ಶಿವಕುಮಾರ್ ಬೆಳ್ಳಿತಟ್ಟೆ
ಬಿಜೆಪಿ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಸೇರದಂತೆ ತಂತ್ರ, ಜೆಡಿಎಸ್ನಲ್ಲಿ ಕ್ಷೇತ್ರ ತ್ಯಾಗದ ಬಗ್ಗೆ ಚರ್ಚೆ
ಬೆಂಗಳೂರು: ರಾಜ್ಯ ಪ್ರತಿಪಕ್ಷ ಬಿಜೆಪಿ ಒಳಗಿನ ಅಸಮಾಧಾನಗಳಿಗೆ ತೇಪೆ ಹಾಕುವ ಕೆಲಸ ನಡೆಯುತ್ತಿರುವಾಗಲೇ ಇತ್ತ ಚನ್ನಪಟ್ಟಣ ಉಪಚುನಾವಣಾ ರಾಜಕೀಯ ರಂಗೇರುತ್ತಿದೆ. ಕಾರಣ ಉಪ ಚುನಾವಣೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ತಾತ್ವಿಕ ವಾಗಿ ಒಪ್ಪಿಕೊಳ್ಳಲಾಗಿದೆ
ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿರುವ ಏಕೈಕ ಜೆಡಿಎಸ್ ಕ್ಷೇತ್ರವಾಗಿರುವ ಚನ್ನಪಟ್ಟಣವನ್ನು ಒಲ್ಲದ ಮನಸ್ಸಿನಲ್ಲಿ ಬಿಟ್ಟುಕೊಡುವ
ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ದೋಸ್ತಿ ಪಕ್ಷ ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ಸಿದ್ಧ ವಿದ್ದರೂ ಅಭ್ಯರ್ಥಿ ಕೊರತೆಯಿಂದ ಹಿಂದೆ ಸರಿಯುತ್ತಿದೆ.
ಇದನ್ನೂ ಓದಿ: Shivakumar Bellithatte story: ಪ್ರಾಸಿಕ್ಯೂಷನ್; ಸಿಎಸ್ಗೆ ರಾಷ್ಟ್ರಪತಿ ಸಂದೇಶ
ಅಂದರೆ ಬಿಜೆಪಿ ಈ ತನಕ ನಡೆಸಿರುವ ಸಮೀಕ್ಷೆಗಳಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಸಿ.ಪಿ.ಯೋಗೇಶ್ವರ್
ಕಣಕ್ಕಿಳಿಸಿದರೆ ಮಾತ್ರ ಗೆಲುವು ಎನ್ನುವ ಅಂಶ ವ್ಯಕ್ತವಾಗಿದೆ. ಹಾಗೆಯೇ ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಹೊರತಾಗಿ ಪುತ್ರ ಆಗಲಿ ಅಥವಾ ಮತ್ಯಾರೇ ಅಭ್ಯರ್ಥಿಯಾದರೂ ಗೆಲುವು ಸುಲಭವಲ್ಲ ಎನ್ನುವ ಮಾಹಿತಿಗಳು ಸಿಕ್ಕಿವೆ ಎನ್ನಲಾಗಿದೆ.
ಹೀಗಾಗಿ ಯಾರು ಸ್ಪರ್ಧಿಸಬೇಕು ಎನ್ನುವುದಕ್ಕಿಂತ ಗೆಲ್ಲುವುದು ಮುಖ್ಯ ಎನ್ನುವುದು ಬಿಜೆಪಿ ಮಂತ್ರವಾಗಿದ್ದು, ಯೋಗೇಶ್ವರ್ ಪರ ಒಲವು ತೋರಿದೆ ಎಂದು ಹೇಳಲಾಗಿದೆ. ಇದಕ್ಕೆ ರಾಜ್ಯಾಧ್ಯಕ್ಷರಿಂದಲೂ ಬೆಂಬಲ ದೊರೆತಿದೆ
ಎನ್ನಲಾಗಿದೆ. ಯೋಗೇಶ್ವರ್ ನೇತೃತ್ವದ ನಿಯೋಗ ಭೇಟಿ ಮಾಡಿದಾಗ ಟಿಕೆಟ್ ವಿಚಾರವಾಗಿ ಸಕಾರಾತ್ಮಕ ಸ್ಪಂದನೆ
ಸಿಕ್ಕಿರಲಿಲ್ಲ. ಇದರಿಂದ ಸಿಟ್ಟಾಗಿದ್ದ ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸಲಿ ಎಂದು ಹೇಳಿ ಸುಮ್ಮನಾ ಗಿದ್ದರು. ಆದರೆ ಯೋಗೇಶ್ವರ್ ಈಗಾಗಲೇ ಒಂದು ಸುತ್ತು ಪ್ರಚಾರ ಕಾರ್ಯ ಮುಗಿಸಿ ಸ್ಪರ್ಧೆಗೆ ಎಲ್ಲಾ ಸಿದ್ಧತೆ ಪೂರೈಸಿರುವುದರಿಂದ ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸೇರಿದರೆ ಕ್ಷೇತ್ರ ಕೈ ತಪ್ಪುತ್ತದೆ ಎನ್ನುವ ಆತಂಕ
