ಚಂದ್ರಶೇಖರ ತುಂಗಳ ರಬಕವಿ-ಬನಹಟ್ಟಿ
ಸಕ್ಕರೆ ನಾಡಾಗಿ ಬೆಳೆಯುತ್ತಿರುವ ರಬಕವಿ-ಬನಹಟ್ಟಿ, ಜಮಖಂಡಿ, ಮುಧೋಳ ಹಾಗು ಬೀಳಗಿ ತಾಲೂಕಿನ ಸಾವಿರಾರು ರೈತರ ಕಬ್ಬಿನ ಬೆಳೆಗೆ ಗೊಣ್ಣೆ ಹುಳು ಕಾಟದಿಂದ ಬಾಯಿಗೆ ಕಹಿಯಾಗುವದರೊಂದಿಗೆ ರೈತ ತೀವ್ರ ಕಂಗಾಲಾಗುವಲ್ಲಿ ಕಾರಣವಾಗಿದೆ.
ಕಬ್ಬಿನ ಬೇರು ಮತ್ತು ಕಾಂಡವನ್ನು ಕೊರೆದು ತಿಂದು ಕಬ್ಬು ಬೆಳೆಯನ್ನು ನಾಶ ಮಾಡುವ ಗೊಣ್ಣೆ(ಗೊಬ್ಬರ) ಹುಳುಗಳ ಕಾಟ ತೀವ್ರವಾಗಿದೆ. ತಾಲೂಕಿನ ನೀರಾವರಿ ಪ್ರದೇಶಗಳಾದ ಜಗದಾಳ, ನಾವಲಗಿ, ಚಿಮ್ಮಡ, ಯಲ್ಲಟ್ಟಿ, ಬಂಡಿಗಣಿ, ಕುಲಹಳ್ಳಿ ಮತ್ತಿತರ ಗ್ರಾಮಗಳ ರೈತರ ಕಬ್ಬಿನ ಬೆಳೆಯಲ್ಲಿ ಈ ರೋಗದ ಬಾಧೆ ಕಾಣಿಸಿಕೊಂಡಿದೆ.
ಮುಂಗಾರು ಮಳೆ ಕಡಿಮೆ ಕಾರಣ: ಮೇ ತಿಂಗಳಲ್ಲಿ ಸುರಿಯುವ ಮುಂಗಾರು ಮಳೆ ಪ್ರಮಾಣ ಕಡಿಮೆ ಯಾಗುವುದರಿಂದ ಜೂನ್ ದಿಂದ ಅಕ್ಟೋಬರ್ವರೆಗೆ ಅಧಿಕವಾಗಿರುವ ಹುಳುಗಳ ಕೋಶಾವಸ್ಥೆಗೆ ಅನುಕೂಲವಾಗಿ ಈ ರೀತಿ ಕಬ್ಬು ಬೆಳೆಗೆ ಮಾರಕವಾಗುವಲ್ಲಿ ಕಾರಣವಾಗಲಿದೆ.
ಪ್ರಗತಿಪರ ರೈತರನ್ನೂ ಕಾಡಿದ ಗೊಣ್ಣೆ: ಮೇ ತಿಂಗಳ ಮುಂಚೆಯೇ ಸೆಟ್ರಾಜಿಂ ಶೀಲಿಂಧ್ರ ಜೈವಿಕವನ್ನು ಕಬ್ಬು ಬೆಳೆಗೆ ಸಿಂಪರಣೆ ಮಾಡುವದು ಸಾಮಾನ್ಯ. ಪ್ರಗತಿಪರ ರೈತರೂ ಬೆಳೆದ ಕಬ್ಬಿಗೆ ಗೊಣ್ಣೆ ಕಾಟ ಕಾಡುತ್ತಿರುವದು ವಿಶೇಷ.
ಮಾಹಿತಿಯೇ ಸಿಗಲ್ಲ: ಮುನ್ಸೂಚನೆಯೊಂದಿಗೆ ಎಲ್ಲ ರೀತಿಯ ಕ್ರಮ ಕೈಗೊಂಡರೂ ಕಬ್ಬು ಬೆಳೆಗೆ ಹಾನಿಯಾಗುವ ಸಂಭವ ಕಿಂಚಿತ್ತೂ ಅರಿವಿಗೆ ಬರುವದಿಲ್ಲ. ಕೆಲ ದಿನಗಳ ನಂತರ ಕಬ್ಬಿನ ಬೇರು ಮತ್ತು ಕಾಂಡವನ್ನು ಕೊರೆದು ತಿಂದ ನಂತರವೇ ಅರಿವಿಗೆ ಬರುತ್ತದೆ. ಹೀಗಾಗಿ ರೈತ ಸಂಪೂರ್ಣ ನಿಸ್ಸಾಹಕವಾಗುವಲ್ಲಿ ಕಾರಣವಾಗಿದೆ.
*
ಎಕರೆಗೆ 50-60 ಟನ್ ಸಿಗಬಹುದಾಗಿದ್ದ ಹೊಲದಲ್ಲಿ ಈ ಹುಳುಬಾಧೆಯಿಂದ 20 ಟನ್ ಸಿಗುವದೂ ಕಷ್ಟವಿದೆ. ಹೀಗಾಗಿ ಕಬ್ಬು ಕಟವು ಮಾಡದೇ ಹಾಗೆ ಬಿಡುವದೇ ಉತ್ತಮ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
-ಸದಾಶಿವ ಬಂಗಿ, ರೈತ, ಜಗದಾಳ
ಇದನ್ನೂ ಓದಿ: Skin disease: ಜಿಲ್ಲೆಯಲ್ಲಿ ಚರ್ಮಗಂಟು ರೋಗದ ಹಾವಳಿ, ಆತಂಕ