ಕೊನೆಯ ಭಾಗದ ಭತ್ತ, ನೀರು ಹೋಗೇತೆ ಎತ್ತ ?
ಈ ವರ್ಷ ಜಿಲ್ಲೆಯಲ್ಲಿ ಸುಮಾರು 52 ಸಾವಿರ ಹೆಕ್ಟೇರ್ ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಇನ್ನೂ 4 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶಕ್ಕೆ ನೀರು ಹರಿದಿಲ್ಲ. ಅಂತಹ ಗದ್ದೆ ಪ್ರದೇಶ ಬಿಕೋ ಎನ್ನುತ್ತಿದೆ. ಭತ್ತದ ನಾಟಿಯನ್ನೇ ನಂಬಿದ್ದ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರ ಪರಿಸ್ಥಿತಿ ಆತಂಕದಲ್ಲಿದೆ. ಹಾಗಾಗಿ, ರೈತರ ಜತೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮತ್ತಿತರ ಸಂಘಟನೆ ಗಳು ಪ್ರತಿಭಟನೆ ನಡೆಸಿವೆ.


ಗಣೇಶ್ ಕಮ್ಲಾಪುರ, ದಾವಣಗೆರೆ
ಎಕರೆಗೆ 28 ಸಾವಿರ ರು. ಪರಿಹಾರ ಬೇಡಿಕೆ
ಹತ್ತು ಸಾವಿರ ಎಕರೆ ಕೃಷಿಭೂಮಿ ಖಾಲಿ
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಸುಮಾರು 10 ಸಾವಿರ ಎಕರೆ ಪ್ರದೇಶಕ್ಕೆ ಕೊನೆಗೂ ಬೇಸಿಗೆ ನೀರು ಸಿಕ್ಕಿಲ್ಲ. ಆದ್ದರಿಂದ ಇಂತಹ ನೀರು ಸಿಗದಿರುವ ‘ಜಮೀನುಗಳನ್ನು ಸರ್ವೇ ಮಾಡಿ ರೈತರಿಗೆ ಪರಿಹಾರ ಕೊಡಿ’ ಎಂದು ರೈತ ಸಂಘಟನೆಗಳು ಇದೀಗ ಬೀದಿಗಿಳಿದಿವೆ.
ಈ ವರ್ಷ ಜಿಲ್ಲೆಯಲ್ಲಿ ಸುಮಾರು 52 ಸಾವಿರ ಹೆಕ್ಟೇರ್ ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಇನ್ನೂ 4 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶಕ್ಕೆ ನೀರು ಹರಿದಿಲ್ಲ. ಅಂತಹ ಗದ್ದೆ ಪ್ರದೇಶ ಬಿಕೋ ಎನ್ನುತ್ತಿದೆ. ಭತ್ತದ ನಾಟಿಯನ್ನೇ ನಂಬಿದ್ದ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರ ಪರಿಸ್ಥಿತಿ ಆತಂಕದಲ್ಲಿದೆ. ಹಾಗಾಗಿ, ರೈತರ ಜತೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮತ್ತಿತರ ಸಂಘಟನೆ ಗಳು ಪ್ರತಿಭಟನೆ ನಡೆಸಿವೆ. ಈ ಕೂಡಲೇ ನೀರು ಹಾಯದ ಭೂಮಿ ಸರ್ವೇ ಮಾಡಿಸಿ, ಪ್ರತಿ ಎಕರೆಗೆ 28 ಸಾವಿರ ರೂ. ನೀಡುವಂತೆ ಆಗ್ರಹಿಸಿವೆ.
