ತನುಜಾ ಸಿನಿಮಾ ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ
ಚಂದ್ರಶೇಖರ ಚೌಗಲಾ
ತನುಜಾ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ವ್ಯವಸ್ಥೆಯ ಸುಧಾರಣೆಗೆ ರಾಜಕಾರಣಿಗಳು ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದನ್ನು ಚೆಂದವಾಗಿ ತೋರಿಸಲಾಗಿದೆ ಎಂದು ಉದ್ಯಮಿ, ವಿಆರ್ಎಲ್ ಸಮೂಹದ ಮುಖ್ಯಸ್ಥ ವಿಜಯ ಸಂಕೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ತನುಜಾ ಸಿನಿಮಾ ವೀಕ್ಷಣೆ ಮಾಡಿದ ನಂತರ ವಿಶ್ವವಾಣಿ ಜತೆಗೆ ಮಾತ ನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆಗಿ, ಸುಧಾಕರ್ ಅವರು ಮಂತ್ರಿಯಾಗಿ ಮಾಡಿದ ಕಾರ್ಯವನ್ನು ಸಿನಿಮಾದಲ್ಲಿ ಚೆಂದವಾಗಿ ಬಿಂಬಿಸಲಾಗಿದೆ.
ಒಂದು ಸಂಸ್ಥೆಯೇ ಆಗಲೀ, ಸರಕಾರಿ ವ್ಯವಸ್ಥೆಯೇ ಆಗಲಿ, ಇಂದೇ ರೀತಿ ಇರಬೇಕು ಎಂದು ರೂಪಿಸಲಾಗಿರುತ್ತದೆ. ಕೆಲವೊಮ್ಮೆ ನಮ್ಮ ಸಂಸ್ಥೆಯಲ್ಲಿಯೇ ಏನೇ ನಿರ್ಧಾರಗಳಾಗ ಬೇಕಿದ್ದರೂ, ನಮ್ಮ ಸಂಸ್ಥೆಯ ಅಧ್ಯಕ್ಷರೇ ತೆಗೆದುಕೊಳ್ಳಬೇಕು ಎಂದು ಬಿಡುತ್ತಾರೆ.
ನಾವು ಸರಕಾರವನ್ನು ಬೈದುಕೊಳ್ಳುತ್ತೇವೆ. ಆದರೆ, ಅಧಿಕಾರಿಗಳು ತಮ್ಮ ಅಧಿಕಾರವನ್ನು ತೋರಿಸುವುದೇ ಅಧಿಕಾರ ಎಂದು ಕೊಂಡು ಬಿಡುತ್ತಾರೆ. ಕೆಲ ನಿಯಮ ಸಡಿಲಿಕೆ ಮಾಡಿ, ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನು ಅವರು ಮರೆತಿರುತ್ತಾರೆ. ಇದೆಲ್ಲವನ್ನೂ ಸಾಧ್ಯವಾಗಿಸಿದ ಕ್ಷಣವನ್ನು ತನುಜಾ ಸಿನಿಮಾ ಚೆಂದವಾಗಿ ರೂಪಿಸಿದೆ ಎಂದರು. ವಿಶ್ವೇಶ್ವರ ಭಟ್ ಅವರು ಬರೆದ ಅಂಕಣ ವೊಂದು ಇಷ್ಟೊಂದು ಸಂಚಲನ ಮೂಡಿಸಿ, ಸರಕಾರವನ್ನು ಎಚ್ಚರಿಸಿ, ಸ್ವತಃ ಮುಖ್ಯಮಂತ್ರಿಗಳೇ ಇದನ್ನು ಗಮನಿಸಿ, ಆರೋಗ್ಯ ಸಚಿವರು ಈ ನಿಟ್ಟಿನಲ್ಲಿ ನಿಗಾವಹಿಸಿ, ಅಧಿಕಾರಿಗಳ ಜತೆಗೆ ನಿರಂತರವಾಗಿ ಸಂಪರ್ಕ ಸಾಧಿಸಿ, ಅಸಾಧ್ಯವಾದುದ್ದನ್ನು ಸಾಧ್ಯ ವಾಗಿಸಿ ತೋರಿಸಿ, ಆಕೆ ವೈದ್ಯೆಯಾಗುವಂತೆ ಮಾಡಿದ್ದು ಕಡಿಮೆ ಸಾಧನೆ ಯೇನಲ್ಲ. ಈ ಸಾಧನೆಯನ್ನು ಸಿನಿಮಾ ರೂಪಕ್ಕೆ ತಂದು ನಿಲ್ಲಿಸುವಲ್ಲಿ ನಿರ್ದೇಶಕರ ಸಾಧನೆ ಅಪ್ರತಿಮವಾದುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಒಳ್ಳೆಯ ಎಡಿಟರ್ ಮಾತ್ರವಲ್ಲ, ಒಳ್ಳೆಯ ಆಕ್ಟರ್ ಕೂಡ
ವಿಶ್ವೇಶ್ವರ ಭಟ್ ಅವರು, ಒಳ್ಳೆಯ ಎಡಿಟರ್ ಮಾತ್ರ ಎಂದುಕೊಂಡಿದ್ದೆ. ತನುಜಾ ಸಿನಿಮಾ ನೋಡಿದ ಮೇಲೆ ಗೊತ್ತಾಯಿತು, ಅವರು ಬಹಳ ಒಳ್ಳೆಯ ಆಕ್ಟರ್ ಕೂಡ ಹೌದು ಎಂಬುದು. ಯಡಿಯೂರಪ್ಪ ಮತ್ತು ಸುಧಾಕರ್ ಅವರು ಆಕ್ಟ್ ಮಾಡಿದ್ದಾರೆ ಎಂದು ಗೊತ್ತಿತ್ತು. ಅದೇ ರೀತಿ ವಿಶ್ವೇಶ್ವರ ಭಟ್ ಅವರು ಕೂಡ ಒಂದೆರೆಡು ಸೀನ್ಗಳಲ್ಲಿ ಬಂದು ಹೋಗಬಹುದು ಎಂದು ಕೊಂಡಿದ್ದೆ. ಆದರೆ, ವಿಶ್ವೇಶ್ವರ ಭಟ್ ಅವರು ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ತಾವೇ ನಿಭಾಯಿಸಿದ ಘಟನೆಯನ್ನು ಸಮರ್ಥವಾಗಿ ಸಿನಿಮಾದಲ್ಲಿಯೂ ನಿಭಾಯಿಸಿದ್ದಾರೆ. ಆ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ತಾವು ಉತ್ತಮ ಎಡಿಟರ್ ಮಾತ್ರವಲ್ಲ, ತಾವೊಬ್ಬ ಉತ್ತಮ ಆಕ್ಟರ್ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.
*
ರಾಜಕಾರಣಿಗಳು ಮತ್ತು ಅಧಿಕಾರಿಗಳು ಮನಸ್ಸು ಮಾಡಿದರೆ ಬಡವರಿಗೆ ಯಾವ ರೀತಿ ಬೇಕಾದರೂ ಸಹಾಯ ಮಾಡಬಹುದು ಎಂಬುದನ್ನು ಈ ಘಟನೆ ತೋರಿಸಿದೆ. ಅದನ್ನು ಅತ್ಯುತ್ತಮವಾಗಿ ತೆರೆಯ ಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಎಲ್ಲರೂ ನೋಡಲೇಬೇಕಾದ ಸಿನಿಮಾ.
– ಡಾ.ವಿಜಯ ಸಂಕೇಶ್ವರ
ವಿಆರ್ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ
Read E-Paper click here