ಅಶ್ಲೀಲ ವಿಡಿಯೋ ಕಾಲ್ನಿಂದ ಹಣ ಕಳೆದುಕೊಂಡ ಯುವಕ
ಎಚ್ಚರಿಕೆಯಿಂದಿರಲು ಇಲಾಖೆ ಸಲಹೆ
ವಿಶೇಷ ವರದಿ: ರಮೇಶ್ ಹೆಗಡೆ ಸಾಗರ
ವಿಡಿಯೋ ಕಾಲ್ಗಳನ್ನು ಚಿತ್ರಿಸಿ ಹಣ ಕೀಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸೈಬರ್ ಕ್ರೈಂ ಪೊಲೀಸರು ಕೂಡ ಇಂತಹ ಪ್ರಕರಣಗಳ ಆರೋಪಿ ಗಳನ್ನು ಪತ್ತೆ ಹೆಚ್ಚಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿ, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ.
ವಿಡಿಯೋ ಕಾಲ್ನಿಂದ ಹಣಕಳೆದು ಕೊಂಡ ಯುವಕ: ಫೇಸ್ಬುಕ್ನಲ್ಲಿ ಅವಿನಾಶ್ಗೆ( ಹೆಸರು ಬದಲಿಸಿದೆ) ಸುಂದರ ತರುಣಿ ಯೊಬ್ಬಳ ಸ್ನೇಹಯಾಚನೆ ವಿನಂತಿ (ಫ್ರೆಂಡ್ ರಿಕ್ವೆಸ್ಟ್)ವೊಂದು ಬಂತು. ಇದು ಸುಳ್ಳೋ, ನಿಜವೋ ಎಂದು ಖಾತ್ರಿ ಮಾಡಿ ಕೊಳ್ಳಲು ಮುಖಪುಟ ಒಮ್ಮೆ ತೆರೆದು ನೋಡಿದ. ಅಲ್ಲಿ ಅವಿನಾಶ್ ಸ್ನೇಹಿತರೂ ಕೂಡ ಆಕೆಗೆ ಸ್ನೇಹಿತರಾಗಿದ್ದುದನ್ನು ಕಂಡು, ಸ್ನೇಹಯಾಚನೆ ವಿನಂತಿಯನ್ನು ಅನುಮೋದಿಸಿದ. ಎರಡು ದಿನಗಳ ನಂತರ ವಾಟ್ಸ್ಆಪ್ ನಂಬರ್ ಅದಲು ಬದಲಾಯಿತು. ಎಂದಿನಂತೆ ವಾಟ್ಸ್ಆಪ್ನಲ್ಲಿ ಕಾಳಜಿ ತೋರುವ ಕಾಫಿ, ತಿಂಡಿ, ಊಟ, ಏನು ಕೆಲಸ ಮಾಡುತ್ತೀರಿ? ಹೀಗೆ ಎಲ್ಲ ವಿಚಾರಗಳನ್ನು ಜನನ ದಿಂದ ಹಿಡಿದು ಈವರೆಗಿನ ವೈಯಕ್ತಿಕ ವಿವರಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ.
ಬಳಿಕ ಒಂದು ದಿನ ರಾತ್ರಿ ವಿಡಿಯೋ ಕಾಲ್ ಬಂದಿತು. ಹೌದಲ್ಲ ಮೊನ್ನೆ ತಾನೆ ಫೇಸ್ಬುಕ್ನಲ್ಲಿ ಪರಿಚಯವಾದ ಸೊಲ್ಲಾಪುರದ ಹೊಸ ಗೆಳತಿಯ ನಂಬರ್. ತೊಂದರೆಯಿಲ್ಲ ಎಂದು ಕರೆ ಸ್ವೀಕರಿಸಿದ ಅವಿನಾಶ್, ಆ ಕಡೆ ಏನೂ ಕಾಣುತ್ತಿರಲಿಲ್ಲ. ಅವಿನಾಶ್ ಹಲೋ ಎಂದರೂ, ಯಾರು ಮಾತನಾಡಲಿಲ್ಲ. ಬಳಿಕ ಕರೆ ಕಟ್ಆಯ್ತು. ಮಾರನೇ ದಿನ ಬೆಳಗ್ಗೆ ವಾಟ್ಸಪ್ಗೆ, ಚಿತ್ರವೊಂದನ್ನು ತೋರಿಸಿ, ಈ ನಂಬರ್ಗೆ ಇಂತಿಷ್ಟು ಹಣ ಪೋನ್ ಪೇ ಮಾಡಿ, ಇಲ್ಲವಾ ದರೆ ಈ ಚಿತ್ರವನ್ನು ಹರಿ ಬಿಡಲಾಗುವುದು ಎಂದು ಬೆದರಿಕೆಯ ಮೆಸೇಜ್ ಬಂದಿತು. ಅವಿನಾಶ್ ಪ್ರತಿಕ್ರಿಯಿಸಲಿಲ್ಲ. ಆದರೆ, ೧೦ ನಿಮಿಷ ಸಮಯ ಮೊದಲು ನಿಮ್ಮ ಸ್ನೆಹಿತರಿಗೆ ಚಿತ್ರ ಕಳಿಸುತ್ತಿದ್ದೇವೆ. ಮುಂದೆ ಅವಿನಾಶ್ ಯೋಚಿಸದೇ, ತಕ್ಷಣ ಕೇಳಿದಷ್ಟು ಹಣ ವರ್ಗಾಯಿಸಿ, ಮೋಸ ಹೋದ. ಇದು ಸಾಗರ ತಾಲೂಕಿನಲ್ಲಿ ನಡೆದ ಸೈಬರ್ ಕ್ರೈಂ.
