಿಧೇಯಕವನ್ನು ಮತಕ್ಕೆ ಹಾಕುವುದು ಬೇಡ. ಹೇಗೂ ವಿಧಾನಸಭೆಯಲ್ಲಿ ವಿಧೇಯಕಕ್ಕೆ
ಒಪ್ಪಿಗೆ ಸಿಗುವುದರಿಂದ ರಾಜಕೀಯ ಲಾಭ ಪಡೆಯಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು, ಶಾಸಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೀಸಲು ರದ್ದು ಕುರಿತು ಸಂಪುಟದಲ್ಲಿ ನಿರ್ಧಾರ: ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರ ಗೊಳ್ಳುವವರಿಗೆ ಮೀಸಲಾತಿ ರದ್ದು ಗೊಳಿಸುವ ಕುರಿತು ಕರಡು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಆದರೂ ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತೀರ್ಮಾನಿಸಲಾಗಿದೆ.
ಮೀಸಲಾತಿ ಸಂವಿಧಾನ ಬದ್ಧವಾದ ಅಂಶ. ಈ ಬಗ್ಗೆ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೈಗೊಳ್ಳಬೇಕು. ಮತಾಂತ ರಗೊಂಡವರಿಗೆ ಮೀಸಲು ರದ್ದು ಗೊಳಿಸುವ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿಲ್ಲದ ಕಾರಣ ನಂತರದಲ್ಲಿ ನ್ಯಾಯಾಲಯದಲ್ಲಿ ಸಮಸ್ಯೆ ಆಗಬಹುದು. ಈ ಕಾರಣಕ್ಕಾಗಿ ಮೀಸಲು ರದ್ದು ಕುರಿತು ಕಾನೂನು ತಜ್ಞರಿಂದ ಸಲಹೆ ಕೇಳಲಾಗಿದೆ. ಅವರ ಸಲಹೆ ಆಧರಿಸಿ ಈ ಅಂಶವನ್ನು ಸೇರಿಸಬೇಕೇ, ಬೇಡವೇ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಏನೇನಿರಲಿದೆ?
ಅದರ ಪ್ರಕಾರ ಪರಿಶಿಷ್ಟ ಜಾತಿ, ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಆಮಿಷಗಳನ್ನೊಡ್ಡಿ, ಮದುವೆಯಾಗಿ, ಇಲ್ಲವೇ ಬಲವಂತವಾಗಿ ಮತಾಂತರ ಮಾಡಿದರೆ ೩ರಿಂದ ೧೦ ವರ್ಷದವರೆಗೆ ಜೈಲು ಮತ್ತು ೨೫ರಿಂದ ೫೦ ಸಾವಿರ ರು.ವರೆಗೆ ದಂಡ, ಹಾಗೆಯೇ ಸಾಮೂಹಿಕ ಮತಾಂತರ ಮಾಡಿ ದರೆ ೩ರಿಂದ ೧೦ ವರ್ಷದವರೆಗೆ ಜೈಲು ಹಾಗೂ ಒಂದು ಲಕ್ಷ ರು. ವರೆಗೆ ದಂಡ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಜತೆಗೆ ಮತಾಂತರ ಮಾಡಬೇಕಾದರೆ ಹಲವು ಕಾನೂನು ಪ್ರಕ್ರಿಯೆಗಳನ್ನು ನಿಗದಿಪಡಿಸಲಾಗುತ್ತದೆ. ಯಾವುದೇ ವ್ಯಕ್ತಿ ಧರ್ಮ ಬದಲಿಸಲು ನಿರ್ಧರಿಸಿದರೆ ಆತನೇ ೬೦ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಜತೆಗೆ ಮತಾಂತರ ಮಾಡುವ ವ್ಯಕ್ತಿಯೂ ಅರ್ಜಿ ಸಲ್ಲಿಸಬೇಕು. ಬಳಿಕ ಜಿಲ್ಲಾಧಿಕಾರಿ ಗಳು ಇಬ್ಬರನ್ನೂ ಪೊಲೀಸರ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕು. ಈ ವೇಳೆ ಮತಾಂತರಗೊಳ್ಳುವ ವ್ಯಕ್ತಿ ಸ್ವಇಚ್ಛೆಯಿಂದ ನಿರ್ಧಾರ ಕೈಗೊಂಡಿದ್ದಾನೆ ಎಂದು ಖಚಿತವಾದರೆ ಮಾತ್ರ ಜಿಲ್ಲಾಧಿಕಾರಿಗಳು ಮತ ಬದಲಾವಣೆಗೆ ಸೂಚಿಸುತ್ತಾರೆ.
ಸದನದಲ್ಲಿದ್ದೇ ಹೋರಾಟ
ಮೇಲ್ಮನೆಯಲ್ಲಿ ಸರಕಾರಕ್ಕೆ ಬಹುಮತವಿಲ್ಲದ ಕಾರಣ ಸದನದಲ್ಲಿದ್ದೇ ವಿಧೇಯಕವನ್ನು ವಿರೋಧಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಜೆಡಿಎಸ್ ಕೂಡ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ವಿಧೇಯಕವನ್ನು ಮತಕ್ಕೆ ಹಾಕಿದಾಗ ವಿರೋಧಿಸಿದರೆ ಆಗ ವಿಧೇಯಕ ತಿರಸ್ಕೃತವಾಗಿ ಸರಕಾರ
ಮುಖಭಂಗ ಅನುಭವಿಸಬೇಕಾಗುತ್ತದೆ. ಒಂದೊಮ್ಮೆ ಜೆಡಿಎಸ್ ಸಭಾತ್ಯಾಗ ಮಾಡುವ ಮೂಲಕ ಪರೋಕ್ಷವಾಗಿ ಸರಕಾರವನ್ನು ಬೆಂಬಲಿಸಿದರೆ ಆಗ ರಾಜಕೀಯವಾಗಿ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಜತೆ ಗಟ್ಟಿಯಾಗಿ ನಿಲ್ಲುತ್ತದೆ. ಈ ಕಾರಣಕ್ಕಾಗಿ ಸರಕಾರ ವಿಧೇಯಕ ಮಂಡಿಸಿದರೆ ಸದನದಲ್ಲಿದ್ದೇ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.