ಬಿಜೆಪಿಯದಾಗಿದೆ. ಈ ಭೀತಿ ಜೆಡಿಎಸ್ ನಾಯಕರಿಗೂ ಇದೆ. ಆದ್ದರಿಂದ ಈ ಬಾರಿ ದೋಸ್ತಿ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕಿಳಿಸುವುದೇ ಸರಿ ಎನ್ನುವ ಗಂಭೀರ ಚಿಂತನೆಯಲ್ಲಿ ಎರಡೂ ಪಕ್ಷದ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಒಂದೊಮ್ಮೆ ಯೋಗೇಶ್ವರ್ಗೆ ಟಿಕೆಟ್ ನೀಡುವುದಾದರೆ, ಜೆಡಿಎಸ್ ಕೆಲವು ಕಠಿಣ ಷರತ್ತು ವಿಧಿಸುವ ಸಾಧ್ಯತೆ
ಇದೆ. ಅಂದರೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್ಗೆ ನೀಡಬೇಕು. ಹಾಗೆಯೇ ಪಕ್ಷಕ್ಕೆ ಬೆಂಬಲ ನೀಡಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಬಾರದು ಎನ್ನುವ ಷರತ್ತು ಹಾಕುವ ಸಂಭವವಿದೆ. ಇಂಥ ಅನೇಕ ಷರತ್ತು ಯೋಗೇಶ್ವರ ಒಪ್ಪಿದರಷ್ಟೇ ಮೈತ್ರಿ ಟಿಕೆಟ್ ಲಭಿಸುವ ಸಾಧ್ಯತೆ ಇರುತ್ತದೆ. ಇಲ್ಲವಾದರೆ, ಕುಮಾರ ಸ್ವಾಮಿ ಹೇಳಿದವರೇ ಅಭ್ಯರ್ಥಿ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
ಜೆಡಿಎಸ್ ಆತಂಕವೇನು
ಒಂದು ವೇಳೆ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಿದರೆ, ಯೋಗೇಶ್ವರ್ ಅಸಹಕಾರ ನೀಡಬಹುದು ಅಥವಾ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಬಹುದು ಎನ್ನುವ ಆತಂಕವಿದೆ. ಮಂಡ್ಯ ಲೋಕಸಭೆ ಹಾಗೂ ರಾಮನಗರ
ವಿಧಾನಸಭೆಯಲ್ಲಿ ಸೋಲನುಭವಿಸಿರುವ ನಿಖಿಲ್ ಮತ್ತೆ ಚನ್ನಪಟ್ಟಣದಲ್ಲೂ ಸೋಲುಂಡರೆ ರಾಜಕೀಯ ಭವಿಷ್ಯ ಏನಾಗುವುದೋ ಎನ್ನುವ ಭೀತಿಯೂ ಇದೆ. ಹೀಗಾಗಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವ ಕಾರಣ ಅವರ ಪ್ರಭಾವದ ಕ್ಷೇತ್ರವಾಗಿರುವ ರಾಮಗರ, ಮಂಡ್ಯ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಕಣಕ್ಕಿಳಿಸಬಹುದು ಎನ್ನುವ ಸಲಹೆ ರೂಪದ ವಾದವನ್ನು ಬಿಜೆಪಿ ನಾಯಕರು ಜೆಡಿಎಸ್ ಮುಂದೆ ಮಂಡಿಸಿದ್ದಾರೆ ಎನ್ನಲಾಗಿದೆ.
*
ಒಂದೊಮ್ಮೆ ನನಗೆ ಟಿಕೆಟ್ ನೀಡದೆ ಕಾಂಗ್ರೆಸ್ ಗೆದ್ದರೆ ಆಗ ಎರಡೂ ಪಕ್ಷಗಳೂ ಸೋತಂತಾಗುತ್ತದೆ. ಅದ್ದರಿಂದ ನಾನು ಸ್ಪರ್ಧೆ ಮಾಡಲೇಬೇಕಿದೆ. ಆದ್ದರಿಂದ ನನಗೆ ಟಿಕೇಟ್ ಸಿಗದಿದ್ದರೂ ಸ್ಪರ್ಧಿಸುತ್ತೇನೆ.
-ಸಿ.ಪಿ.ಯೋಗೇಶ್ವರ್, ಮಾಜಿ ಸಚಿವ, ಬಿಜೆಪಿ ಮುಖಂಡ