ಬೆಳಕಿಗೆ ಬರದ ಪ್ರಕರಣಗಳು: ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆ ಸಾಗರ, ಹೊಸ ನಗರದಂತಹ ಗ್ರಾಮೀಣ ಪ್ರದೇಶದಲ್ಲಿ ಫೇಸ್ಬುಕ್, ವ್ಯಾಟ್ಸ್ಆಪ್ ಗಳಿಂದಾಗಿ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಮುಜುಗರದ ಸಂಗತಿಗಳಿಂದಾಗಿ ಹೇಳಿಕೊಳ್ಳಲೂ ಆಗದೇ, ದೂರು ನೀಡಲು ಸಂಕೋಚ ಪಟ್ಟುಕೊಂಡು ಸಾಕಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ. ಆದರೆ ದೂರು ನೀಡದೇ ಇದ್ದುದರಿಂದ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಆರೋಪಿಗಳು ಎಲ್ಲೋ ಕುಳಿತು ಕೃತ್ಯ ಎಸಗುವುದರಿಂದ ಸಿಕ್ಕಿಬೀಳುವ ಸಾಧ್ಯತೆ ಕಡಿಮೆ. ಹೀಗಾಗಿ ವಿಡಿಯೋ ಕರೆಗಳನ್ನು ಸ್ವೀಕರಿಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಕ್ರೈಂ ಪೊಲೀಸರು ತಿಳಿಸಿದ್ದಾರೆ.
ಅಶ್ಲೀಲ ವಿಡಿಯೋ ಚಿತ್ರಿಸಿ ಬ್ಲ್ಯಾಕ್ಮೇಲ್
ಸಾಮಾಜಿಕ ಜಾಲತಾಣದ ಮೂಲಕ ಗೆಳೆಯರನ್ನಾಗಿಸಿಕೊಂಡು, ವಿಡಿಯೋ ಕಾಲ್ ಮೂಲಕ ಅಶ್ಲೀಲ ದೃಶ್ಯ ಚಿತ್ರಿಸಿಕೊಂಡು ಹಣ ಪೀಕಲು ಬ್ಲ್ಯಾಕ್ಮೇಲ್ ಮಾಡಲು ಆರಂಭಿಸುತ್ತಾರೆ. ಎಲ್ಲಿ ಸಾಮಾಜಿಕ ತಾಣಗಳಲ್ಲಿ ತಮ್ಮ ಮಾನ ಹರಾಜಾಗುವುದೋ ಎಂದು ಹೆದರಿ ಜನರು ಹಣ ಹಾಕುತ್ತಾರೆ. ಇದನ್ನೆ ಬಂಡವಾಳ ವಾಗಿಸಿಕೊಂಡು, ಎಷ್ಟು ಸಾಧ್ಯವೋ ಅಷ್ಟು ಹಣ ಕಿತ್ತುಕೊಂಡು ಮರೆಯಾಗಿಬಿಡುತ್ತಾರೆ. ಒಂದು ಅಂಕಿಅಂಶಗಳ ಪ್ರಕಾರ ಶೇ.೫೦ಕ್ಕೂ ಹೆಚ್ಚು ಮಂದಿ ಮೋಸ ಹೋಗಿದ್ದಾರೆ ಎನ್ನಲಾಗಿದೆ.