ವಿಶ್ವವಾಣಿ ವಿಶೇಷ
ಇತರ ವಿಷಯಗಳಿಗಿಂತ ಮೊದಲು ಗಡಿ ಗದ್ದಲ ಚರ್ಚೆಗ ಆಗ್ರಹ
ಮತಾಂತರ ನಿಷೇಧ: ಇಂದು ಸಂಪುಟ ಸಭೆಯಲ್ಲಿ ನಿರ್ಧಾರ ?
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಳಗಾವಿ
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿಯೇ, ಬೆಳಗಾವಿಯಲ್ಲಿ ಭುಗಿಲೆದಿರುವ ಶಿವಾಜಿ- ರಾಯಣ್ಣ
ಮೂರ್ತಿ ಧ್ವಂಸದ ವಿವಾದ ಸೋಮವಾರ ಉಭಯ ಸದನದಲ್ಲಿ ಚರ್ಚೆಗೆ ಎತ್ತಲು ಪ್ರತಿಪಕ್ಷಗಳು ಸಜ್ಜಾಗಿದೆ.
ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಷಯಕ್ಕಾಗಿ ಕಾಯುತ್ತಿದ್ದ ಪ್ರತಿ ಪಕ್ಷಗಳಿಗೆ ಬೆಳಗಾವಿ ಗದ್ದಲ ಪ್ರಮುಖ ಅಸವಾಗಲಿದೆ. ಈಗಾಗಲೇ ಬೈರತಿ ಬಸವರಾಜ್ ಪ್ರಕರಣ, ಮತಾಂತರ ನಿಷೇಧ ಕಾಯಿದೆ, ಬಿಟ್ ಕಾಯಿನ್ ಸೇರಿ ದಂತೆ ಹಲವು ವಿಷಯಗಳಿದ್ದರೂ, ಅವುಗಳನ್ನಿಟ್ಟುಕೊಂಡು ಧರಣಿ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎನ್ನುವ ಆತಂಕವಿತ್ತು. ಆದರೆ ಇದೀಗ ಬೆಳಗಾವಿ ಗಲಾಟೆ ವಿಷಯ ದಲ್ಲಿ ಸರಕಾರದ ವಿರುದ್ಧ ಮಾತನಾಡಿದರೆ, ಈ ಸಂದೇಶ ರವಾನೆಯಾಗುವುದಿಲ್ಲ.
ಆದ್ದರಿಂದ ಈ ವಿಷಯವನ್ನಿಟ್ಟುಕೊಂಡೇ ಹೋರಾಟ ಮಾಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಮತಾಂತರ ನಿಷೇಧ ವಿಧೇಯಕ ಮಂಡಿಸುವ ಮೊದಲೇ, ಈ ಘಟನೆ ಕಾಂಗ್ರೆಸ್ಗೆ ಪ್ರಮುಖ ಅಸ್ತ್ರವಾಗಿದೆ. ಈ ವಿಷಯದಲ್ಲಿ ಸರಕಾರ ನಿರ್ಲಕ್ಯವನ್ನು ಎತ್ತಿ ಹಿಡಿದು ಇಕ್ಕಟ್ಟಿಗೆ ಸಿಲುಕಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ.
ಕ್ರೆಡಿಟ್ ಪಡೆಯಲು ಜೆಡಿಎಸ್ ಪ್ಲಾನ್: ಆದರೆ ಅಧಿವೇಶನ ಮೊದಲ ದಿನವೇ ಎಂಇಎಸ್ನ ಮಹಾ ಮೇಳವ್ ನಲ್ಲಿ ಕನ್ನಡ ಬಾವುಟ ಸುಟ್ಟ ಪುಂಡಾಟಿಕೆ ಯನ್ನು ಮೊದಲು ಕಲಾಪದಲ್ಲಿ ಗಮನ ಸೆಳೆದಿದ್ದು ಜೆಡಿಎಸ್ ಶಾಸಕ ಅನ್ನದಾನಿ ಅವರು. ಇದಾದ ಬಳಿಕವೇ ಈ ಎಲ್ಲ ಗದ್ದಲ ಗಲಾಟೆ ನಡೆದು ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದೆ. ಅನ್ನದಾನಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಹೋರಾಟಗಾರರಿಂದ ಪ್ರಶಂಸೆ ವ್ಯಕ್ತ ವಾಗಿದೆ. ಹೀಗಾಗಿ ಇದೀಗ ಈ ವಿಷಯದಲ್ಲಿ ಜೆಡಿಎಸ್ ಕ್ರೆಡಿಟ್ ಪಡೆಯಲು ಚಿಂತನೆ ನಡೆಸಿದೆ. ಒಂದು ವೇಳೆ ಕಾಂಗ್ರೆಸ್ ಈ ವಿಷಯವನ್ನು ನಿರ್ಲಕ್ಷ್ಯ ಮಾಡಿ ದರೆ ಸದನದಲ್ಲಿ ತಾವೇ ಮಂಡಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಬಿಜೆಪಿಯಿಂದ ವಿಪ್ ?
ಮತಾಂತರ ನಿಷೇಧ ಕಾಯಿದೆ ಸೇರಿ ವಿವಿಧ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಈಗಾಗಲೇ ಕಾಂಗ್ರೆಸ್ ವಿಪ್ ಜಾರಿ ಮಾಡಿರುವುದರಿಂದ ಬಿಜೆಪಿ ಯೂ ತನ್ನೆಲ್ಲ ಶಾಸಕರು ಕಲಾಪದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ವಿಪ್ ಹಾಕಲು ತೀರ್ಮಾನಿಸಿದ್ದು, ಸೋಮವಾರ ವಿಪ್ ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ನಾಳೆ ಸಿಎಲ್ಪಿ
ಈಗಾಗಲೇ ಕಾಂಗ್ರೆಸ್ ವಿಪ್ ಜಾರಿಮಾಡಿದ್ದು, ಪ್ರತಿಯೊಬ್ಬ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಲಾಗಿದೆ. ಆದರೂ ಮಂಗಳವಾರ ಮತ್ತೊಮ್ಮೆ ಶಾಸಕಾಂಗ ಸಭೆ ಕರೆದಿದ್ದು, ಈ ವೇಳೆ ಶಾಸಕರು ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಿದಾಗ ಯಾವ ರೀತಿ ವರ್ತಿಸಬೇಕು ಎನ್ನುವ ಸಂಬಂಧ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಡನೆಗೆ ಸೀಮಿತವಾಗಲಿರುವ ವಿಧೇಯಕ
ಇಡೀ ಅಧಿವೇಶನದಲ್ಲಿ ಮಹತ್ವಾಕಾಂಕ್ಷೆಯ ವಿಧೇಯಕ ಇರುವುದು ಮತಾಂತರ ನಿಷೇಧ ವಿಧೇಯಕವನ್ನು, ಸೋಮವಾರದ ಸಚಿವ ಸಂಪುಟ ಸಭೆ ಯಲ್ಲಿ ವಿಧೇಯಕ ಮಂಡಿಸಲು ಅನುಮೋದನೆ ನೀಡಿ, ಮಂಗಳವಾರದ ಕಲಾಪದಲ್ಲಿ ಮಂಡಿಸಲು ಸರಕಾರ ತೀರ್ಮಾನಿಸಿದೆ. ಆದರೆ ಮೂಲಗಳ ಪ್ರಕಾರ, ಈ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಿ ಚರ್ಚೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬಳಿಕ ಮುಂಬರಲಿರುವ ಬಜೆಟ್
ಅಧಿವೇಶನದಲ್ಲಿ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.