ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಭಾಗಿಯಾಗಲು ಬೇಕಿದೆ ಆರ್ಥಿಕ ನೆರವು
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ದೇಶದ ಹಳ್ಳಿಹಳ್ಳಿಗಳಲ್ಲಿ ಸಾಮಾನ್ಯವಾಗಿ ಆಡುವ ಆಟಗಳಲ್ಲಿ ಥ್ರೋ ಬಾಲ್ ಸಹ ಒಂದು. ಆದರೆ ಈ ಕ್ರೀಡೆಯನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟ ಗಳಲ್ಲಿ ಮಾತ್ರ ಇಲ್ಲಿಯವರೆಗೆ ಸೇರಿಸಿಲ್ಲ. ಇದೀಗ ಥ್ರೋ ಬಾಲ್ ಅನ್ನು ಒಲಿಂಪಿಕ್ಸ್ಗೆ ಸೇರಿಸುವಂತೆ ಆಗ್ರಹಗಳು ಶುರುವಾಗಿದೆ.
ಹೌದು, ಒಲಿಂಪಿಕ್ಸ್ನಲ್ಲಿ ಅರ್ಹತೆ ಪಡೆಯಲು ಹತ್ತು ಹಲವು ಕಟ್ಟುಪಾಡುಗಳಿವೆ. ಈ ಎಲ್ಲ ಷರತ್ತುಗಳನ್ನು ಥ್ರೋಬಾಲ್ ಆಟ ಪೂರೈಸುವುದರೊಂದಿಗೆ ವಿಶ್ವದ ಹಲವು ದೇಶಗಳಲ್ಲಿ ಈ ಕ್ರೀಡೆ ಜನಪ್ರಿಯತೆ ಪಡೆದಿದೆ. ಪ್ರಮುಖ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ಇಲ್ಲದಿದ್ದರೂ, ಎರಡು ದೇಶಗಳ ನಡುವೆ ಕ್ರೀಡೆಯನ್ನು ದಶಕಗಳಿಂದ ಆಡುತ್ತಲೇ ಇದ್ದಾರೆ. ಹೀಗಾಗಿ ಒಲಿಂಪಿಕ್ಸ್ನಲ್ಲಿಯೂ ಇದಕ್ಕೆ ಸ್ಥಾನ ನೀಡಬೇಕು ಎಂದು ಬೆಂಗಳೂರು ಮೂಲಕ ಇಂಟರ್ ನ್ಯಾಷನಲ್ ಥ್ರೋಬಾಲ್ ಫೆಡರೇಷನ್ ಒಲಿಂಪಿಕ್ಸ್ ಮಂಡಳಿಯ ಮುಂದೆ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು ಮೂಲದ ಇಂಟರ್ನ್ಯಾಷನಲ್ ಥ್ರೋ ಬಾಲ್ ಫೆಡರೇಷನ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಥ್ರೋಬಾಲ್ ಅನ್ನು ಸೇರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಾರಂಭಿಕ ಪ್ರಸ್ತಾವನೆಯಲ್ಲಿ ಈಗಾಗಲೇ ಸಲ್ಲಿಸಲಾಗಿದ್ದು, ಮುಂದಿನ ಹಂತದ ಪ್ರಸ್ತಾವನೆಯನ್ನು ಮೇ ತಿಂಗಳಲ್ಲಿ ರಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸೋರ್ಟ್ಸ್ ಅಕಾರ್ಡ್ನಲ್ಲಿ ಭಾಗವಹಿಸಿ, ಅಲ್ಲಿ ಪ್ರದರ್ಶನ ಮಳಿಗೆಯಲ್ಲಿ ಥ್ರೋ ಬಾಲ್ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾರುವ ಅಗತ್ಯವಿದೆ. ಒಂದು ವೇಳೆ ಅಲ್ಲಿ ಒಪ್ಪಿಗೆಯಾದರೆ, ಮುಂದಿನ ಒಂದೆರೆಡು ಒಲಿಂಪಿಕ್ಸ್ನಲ್ಲಿ ಥ್ರೋಬಾಲ್ಗೆ ಅವಕಾಶ ಸಿಗಲಿದೆ ಎನ್ನುವ ವಿಶ್ವಾಸವನ್ನು ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಅಧ್ಯಕ್ಷ ಡಿ.ಟಿ. ರಾಮಣ್ಣ ಅವರು ವ್ಯಕ್ತಪಡಿಸಿದ್ದಾರೆ.
೪೪ ರಾಷ್ಟ್ರಗಳಲ್ಲಿ ಕ್ರೀಡೆ: ಥ್ರೋ ಬಾಲ್ ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ೪೪ ದೇಶಗಳಲ್ಲಿ ಆಡಲಾಗುತ್ತಿದೆ. ಆದರೆ ಒಲಿಂಪಿಕ್ಸ್, ಕಾಮನ್ವೆಲ್ತ್, ಏಷ್ಯಾ ಗೇಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಯಾವ ಕ್ರೀಡಾಕೂಟದಲ್ಲಿಯೂ ಥ್ರೋ ಬಾಲ್ಗೆ ಸ್ಥಾನಮಾನ ನೀಡಿಲ್ಲ. ಹೀಗಾಗಿ ಇದೀಗ ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ವತಿಯಿಂದ ಥ್ರೋಬಾಲ್ ಅನ್ನು ಕ್ರೀಡಾಕೂಟಗಳಲ್ಲಿ ಸೇರಿಸುವಂತೆ ಒತ್ತಡ ಹೇರಲಾಗುತ್ತಿದ್ದು, ಆರಂಭದಲ್ಲಿ ಒಲಿಂಪಿಕ್ಸ್ನಲ್ಲಿ ಅರ್ಹತೆ ಪಡೆಯಲು ಅಗತ್ಯ ಸಿದ್ಧತೆ ನಡೆಸಲಾಗಿದೆ.
