ಸಂದರ್ಶನ: ಕಾವ್ಯ ಬಿ.ಕೆ., ದಾವಣಗೆರೆ
ಹರಿಹರದ ಪಂಚಮಸಾಲಿ ಮಠದಲ್ಲಿ ಹರ ಜಾತ್ರೆಯ ಅಂಗವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ಈ ಬಾರಿ ಏ೨೩ರಂದು ಪಂಚಮಸಾಲಿ ಸಮಾಜದ ವೀರ ಸೇನಾನಿಗಳಿಗೆ ಗೌರವ ಮತ್ತು ಏ.೨೪ರಂದು ಬೃಹತ್ ಉದ್ಯೋಗ ಮೇಳವನ್ನು ಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ರಾದ ಶ್ವಾಸಗುರು ವಚನಾನಂದ ಸ್ವಾಮೀಜಿಗಳು ‘ವಿಶ್ವವಾಣಿ’ಯೊಂದಿಗೆ ಈ ಕುರಿತು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಮಠಗಳಲ್ಲಿ ತ್ರಿವಿಧ ದಾಸೋಹ ನಡೆಯುತ್ತಿತ್ತು. ಈಗ ನೀವು ಉದ್ಯೋಗ ದಾಸೋಹಕ್ಕೆ ಮುನ್ನುಡಿ ಬರೆದಿದ್ದೀರಿ. ಈ ಪರಿಕಲ್ಪನೆ ಹೇಗೆ ಬಂತು?
ನಾಡಿನ ಎಲ್ಲ ಮಠಗಳಲ್ಲಿ ತ್ರಿವಿಧ ದಾಸೋಹ (ಅನ್ನ, ವಸತಿ, ಅಕ್ಷರ) ನಡೆಯುತ್ತದೆ. ಲಕ್ಷಾಂತರ ಜನರು ಅದನ್ನು ಪಡೆದು ಕೊಂಡು ಬದುಕಲ್ಲಿ ಯಶಸ್ವಿಯಾಗಿದ್ದಾರೆ. ಉದ್ಯೋಗ ದಾಸೋಹದ ಕಲ್ಪನೆ ಬಂದಿದ್ದು ಹೇಗೆಂದರೆ ಕರೋನಾ ನಂತರದ ಕಾಲ
ದಲ್ಲಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿರುವುದನ್ನು ಕಂಡು ನೋವಾಗಿತ್ತು. ಅದಕ್ಕಾಗಿ ಯುವಕರಿಗೆ ಉದ್ಯೋಗ ಕೊಡಿಸುವ ಬಗ್ಗೆ ಸಚಿವರಾದ ಮುರುಗೇಶ್ ನಿರಾಣಿ, ಅಶ್ವಥ್ ನಾರಾಯಣ ಅವರೊಂದಿಗೆ ಚರ್ಚಿಸಿದಾಗ ಬೃಹತ್ ಉದ್ಯೋಗ ಮೇಳಕ್ಕೆ ಸಹಕಾರ ಕೊಡುವುದಾಗಿ ಭರವಸೆ ನೀಡಿದರು. ಅವರ ಸಹಕಾರದಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಉದ್ಯೋಗ ಮೇಳದಲ್ಲಿ ಎಷ್ಟು ಜನರಿಗೆ ಕೆಲಸ ಕೊಡಿಸುವ ಗುರಿ ಇದೆ? ಇದು ಹೀಗೆ ಮುಂದುವರಿಯಲಿದೆಯಾ?
ಉದ್ಯೋಗ ಮೇಳವನ್ನು ಕೇವಲ ಪಂಚಮಸಾಲಿ ಸಮಾಜಕ್ಕಷ್ಟೇ ಅಲ್ಲದೇ ಜಾತ್ಯತೀತವಾಗಿ ಆಯೋಜಿಸಲಾಗಿದೆ. ಈ ವರ್ಷ ೫ ಸಾವಿರ ಯುವಕ-ಯುವತಿಯರಿಗೆ ಉದ್ಯೋಗ ಕೊಡಿಸುವ ಪರಿಕಲ್ಪನೆ ಇದೆ. ಇದು ಪ್ರತಿವರ್ಷ ಮುಂದುವರಿಯಲಿದೆ.
ಉದ್ಯೋಗ ದಾಸೋಹದಂತೆ ಮತ್ತೆ ಇದೇ ರೀತಿಯ ಹೊಸ ಕಲ್ಪನೆಗಳೇನಾದರೂ ಇವೆಯಾ?
