ಬಿಜೆಪಿಗೆ ಚುನಾವಣೆ ಮುನ್ನವೇ ಅಭ್ಯರ್ಥಿಗಳ ಲಿಸ್ಟ್ ಕೊಟ್ಟ ಕಾಂಗ್ರೆಸ್: ‘ಸರ್ಪ್ರೈಸ್ ಕ್ಯಾಂಡಿಡೇಟ್’ ಅಸ್ತ್ರಕ್ಕೆ ಜಾಗವಿಲ್ಲ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡಿ ಕೊಳ್ಳಬೇಕು ಎನ್ನುವ ಉದ್ದೇಶದಿಂದ ಕೆಪಿಸಿಸಿ ಜಾರಿಗೊಳಿಸಿರುವ ‘ಟಿಕೆಟ್ ಬೇಕೆಂದರೆ ಅರ್ಜಿ ಹಾಕಿ’ ಎನ್ನುವ ಸಂಸ್ಕೃತಿ ಕಾಂಗ್ರೆಸ್ಗೆ ಮುಳುವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೌದು, ಈಗ ಟಿಕೆಟ್ ಬಯಸಿ ಸಾವಿರಾರು ಮಂದಿ ಒಂದು ಅಥವಾ ಎರಡು ಲಕ್ಷದ ಡಿಡಿಯೊಂದಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ರೀತಿ ಅರ್ಜಿ ಸಲ್ಲಿಸುವವರೆಲ್ಲ ಟಿಕೆಟ್ ಆಕಾಂಕ್ಷಿಗಳಾಗಿಯೇ ಇದ್ದಾರೆ. ಆದ್ದರಿಂದ ಪ್ರತಿಪಕ್ಷ ಬಿಜೆಪಿಗೆ ಕಾಂಗ್ರೆಸ್ನ ಆಕಾಂಕ್ಷಿ ಗಳೇನು? ಎನ್ನುವ ಮಾಹಿತಿ ಕಲೆ ಹಾಕಲು ಸುಲಭ ದಾರಿಯನ್ನು ಕಾಂಗ್ರೆಸ್ ಯೇ ಮಾಡಿಕೊಟ್ಟಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಈ ಹಿಂದೆಯೂ ಅರ್ಜಿ ಸಲ್ಲಿಸಬೇಕಾಗಿತ್ತಾದರೂ, ಅಧಿಕೃತವಾಗಿ ಇರಲಿಲ್ಲ. ಅರ್ಜಿ ಸಲ್ಲಿಸದೇ ಇದ್ದವರಿಗೂ ಟಿಕೆಟ್ ನೀಡಲಾಗುತ್ತಿತ್ತು. ಈ ಬಾರಿ ಅರ್ಜಿ ಸಲ್ಲಿಸಿದರೆ ಮಾತ್ರ ಟಿತೆಟ್ ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ದುಡ್ಡು ಕಟ್ಟಿ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಯಾರ್ಯಾರು ಅರ್ಜಿ ಸಲ್ಲಿಸಿದ್ದಾರೆ ಎನ್ನುವುದನ್ನು ಸುಲಭವಾಗಿ ತಿಳಿದು ಕೊಳ್ಳಬಹುದು. ಅವರಲ್ಲಿರುವ ಆಕಾಂಕ್ಷಿಗಳ ‘ಬಲ’, ‘ದೌರ್ಬಲ್ಯ’ದ ಲೆಕ್ಕ ಹಾಕುವುದು ಬಿಜೆಪಿ ಮತ್ತು ಜೆಡಿಎಸ್ಗೆ ಸುಲಭವಾಗಲಿದೆ.ಇದಿಷ್ಟೇ ಅಲ್ಲದೇ, ಪಕ್ಷದೊಳಗೇ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ನಡುವೆಯೇ ಸಮರ ನಡೆದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಉದಾಹರಣೆಗೆ ಇದೀಗ ಮೀಸಲು ಕ್ಷೇತ್ರವಾಗಿರುವ ನಂಜನ ಗೂಡಿನ ಮೇಲೆ ಇಬ್ಬರೂ ಪ್ರಭಾವಿ ನಾಯಕರು ಕಣ್ಣಿಟ್ಟಿದ್ದಾರೆ.