ಇದನ್ನೂ ಓದಿ: Davanagere News: ಬಟ್ಟೆ ತೊಳೆಯುವ ವೇಳೆ ಕೆರೆಯಲ್ಲಿ ಮುಳುಗಿ ಮೂವರು ಮಹಿಳೆಯರ ಸಾವು
ಬೈರನಪಾದವೇ ಗತಿ
ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರ ನೀರಿನ ಸಮಸ್ಯೆ ಪರಿಹಾರಕ್ಕೆ ಬೈರನಪಾದ ಏತ ನೀರಾ ವರಿ ಯೋಜನೆ ಅನುಷ್ಠಾನವೇ ಸೂಕ್ತ ಪರಿಹಾರ ಎನ್ನುತ್ತಾರೆ ಸ್ಥಳೀಯರು. ಜತೆಗೆ, ರಾಜಕೀಯ ಪ್ರತಿನಿಧಿಗಳು ಇದೇ ಬೈರನಪಾದ ವಿಚಾರವಿಟ್ಟುಕೊಂಡು ಬೈರನಪಾದ ಯೋಜನೆ ಅನುಷ್ಠಾನದ ಭರವಸೆ ನೀಡಿ ಓಟು ಗಿಟ್ಟಿಸಿಕೊಂಡು ಅಧಿಕಾರ ಗದ್ದುಗೆ ಏರುತ್ತಿದ್ದಾರೆ. ಆದರೆ, ಕೊಟ್ಟ ಭರವಸೆ ಮರೆಯುತ್ತಲೇ ಬಂದಿದ್ದಾರೆ.
ಉಪ್ಪಿಗೆ ಬಡತನ
ಭದ್ರಾ ನಾಲೆಯಿಂದ ಕುಡಿಯುವ ನೀರು ಒದಗಿಸುವ ನೆಪದಲ್ಲಿ ನೂರು ಕಿ.ಮೀ.ಗೂ ಅಧಿಕ ದೂರ ತುಂಗಭದ್ರಾ ನದಿಯಿಂದ ನೀರು ಕೊಂಡ್ಯೊಯ್ಯಲಾಗುತ್ತಿದೆ. ಆದರೆ, ನದಿ ಸಮೀಪದ ಐದತ್ತು ಕಿ.ಮೀ. ಪ್ರದೇಶಕ್ಕೆ ನೀರು ದೊರಕಿಸಲು ಸಾಧ್ಯವಾಗುತ್ತಿಲ್ಲ. ಈ ಸಂಕಟದ ಪರಿಸ್ಥಿತಿ ಜಲಾಶಯ ತುಂಬಿದ ಸ್ಥಿತಿಯಲ್ಲೂ ಮುಂದುವರಿದಿದೆ. ನಾಲೆಗಳು ದುರಸ್ತಿಯಾಗದ ಕಾಲುವೆಗಳು ಒಡೆದು, ಹೂಳು ತುಂಬಿ, ಗಿಡಗಂಟೆಗಳು ಬೆಳೆದ ಕಾರಣದಿಂದ ಇರುವ ನೀರಿನಲ್ಲಿ ಸಾವಿರಾರು ಕ್ಯೂಸೆಕ್ ನೀರು ವಿನಾಕಾರಣ ಪೋಲಾಗುತ್ತಿದೆ ಎನ್ನುತ್ತಾರೆ ರೈತರು.
ಭದ್ರಾ ನಾಲೆ ಹೂಳು
ಭದ್ರಾ ನಾಲೆಯಲ್ಲಿರುವ ಹೂಳು ತೆಗೆಯುವಂತೆ ಆಗಾಗ ರೈತರು, ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ. ಆದರೆ, ನಾಲೆಯ ಹೂಳು ಮಾತ್ರ ಸರಿಯಾಗಿ ಮೇಲೆದ್ದಿಲ್ಲ. ಕೊನೆ ಭಾಗದ ಹರಿಹರ ತಾಲೂಕಿನ ಕೆಎನ್ ಹಳ್ಳಿ, ಯಲವಟ್ಟಿ, ಹೊಳೆಸಿರಿಗೆರೆ, ಕಮಲಾಪುರ, ಭಾನುವಳ್ಳಿ, ಜಿಗಳಿ ಗ್ರಾಮಗಳ ಸಾವಿರಾರು ಎಕರೆ ಜಮೀನು ಭತ್ತ ನಾಟಿ ಮಾಡಲಾಗದೆ ಬೀಳುಬಿದ್ದಿವೆ.