ಮುಂದೆ ಆರೋಗ್ಯ ದಾಸೋಹ ಮಾಡುವ ಗುರಿ ಇದೆ. ಅಂದರೆ ಈಗಿನ ಯುವಜನಾಂಗಕ್ಕೆ ಯಾವುದೇ ಇಸಂ ತಲೆಯೊಳಗೆ ಹೋಗ ದಂತೆ ಅವರಿಗೆ ಸಂಪ್ರದಾಯವಾದ, ಪ್ರಗತಿವಾದಕ್ಕಿಂತ ವಾಸ್ತವವಾದ ಮುಖ್ಯ ಎನ್ನುವುದನ್ನು ಆ ಮೂಲಕ ತಿಳಿಸಬೇಕೆನ್ನುವ ಉದ್ದೇಶದಿಂದ ಯೋಗವನ್ನು ಎಲ್ಲರಿಗೂ ಕಲಿಸಬೇಕೆನ್ನುವ ಗುರಿ ಇದೆ. ಯೋಗದ ಮೂಲಕ ದೈಹಿಕವಾಗಿ, ವೈಚಾರಿಕವಾಗಿ ಸ್ವಸ್ಥ್ಯ ಮಾಡಬೇಕೆನ್ನುವ ಪರಿಕಲ್ಪನೆ ಇದೆ. ಮಕ್ಕಳಿಗೆ ರಾಷ್ಟ್ರಪ್ರೇಮ ಬೀಜ ಬಿತ್ತಬೇಕಿದೆ. ಅದನ್ನು ಬಿತ್ತಲು ಹಾಗೂ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ವಾಗಿ ಶ್ರೀಮಂತಗೊಳಿಸಲು ಯೋಗ ಒಳ್ಳೆಯ ಸಾಧನ.
೨ಎ ಮೀಸಲು ವಿಚಾರಕ್ಕೆ ನಿಮ್ಮ ಹೋರಾಟ ಹೇಗಿದೆ?
ನಾವು ಆಶ್ವಾಸನೆಯನ್ನು ಹೆಚ್ಚು ನಂಬಲ್ಲ. ಮೀಸಲು ಪಡೆಯಲು ಇರುವ ವಿಧಾನದ ನಾವು ಸಾಗುತ್ತೇವೆ. ಈಗಾಗಲೇ ಕಾನೂ ನಾತ್ಮಕ ಹೋರಾಟ ಆರಂಭವಾಗಿದ್ದು, ಸರಕಾರ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆ ನಡೆಸಿದ ನಂತರ ವರದಿ ಬಂದ ಮೇಲೆ ಮೀಸಲಿಗೆ ಸರಕಾರದ ಮೇಲೆ ಒತ್ತಡ ಹಾಕುತ್ತೇವೆ. ಮಹಾರಾಷ್ಟ್ರದಲ್ಲಿ ಮರಾಠ ಸಮಾಜಕ್ಕೆ ಸರಕಾರ ಮೀಸಲು ನೀಡಿದೆ.
ಸರಿಯಾದ ಅಧ್ಯಯನ ನಡೆಸಿ ವರದಿ ಕೊಡದ ಪರಿಣಾಮ ಸುಪ್ರೀಂಕೋರ್ಟ್ ತಿರಸ್ಕೃತಗೊಳಿಸಿದೆ. ಅದರಂತೆ ನಮ್ಮ ಸಮಾಜ ಕ್ಕೂ ಆಗಬಾರದು. ಹಾಗಾಗಿ, ಸರಿಯಾದ ವರದಿ ನಂತರವೇ ನಮಗೆ ಮೀಸಲು ಸಿಗಲಿ. ಶೀಘ್ರದಲ್ಲಿ ಸಿಗುವ ವಿಶ್ವಾಸವಿದೆ.
ಶ್ವಾಸ ಗುರುವಾಗಿದ್ದವರು ಈಗ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾಗಿದ್ದೀರಿ. ಸಮಾಜದ ಅಭಿವೃದ್ಧಿಗೆ ಯಾವ ರೀತಿಯ ಕೊಡುಗೆ ಕೊಡಬೇಕೆಂದಿದ್ದೀರಿ?
ಯೋಗ ಹೇಳಿಕೊಡುವುದು ಸುಲಭ. ಆದರೆ ಸಮಾಜದ ಸಂಘಟನೆ ಮಾಡುವುದು ಸವಾಲಿನ ಕೆಲಸ. ಮೊದಲು ಇದು ನಮಗೆ ಸವಾಲಾಗಿತ್ತು. ಸಮಾಜವನ್ನು ಜಾತಿವಾದದಿಂದ ಜಾತ್ಯತೀತವಾದಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಶ್ವಾಸಗುರು ಎಂದರೆ ಜಾಗತಿಕ ಗುರುವಾಗಿದ್ದವರು ಜಾತಿಗುರುಗಳಾಗಿದ್ದಾರೆ ಎಂದು ಜನರು ಹೇಳುತ್ತಿದ್ದರು. ವಿಶ್ವರೂಪದ ಪರಿಕಲ್ಪನೆ ಇದ್ದರೆ ಜಾತಿಯ ವರನ್ನು ಜಾತ್ಯತೀತವಾದಕ್ಕೆ ಕರೆದುಕೊಂಡು ಹೋಗಬಹುದು. ಸಮಾಜಕ್ಕೆ ಯಾವ ಕೊಡುಗೆ ನೀಡುತ್ತೇವೆ ಎಂದು ಘೋಷಣೆ ಮಾಡುವುದಿಲ್ಲ, ಕೃತಿಯಲ್ಲಿ ಮಾಡಿ ತೋರಿಸುತ್ತೇವೆ.
