ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಯಾವ ಆಸ್ತಿಗೆ ಎಷ್ಟು ತೆರಿಗೆ ಸಂಗ್ರಹಿಸಬೇಕು ಎನ್ನುವ ಹೊಸ ಅಧಿನಿಯಮ ಏ.೧ರಿಂದ ಜಾರಿ
ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಬಾಯಿಗೆ ಬಂದಂತೆ ಆಸ್ತಿ ತೆರಿಗೆ ವಸೂಲಿ ಮಾಡಿ ಜೇಬಿಗೆ ಬಿಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ. ದೇಶದ ಪ್ರಥಮ ಎನ್ನುವಂತೆ ಹಳ್ಳಿಗಳಲ್ಲಿ ಯಾವ ಆಸ್ತಿಗೆ ಎಷ್ಟು ತೆರಿಗೆ ಸಂಗ್ರಹಿಸಬೇಕು ಎನ್ನುವ ಹೊಸ ಅಧಿನಿಯಮವನ್ನು ಜಾರಿಗೊಳಿಸಲಾಗಿದ್ದು, ಇದು ಏಪ್ರಿಲ್ ೧ರಿಂದಲೇ ಅನ್ವಯವಾಗಲಿದೆ.
ಪಂಚಾಯಿತಿ ವ್ಯಾಪ್ತಿಯ ಎಲ್ಲ ರೀತಿಯ ಆಸ್ತಿಗಳಿಗೂ ಇನ್ನುಮುಂದೆ ಮನಸ್ಸಿಗೆ ಬಂದಂತೆ ತೆರಿಗೆ ವಸೂಲಿ ಮಾಡುವ ಬದಲು ಮಾರ್ಗಸೂಚಿ ದರ ಆಧರಿಸಿ ತೆರಿಗೆ ಸಂಗ್ರಹಿಸಬೇಕಾಗುತ್ತದೆ. ಯಾವ ಸ್ವರೂಪದ ಆಸ್ತಿಗಳಿಗೆ ಎಷ್ಟು ಆಸ್ತಿ ತೆರಿಗೆ ಪಿಡಿಒಗಳ ಬದಲು ಸರಕಾರವೇ ತೀರ್ಮಾನಿಸಿ ನಿಯಮಗಳ ಸೇರಿದೆ. ಇದನ್ನು ಸದ್ಯದ ಪಂಚತಂತ್ರ ೨ರಲ್ಲಿ ಸೇರಿಸಲಾಗುತ್ತಿದ್ದು, ಆಸ್ತಿಗಳಿಗೆ ವಿಧಿಸಬೇಕಾದ ತೆರಿಗೆಯನ್ನು ತಂತ್ರಾಂಶವೇ ಸ್ವಯಂ ಚಾಲಿತವಾಗಿ ಲೆಕ್ಕಾಚಾರ ಮಾಡಿ ಹೇಳಲಿದೆ.
ಇದಕ್ಕೆ ಸಂಬಂಧಿಸಿದಂತೆ ಸರಕಾರ ೩೦ ವರ್ಷಗಳ ನಂತರ ಹೊಸ ನಿಯಮಗಳನ್ನು ಒಳಗೊಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ ನಿಯಮ-೨೦೨೧ ಹೆಸರಿನಲ್ಲಿ ಅಧಿನಿಯಮ ರೂಪಿಸಿ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಇನ್ನುಮಂದೆ ಪಂಚಾಯಿತಿಗಳಲ್ಲಿ ಕಂದಾಯ ವಸೂಲಿಯಲ್ಲಿ ಪಿಡಿಒಗಳು, ಇಒಗಳು ಹಾಗೂ ಕರ ಸಂಗ್ರಹಗಾರರ ಆಟ ನಡೆಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏನಿದು ತೆರಿಗೆ ಕ್ಷೇತ್ರದ ಕ್ರಾಂತಿ?: ಈವರೆಗೂ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ತೆರಿಗೆ ನಿರ್ಧಾರಕ್ಕೆ ನಿಯಮವೇ ಇರಲಿಲ್ಲ. ಅಂದರೆ ಆಸ್ತಿಯನ್ನು ಬಾಡಿಗೆ ನೀಡಿದರೆ ಎಷ್ಟು ಹಣ ಬರುತ್ತದೆಯೋ ಅದರ ಶೇ.೧೦ಷ್ಟು ಹಣವನ್ನು ವಾರ್ಷಿಕ ಕಂದಾಯವಾಗಿ ಪಂಚಾಯಿತಿಗೆ ಪಾವತಿಸಬೇಕಿತ್ತು. ಈ ಬಾಡಿಗೆ ದರವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಧರಿಸುತ್ತಿದ್ದರು. ಆದರೆ ಇದು ಎಲ್ಲಿಯೂ ಪಾಲನೆಯಾಗುತ್ತಿರಲಿಲ್ಲ.