ಧ್ರುವನಾರಾಯಣ ಹಾಗೂ ಸಿದ್ದರಾಮಯ್ಯ ಪರಮಾಪ್ತ ಎಚ್.ಸಿ ಮಹದೇವಪ್ಪ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡದರೂ ಅಸಮಾಧಾನ ಇನ್ನೊಂದು ಬಣದಿಂದ ಹೊರಬರುವುದು ಸಹಜ. ಈ ಹಿಂದೆಯೂ ಇದೇ ರೀತಿಯ ಸಮಸ್ಯೆ ಯಾಗುತ್ತಿತ್ತು. ಆದರೆ ಅಽಕೃತವಾಗಿ ಅರ್ಜಿ ಸಲ್ಲಿಸದೇ ಇದ್ದಿದ್ದರಿಂದ ಟಿಕೆಟ್ ಕೈತಪ್ಪಿದರೂ ‘ಪ್ರತಿಷ್ಠೆ’ಯ ಪ್ರಶ್ನೆ ಎದುರಾಗುತ್ತಿರಲಿಲ್ಲ.
ಆದರೀಗ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಟಿಕೆಟ್ ಸಿಗದಿದ್ದರೆ ಅಸಮಾಧಾನ ಭುಗಿಲೇಳುವುದು ಸಾಮಾನ್ಯ. ಮತ್ತೊಂದು ಸಮಸ್ಯೆಯೆಂದರೆ, ಒಂದು ವೇಳೆ ಪ್ರಭಾವಿ ನಾಯಕರೊಬ್ಬರನ್ನು ‘ಅಚ್ಚರಿಯ ಅಭ್ಯರ್ಥಿ’ಯಾಗಿ ಕಣಕ್ಕೆ ಇಳಿಸಲು ಹೈಕಮಾಂಡ್ ಮುಂದಾದರೆ, ‘ಅರ್ಜಿ ಸಲ್ಲಿಸದಿದ್ದರೆ ಟಿಕೆಟ್ ಇಲ್ಲ’ ಎನ್ನುವ ಪಕ್ಷದ ನಾಯಕರ ನಿಯಮ ಅಡ್ಡಿಬರಲಿದೆ ಎನ್ನುವುದು ಅನೇಕರ ಅಭಿಪ್ರಾ ಯವಾಗಿದೆ. ಇದರೊಂದಿಗೆ ಒಂದೊಂದು ಕ್ಷೇತ್ರಕ್ಕೆ ಎರೆಡೆರೆಡು ಲಕ್ಷ ಕಟ್ಟಿರುವ ಆಕಾಂಕ್ಷಿಗಳಿಗೆ ತಮ್ಮನ್ನು ಬಿಟ್ಟು ಬೇರೆಯವರಿಗೆ ಅಥವಾ ಹೊಸಬರಿಗೆ ಟಿಕೆಟ್ ಸಿಕ್ಕರೆ ಚುನಾವಣಾ ಸಮಯದಲ್ಲಿ ಬಂಡಾಯ ಅಥವಾ ತಟಸ್ಥರಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.
ಅನೇಕರಿಂದ ವಿರೋಧ
ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಪಡೆದು, ೪೫೦ಕ್ಕೂ ಹೆಚ್ಚು ಮಂದಿ ಅರ್ಜಿಯನ್ನು ನಿಗದಿತ ಮೊತ್ತ ಡಿಡಿಯೊಂದಿಗೆ ವಾಪಸುಸಲ್ಲಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರೂ, ಅನೇಕ ಭಾಗದಲ್ಲಿ ಈ ರೀತಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಕೆಲ ನಾಯಕರು, ಅರ್ಜಿ ಸಲ್ಲಿಸುತ್ತಿದ್ದಂತೆ ಸ್ಥಳೀಯವಾಗಿ ನಾಯಕರ ನಡುವೆ ಗುದ್ದಾಟ ಆರಂಭವಾಗುತ್ತದೆ. ಆರೇಳು ಜನ ಆಕಾಂಕ್ಷಿಗಳಿರುವ ಭಾಗದಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೆ ಇನ್ನುಳಿದವರು ಎರಡು ಲಕ್ಷ ಕೊಟ್ಟರೂ ಟಿಕೆಟ್ ಸಿಗಲಿಲ್ಲವೆಂದು ಅಸಮಾಧಾನ ಹೊರಹಾಕುವುದು ಸಾಮಾನ್ಯ. ಇದು ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಹೊರೆಯಾಗುವುದು ನಿಶ್ಚಿತ ಎನ್ನುವ ಮಾತುಗಳನ್ನು ಅನೇಕರು ಹೇಳಿದ್ದಾರೆ.