ಧರ್ಮ ಪ್ರಚಾರಕರಾಗಬೇಕಿದ್ದ ಮಠಾಧೀಶರು ಜಾತಿಗೆ ಸೀಮಿತವಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯ ದಲ್ಲಿ ಕೇಳಿಬರುತ್ತಿದೆಯಲ್ಲ?
ಜಾತಿಗೊಂದು ಮಠಗಳಿದ್ದರೆ ಅವರ ಸಮುದಾಯ ಅಭಿವೃದ್ಧಿ ಆದಂತೆ. ಆಯಾ ಮಠಗಳ ಸ್ವಾಮೀಜಿಗಳು ಅವರ ಸಮಾಜವನ್ನು ಉದ್ಧಾರ ಮಾಡುತ್ತಾ ಹೋದರೆ ಇಡೀ ನಾಡೇ ಉದ್ಧಾರವಾದಂತೆ ಆಗುವುದಿಲ್ಲವೇ? ಬಹುಶಃ ಹೊರಗಿನಿಂದ ನಿಂತು ನೋಡಿದಾಗ ಜಾತಿಗೆ ಸೀಮಿತವಾಗಿದ್ದಾರೆ ಎಂದು ಅನ್ನಿಸಬಹುದು. ಆದರೆ, ಅಸಲಿಗೆ ಯಾವೊಂದು ಸಮಾಜಕ್ಕೆ ನೋವಾದರೂ ನಾಡಿನ ಎಲ್ಲ ಸ್ವಾಮೀಜಿಗಳು ಒಟ್ಟಾಗಿ ಧ್ವನಿಯೆತ್ತು ತ್ತೇವೆ. ನ್ಯಾಯ ಕೊಡಿಸುತ್ತೇವೆ.
ನಿಮ್ಮ ಸಮಾಜದಲ್ಲಿಯೇ ಮತ್ತಷ್ಟು ಪೀಠಗಳು ಹುಟ್ಟಿಕೊಂಡಿವೆ. ನಿಮ್ಮನ್ನು ವಿರೋಧಿಸುವ ಒಂದು ಪೀಠ ಮತ್ತು ವರ್ಗವಿದೆ. ಏನು ಹೇಳಲು ಬಯಸುತ್ತೀರಿ?
ನಮ್ಮ ಸಮಾಜದಲ್ಲಿ ಈಗ ಮೂರನೇ ಪೀಠವನ್ನು ನಾವೇ ಉದ್ಘಾಟಿಸಿದ್ದೇವೆ. ಪೀಠಗಳು ಹುಟ್ಟಿಕೊಂಡಷ್ಟು ಸಮಾಜ ಅಭಿವೃದ್ಧಿ ಕಾಣುತ್ತದೆ. ಇನ್ನೂ ನಮ್ಮ ಬಗ್ಗೆ ಒಂದು ಪೀಠ ವಿರೋಧಿಸುತ್ತದೆ ಎಂದರೆ ಆ ಕುರಿತು ನಾವೇನೂ ಹೆಚ್ಚು ತಲೆಕೆಡಿಸಿ ಕೊಳ್ಳುವು ದಿಲ್ಲ. ನಾವು ಹಗುರವಾ ಗಿ ಯಾರೊಬ್ಬರ ಬಗ್ಗೆಯೂ ಮಾತನಾಡುವುದಿಲ್ಲ. ಆದರೆ, ನಮ್ಮ ಬಗ್ಗೆ ಹಗುರವಾಗಿ ಮಾತನಾಡುವ ಹಗರು ವ್ಯಕ್ತಿಗಳನ್ನು ಹಗುರವಾಗಿಯೇ ಕಡೆಗಣಿಸುತ್ತೇವೆ. ವಿರೋಧ ಮಾಡುವವರು ಇರಬೇಕು. ಅದು ಸದಾಕಾಲ ವಿರೋಧ ಪೀಠವಾಗಿಯೇ ಇರಲಿ.
***
ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಜಗತ್ತನ್ನೇ ಸುತ್ತಾಡಿದ್ದಾರೆ. ಅವರಿಗೆ ಒಳ್ಳೆಯ ಜ್ಞಾನವಿದ್ದು, ಅವರು ಕೂಡ ನಮಗೆ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಇಂತಹ ಅನೇಕ ಶ್ರೇಷ್ಠ ವ್ಯಕ್ತಿಗಳು ನಮ್ಮ ಸುತ್ತಲೂ ಇರುವುದು ಅದು ನಮ್ಮ ಪುಣ್ಯ. ನಾವು ಅವರನ್ನು ಮಾರ್ಗದರ್ಶಕರಾಗಿ, ಆದರ್ಶಪ್ರಾಯರಾಗಿ ಕಾಣುತ್ತೇವೆ.
-ವಚನಾನಂದ ಸ್ವಾಮೀಜಿ ಪೀಠಾಧ್ಯಕ್ಷರು,
ಪಂಚಮಸಾಲಿಪೀಠ, ಹರಿಹರ