Sunday, 24th November 2024

Kiccha Sudeep: ಸುದೀಪ್‌ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್‌; ʼಮ್ಯಾಕ್ಸ್‌ʼ ಚಿತ್ರದ ಮಾಸ್‌ ಹಾಡು ಔಟ್‌

Kiccha Sudeep

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರಗಳಲ್ಲಿ ಕಿಚ್ಚ ಸುದೀಪ್‌ (Kiccha Sudeep) ಅಭಿನಯದ ʼಮ್ಯಾಕ್ಸ್‌ʼ (MAX) ಕೂಡ ಒಂದು. ಇಂದು (ಸೆಪ್ಟೆಂಬರ್‌ 2) ಸುದೀಪ್‌ ಹುಟ್ಟಹಬ್ಬದ ಹಿನ್ನಲೆಯಲ್ಲಿ ಚಿತ್ರತಂಡ ಲಿರಿಕಲ್‌ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.  ʼಮ್ಯಾಕ್ಸಿಮಮ್‌ ಮಾಸ್‌ʼ ಹೆಸರಿನ ಹಾಡು ಬಿಡುಗಡೆ ಮಾಡುವ ಮೂಲಕ ʼಮ್ಯಾಕ್ಸ್‌ʼ ಚಿತ್ರತಂಡ 51ನೇ ಹುಟ್ಟಹಬ್ಬ ಆಚರಿಸುತ್ತಿರುವ ಸುದೀಪ್‌ಗೆ ಮತ್ತು ಅವರ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ.

ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಧೂಳೆಬ್ಬಿಸಿದ್ದು ಇದೀಗ ಹಾಡಿನ ಮೂಲಕ ಸಿನಿಮಾ ಮತ್ತುಷ್ಟು ನಿರೀಕ್ಷೆ ಮೂಡಿಸಿದೆ. ಅಜನೀಶ್‌ ಲೋಕನಾಥ್‌ ಸಂಗೀತವಿರುವ ಈ ಹಾಡು ಮಾಸ್‌ಪ್ರಿಯರಿಗೆ ಇಷ್ಟವಾಗುವ ರೀತಿಯಲ್ಲಿಯೇ ಮೂಡಿ ಬಂದಿದೆ. ಈ ಹಾಡಿಗೆ ಅನೂಪ್‌ ಭಂಡಾರಿ, ರ‍್ಯಾಪರ್‌ ಎಂ.ಸಿ. ಬಿಜ್ಜು ಸಾಹಿತ್ಯವಿದೆ. ಚೇತನ್‌ ಗಂಧರ್ವ ಮತ್ತು ರ‍್ಯಾಪರ್‌ ಎಂ.ಸಿ. ಬಿಜ್ಜು ಧ್ವನಿ ನೀಡಿದ್ದಾರೆ. ಗಣೇಶ ಚತುರ್ಥಿಯಂದು ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

https://www.instagram.com/reel/C_ZVRototQM/?utm_source=ig_web_copy_link&igsh=MzRlODBiNWFlZA==

ಇತ್ತೀಚೆಗೆ ಬಿಡುಗಡೆಗೊಂಡ ಟೀಸರ್‌ನಲ್ಲಿ ಸುದೀಪ್‌ ಅವರನ್ನು ಮಾಸ್- ಗಾಡ್ ಅವತಾರದಲ್ಲಿ ನೋಡಿದ ಅಭಿಮಾನಿಗಳ ನಿರೀಕ್ಷೆ ಹಾಡಿನ ಇನ್ನೂ ಹೆಚ್ಚಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ʼಮ್ಯಾಕ್ಸ್ʼ ಚಿತ್ರದಲ್ಲಿ ಕಿಚ್ಚ ಸುದೀಪ್ ಜತೆಗೆ ಬಹುಭಾಷಾ ನಟಿ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಸುನೀಲ್‌, ಸುಕೃತಾ ವಾಗ್ಲೆ ಮುಂತಾದವರು ಬಣ್ಣ ಹಚ್ಚಿದ್ದಾರೆ. ʼವಿಕ್ರಾಂತ್‌ ರೋಣʼ ಬಳಿಕ ಸುದೀಪ್‌ ಚಿತ್ರಕ್ಕೆ ಅಜನೀಶ್ ಲೋಕನಾಥ್‌ಗೆ ಸಂಗೀತ ಸಂಯೋಜನೆ ನೀಡಿದ್ದು, ಹಾಡುಗಳ ಬಗ್ಗೆಯೂ ಕುತೂಹಲ ಗರಿಗೆದರಿದೆ. ತನು ವಿ‌ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಖಾಕಿ ತೊಟ್ಟ ಸುದೀಪ್‌

ʼಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ.

ಸುದೀಪ್‌ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡ ʼವಿಕ್ರಾಂತ್‌ ರೋಣʼ ಚಿತ್ರ 2022ರ ಜುಲೈ 28ರಂದು ತೆರೆಕಂಡಿತ್ತು. ʼರಂಗಿತರಂಗʼ ನಿರ್ದೇಶಕ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳಿದ್ದ ʼವಿಕ್ರಾಂತ್‌ ರೋಣʼ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿತ್ತು. ಈ ಥ್ರಿಲ್ಲರ್‌ ಚಿತ್ರ 100 ಕೋಟಿ ರೂ. ಕ್ಲಬ್‌ ಸೇರಿ ಹಲವು ದಾಖಲೆ ಬರೆದಿತ್ತು.  ಅದಾಗಿ ಸುಮಾರು 2 ವರ್ಷಗಳ ಬಳಿಕ ಈ ಚಿತ್ರ ತೆರೆ ಕಾಣಲಿದೆ. ʼಮ್ಯಾಕ್ಸ್‌ʼ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿಯೂ ಬಿಡುಗಡೆಯಾಗಲಿದೆ.