ಅಧಿಕಾರಿಗಳಿಗಿಲ್ಲ ಇಚ್ಛಾಶಕ್ತಿ
ಕೊನೆ ಭಾಗಕ್ಕೆ ನೀರು ತಲುಪದಿರುವುದಕ್ಕೆ ಇರುವ ತಾಂತ್ರಿಕ ತೊಂದರೆಗಳನ್ನು ಗುರುತಿಸುವಲ್ಲಿ ಹಾಗೂ ಮಿತಿಮೀರಿದ ಅಕ್ರಮ ಪಂಪ್‌ಸೆಟ್‌ಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಅಡಕೆ ತೋಟಗಳ ಮಾಲೀಕರು ನಾಲೆಯ ನೀರನ್ನು ಟ್ಯಾಂಕರ್‌ಗಳಲ್ಲಿ ಸಾಗಿಸುತ್ತಾರೆ. ಇದರಿಂದ ಅಚ್ಚು ಕಟ್ಟು ಭೂಮಿಗಳಿಗೆ ದಕ್ಕಬೇಕಿದ್ದ ನೀರು ಅನ್ಯರ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.
ಸದನದಲ್ಲಿ ಪ್ರಸ್ತಾಪ
ಹರಿಹರ ಶಾಸಕ ಬಿ.ಪಿ.ಹರೀಶ್ ಅವರು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ನೀರು ಸಿಗದೆ ಉಂಟಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಪರಿಹಾರ ಕಲ್ಪಿಸುವ ಕುರಿತು ಹತ್ತು ಹಲವು ಬಾರಿ ಸದನದಲ್ಲಿ ಪ್ರಸ್ತಾಪಿಸಿದರೂ ಪ್ರಯೋಜನವಾಗಿಲ್ಲ. ಜತೆಗೆ, ಅಕ್ರಮ ಪಂಪ್‌ಸೆಟ್ ತೆರವಿಗೆ ಹೈಕೋರ್ಟ್ ಆದೇಶ ಬರೀ ಆದೇಶವಾಗಿಯೇ ಉಳಿದಿದ್ದೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಭತ್ತ ನಾಟಿ ಮಾಡಿಯೂ ನೀರು ಸಿಗದ ಪ್ರದೇಶದ ಸರ್ವೇ ಮಾಡಿಸಿ ಅದಕ್ಕೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮೇ 5ರ ನಂತರ ಹರಿಹರ ಬೈಪಾಸ್ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸ ಲಾಗುವುದು. ಜತೆಗೆ, ಅಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸುತ್ತಾರೆ ತಾಲೂಕು ರೈತ ಸಂಘದ ಅಧ್ಯಕ್ಷ ಹಲಸಬಾಳು ಬಸವರಾಜಪ್ಪ.
*
ರೈತರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಮೇ 5ರಂದು ಅಧಿಕಾರಿಗಳ ಸಮ್ಮುಖ ದಲ್ಲಿ ರೈತರು ಹಾಗೂ ರೈತ ಅದಕ್ಕೆ ಮುಖಂಡರ ಸಭೆ ಕರೆಯಲಾಗಿದೆ. ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯ ಸಂಗ್ರಹಿಸಿ ಸರಕಾರದ ಗಮನಕ್ಕೆ ತಂದು ಕ್ರಮಕ್ಕೆ ಯತ್ನಿಸಲಾಗುವುದು.
-ಕೆ.ಎಂ. ಗುರುಬಸವರಾಜ್,
ತಹಸೀಲ್ದಾರ್ ಹರಿಹರ
ಭದ್ರಾ ಅಣೆಕಟ್ಟಿನಲ್ಲಿ ಬೇಸಿಗೆ ಹಂಗಾಮಿಗೆ ಸಾಕಷ್ಟು ನೀರು ಇದ್ದು, ಕೊನೆ ಭಾಗದ ಜಮೀನಿಗೆ ನೀರು ಕೊಡುವಲ್ಲಿ ನೀರಾವರಿ ಇಲಾಖೆ ವಿಫಲವಾಗಿದೆ. ಆದ್ದರಿಂದ ರೈತರಿಗೆ ನೀರು ಕೊಡದಿರುವ ಜಮೀನುಗಳನ್ನು ಸರ್ವೇ ಮಾಡಿ ಆ ರೈತರಿಗೆ ಪರಿಹಾರ ಒದಗಿಸಿಕೊಡಬೇಕು.
-ಹಾಳೂರು ನಾಗರಾಜ್, ಜಿಲ್ಲಾಧ್ಯಕ್ಷ, ರೈತ ಸಂಘ