ಬದಲಾಗಿ ಪಿಡಿಒಗಳು ತಮಗೆ ಬೇಕಾದಷ್ಟು ತೆರಿಗೆ ವಿಧಿಸಿ ಸಂಗ್ರಹಿಸುತ್ತಿದ್ದರು. ಇದರಿಂದ ತೆರಿಗೆ ಸೋರಿಕೆ ವಿಪರೀತವಾಗಿತ್ತು. ಇದನ್ನು ತಡೆಯಲು
ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಕ್ರಾಂತಿಕಾರಿ ಕ್ರಮಕೈಗೊಂಡು, ಪ್ರಥಮ ಬಾರಿಗೆ ಹೊಸ ಅಧಿನಿಯಮ ಹೊರತಂದು ಕರ್ನಾಟಕವನ್ನು ನೆರೆ ರಾಜ್ಯಗಳಿಗೆ ಮಾದರಿಯಾಗುವಂತೆ ಮಾಡಿzರೆ.
ನಿಯಮಗಳ ಎ-P ಹೇಗಿರುತ್ತದೆ ?
ಈ ನಿಯಮ ಜಾರಿಯಿಂದ ಪಂಚಾಯಿತಿಗಳ ಆದಾಯ ಹೆಚ್ಚಾಗಲಿವೆ. ಸ್ವಂತ ಆದಾಯ ೫೦ಲಕ್ಷ ರು. ಕ್ಕಿಂತ ಕಡಿಮೆ ಇರುವ ಪಂಚಾಯಿತಿಗಳಿಗೆ ಸದ್ಯ ಸರಕಾರ ೧೨ಲಕ್ಷ ರು. ವರೆಗೂ ಅನುದಾನ ನೀಡುತ್ತಿದೆ. ಹೊಸ ನಿಯಮ ಜಾರಿಯಿಂದ ಪಂಚಾಯಿತಿಗಳು ೫೦ ಲಕ್ಷ ರು. ಆದಾಯ ದಾಟಲಿವೆ. ಹೀಗಾಗಿ ಈತನಕ ರಾಜ್ಯದಲ್ಲಿ ಪಂಚಾಯಿತಿಗಳ ಆಸ್ತಿ ತೆರಿಗೆ ಪ್ರಮಾಣ ವಾರ್ಷಿಕ ೫೦೦ ಕೋಟಿಗಳನ್ನು ದಾಟುವುದೂ ಕಷ್ಟವಾಗಿತ್ತು. ಈಗ ಒಟ್ಟಾರೆ ತೆರಿಗೆ
ಸಂಗ್ರಹ ಸುಮಾರು ೨,೦೦೦ ಕೋಟಿ ರು. ವರೆಗೂ ಹೆಚ್ಚಾಗಲಿದೆ ಎಂದು ಇಲಾಖೆ ಉಪ ನಿರ್ದೇಶಕ ಜಗದೀಶ್ ಕೆ.ಜಿ. ಹೇಳಿದ್ದಾರೆ.
ಯಾವ ಆಸ್ತಿಗೆ ಎಷ್ಟು ತೆರಿಗೆ ಇದೆ?
ಹೊಸ ನಿಯಮದ ಪ್ರಕಾರ, ಖಾಲಿ ನಿವೇಶನಗಳಿಗೆ ಮಾರ್ಗಸೂಚಿ ದರ ಶೇ.೧೦ರಷ್ಟು, ಆಪಾಟ್ ಮೆಂಟ್, ವಿಗಳು ಹಾಗೂ ಆರ್ಸಿಸಿ, ತಾರಸಿ ಕಟ್ಟಡಗಳಿಗೆ ಶೇ.೧೦ರಷ್ಟು, ಶೀಟ್, ರೆಡ್ ಆಕ್ಸೈಡ್ ಮತ್ತು ಮರದ ಕಟ್ಟಡಗಳಿಗೆ ಶೇ.೫ರಿಂದ ೭ ವರೆಗೂ ವಿಧಿಸಲಾಗಿದೆ. ಹಾಗೆಯೇ ಕೈಗಾರಿಕೆಗಳಿಗೆ ಅವುಗಳ ಪ್ರಮಾಣ ಮತ್ತು ಆಸ್ತಿ ಮೌಲ್ಯದ ಆಧಾರದ ಮೇಲೆ ಶೇ.೧೦ರಿಂದ ೪೦ ವರೆಗೂ ನಿಗದಿ ಮಾಡಲಾಗಿದೆ.
***
ರಾಜ್ಯ ಸರಕಾರ ಪ್ರಥಮ ಬಾರಿಗೆ ಆಸ್ತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ
ಆದಾಯ ಸೋರಿಕೆ ನಿಲ್ಲುತ್ತದೆ. ಪರಿಣಾಮ ಪಂಚಾಯಿತಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತವೆ. ಇದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿಯನ್ನೂ ನಿರೀಕ್ಷಿಸಬಹುದಾಗಿದೆ.
– ಎಲ್.ಕೆ.ಅತೀಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್ಡಿಪಿಆರ್ ಇಲಾಖೆ