ಅರ್ಜಿ ಸಲ್ಲಿಸದ ೨೦ಕ್ಕೂ ಹೆಚ್ಚು ಶಾಸಕರು
ಇನ್ನು ಮೂಲಗಳ ಪ್ರಕಾರ ಈಗಾಗಲೇ ಬಹುತೇಕ ಶಾಸಕರು ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇವೆ ಎಂದು
ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ, ಮಾಜಿ ಸಚಿವ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿದಂತೆ ೨೦ಕ್ಕೂ ಹೆಚ್ಚು ಹಾಲಿ ಶಾಸಕರೇ ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ ಅನಿವಾರ್ಯವಾಗಿ ನ. ೨೧ರವರೆಗೆ ಅರ್ಜಿ ಸ್ವೀಕಾರವನ್ನು ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಪ್ಲಾನ್ನ ಸಮಸ್ಯೆಯೇನು?
ಪಕ್ಷದಿಂದ ಅಚ್ಚರಿಯ ಅಭ್ಯರ್ಥಿಗಳೇ ಇರುವುದಿಲ್ಲ ಆಕಾಂಕ್ಷಿಗಳ ಪೈಕಿ, ಒಬ್ಬರಿಗೆ ಟಿಕೆಟ್ ಕೊಟ್ಟರೆ ಬಾಕಿ ಉಳಿದವರಿಂದ ಅಸಮಾಧಾನ ನಿಶ್ಚಿತ ಪ್ರತಿಪಕ್ಷಗಳಿಗೆ ಯಾರ್ಯಾರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದರೆ, ಅದಕ್ಕೆ ತಕ್ಕಂತೆ ರಣತಂತ್ರ ಅರ್ಜಿ ಸಲ್ಲಿಸದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಅರ್ಜಿ ಸಲ್ಲಿಸಿದವರಿಂದಲೇ ವಿರೋಧ ನಿಶ್ಚಿತ. ಎರೆಡೆರೆಡು ಕಡೆ ಸ್ಪರ್ಧಿಸುವ ಇಚ್ಛೆ ಇರುವವರು ಹೆಚ್ಚುವರಿ ಮೊತ್ತ ಕಟ್ಟಬೇಕಾದ ಒತ್ತಡ.
ಅರ್ಜಿ ಸಲ್ಲಿಸಿದವರೆಷ್ಟು?
? ಒಟ್ಟು ೧೦೫೬ ಅರ್ಜಿಗಳು ಖಾಲಿ
? ದಲಿತ ಆಕಾಂಕ್ಷಿಗಳ ಸಂಖ್ಯೆ: ೩೫೦
? ಸಾಮಾನ್ಯ ವರ್ಗದ ಆಕಾಂಕ್ಷಿಗಳ ಸಂಖ್ಯೆ : ೭೦೦
? ಅರ್ಜಿ ಸಲ್ಲಿಸದ ೨೦ಕ್ಕೂ ಹೆಚ್ಚು ಹಾಲಿ ಶಾಸಕರು
? ಅರ್ಜಿಯಿಂದಲೇ ೫೨ ಲಕ್ಷ ರು. ಸಂಗ್ರಹಿಸಿದ ಕೆಪಿಸಿಸಿ
? ೫೦೦ಕ್ಕೂ ಹೆಚ್ಚು ಮಂದಿಯ ಡಿಡಿ ಅರ್ಜಿ ಸಲ್ಲಿಕೆ