ಇನ್ನು ಒಲಿಂಪಿಕ್ಸ್ನಲ್ಲಿ ಥ್ರೋಬಾಲ್ ಅನ್ನು ಸೇರಿಸಬೇಕು ಎಂದು ಭಾರತದಿಂದ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದೆ. ಕಬ್ಬಡ್ಡಿ ಬಳಿಕ ಈ ರೀತಿ ಪ್ರಸ್ತಾವನೆ ಯನ್ನು ಸಲ್ಲಿಸುತ್ತಿರುವುದು ಥ್ರೋಬಾಲ್ಗೆ ಮಾತ್ರ ಎನ್ನುವುದು ವಿಶೇಷ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಲವು ಅತ್ಯುತ್ತಮ ಥ್ರೋಬಾಲ್ ಕ್ರೀಡಾಪಟುಗಳಿದ್ದಾರೆ ಎಂದು ಫೆಡರೇಷನ್ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರದರ್ಶನದಲ್ಲಿ ಭಾಗಿಯಾಗಲು ೫೦ ಲಕ್ಷ ರುಪಾಯಿ ಅಗತ್ಯ
ಇನ್ನು ರಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸೋರ್ಟ್ಸ್ ಅಕಾರ್ಡ್ನಲ್ಲಿ ಭಾಗವಹಿಸಲು ಈಗಾಗಲೇ ಥ್ರೋಬಾಲ್ -ಡರೇಷನ್ ಸಿದ್ಧತೆ ನಡೆಸಿಕೊಂಡಿದೆ. ಅಲ್ಲಿ ಪ್ರದರ್ಶನ ಮಳಿಗೆ ಹಾಕುವ ಮೂಲಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಥ್ರೋಬಾಲ್ ಕ್ರೀಡೆಯ ಗಮನಸೆಳೆದು, ಬಳಿಕ ಒಲಿಂಪಿಕ್ಸ್ನಲ್ಲಿ ಅವಕಾಶ ಪಡೆಯುವ ಲೆಕ್ಕಾಚಾರದಲ್ಲಿದೆ.
ಆದರೆ ಈ ಪ್ರದರ್ಶನದಲ್ಲಿ ಭಾಗವಹಿಸಲು ೧.೨೫ ಲಕ್ಷ ರು. ಪ್ರವೇಶ ಶುಲ್ಕ ನೀಡಬೇಕಾಗುತ್ತದೆ. ಇದರೊಂದಿಗೆ ಮೂಲಸೌಕರ್ಯ, ವಿಮಾನ ಟಿಕೆಟ್, ಮಾರ್ಕೆಟಿಂಗ್ ಸೇರಿ ವಿವಿಧ ಖರ್ಚಿಗೆ ಕನಿಷ್ಠ ೫೦ ಲಕ್ಷ ರು. ಅಗತ್ಯವಿದೆ ಎನ್ನುತ್ತಾರೆ ಸಂಪೂರ್ಣ ಹೆಗ್ಡೆ. ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಭಾಗವಹಿ ಸಲು ಸರಕಾರದಿಂದ ಯಾವುದೇ ಆರ್ಥಿಕ ನೆರವು ಇರುವುದಿಲ್ಲ. ಆದ್ದರಿಂದ ಪ್ರಾಯೋಜಕತ್ವಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
***
ಬಾಲ್ ಕೇವಲ ಒಂದು ಆಟ ವಾಗಿ ಮಾತ್ರ ನೋಡದೇ ಆರೋಗ್ಯ ದೃಷ್ಟಿಯಿಂದ ನೋಡಬೇಕು. ಥ್ರೋ ಬಾಲ್ ಅನ್ನು ದೇಶದ ಹಳ್ಳಿ-ಹಳ್ಳಿಗಳಲ್ಲಿ ಆಡಿದರೂ ಸಿಗ ಬೇಕಾದ ಮಾನ್ಯತೆ ಕ್ರೀಡಾ ಮಟ್ಟದಲ್ಲಿ ಸಿಕ್ಕಿಲ್ಲ. ಅದು ಸಿಗುವಂತೆ ಮಾಡಬೇಕು ಎನ್ನುವ ಉದ್ದೇಶ ನಮ್ಮದು.
– ಡಾ.ಡಿ.ಟಿ.ರಾಮಣ್ಣ ಅಧ್ಯಕ್ಷರು,
ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್
ಥ್ರೋಬಾಲ್ ಅನ್ನು ಯಾವ ವಯೋಮಾನದವರಾದರೂ ಆಡಬಹುದು. ನಮ್ಮ ಫೆಡರೇಷನ್ ನಿಂದಲೇ ಹಲವು ಟೂರ್ನಿಗಳನ್ನು ಆಯೋಜಿಸಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ನಮ್ಮ ಮುಂದಿನ ಗುರಿ ಒಲಿಂಪಿಕ್ಸ್ ನಲ್ಲಿ ಥ್ರೋಬಾಲ್ ಕ್ರೀಡೆಯನ್ನು ನೋಡುವುದು.
– ಸಂಪೂರ್ಣ ಹೆಗ್ಡೆ ಸಹಾಯಕ ಕಾರ್ಯದರ್ಶಿ,
ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್