ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ (Actor Darshan) ಬಂಧನವಾಗಿ ಜೈಲು ಸೇರಿ ಸುಮಾರು ಮೂರು ತಿಂಗಳಾಗಿದೆ. ಇವರ ನ್ಯಾಯಾಂಗದ ಬಂಧನದ ಅವಧಿ ಸೆ.9ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಸೋಮವಾರ ಹಾಜರುಪಡಿಸಲಿದ್ದು, ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ.
ಪ್ರಕರಣದಲ್ಲಿ ಈಗಾಗಲೇ 4000 ಪುಟಗಳ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಲಾಗಿದ್ದು, ಇದರಿಂದ ದರ್ಶನ್‌ಗೆ ಕಾನೂನು ಸಂಕಷ್ಟ ಇನ್ನಷ್ಟು ಬಿಗಿಯಾಗಿದೆ. ಇದರ ನಡುವೆ ಜಾಮೀನಿಗಾಗಿ ದರ್ಶನ್ ಕೂಡ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.4ರಂದು ದರ್ಶನ್ ಮತ್ತು ಗ್ಯಾಂಗ್ ವಿರುದ್ಧ 3,991 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು, 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪವಿತ್ರಾ ಗೌಡ, ದರ್ಶನ್ (Actor Darshan) ಸೇರಿ ಒಟ್ಟು 17 ಆರೋಪಿಗಳ ವಿರುದ್ಧ ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್, ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ದೋಷಾರೋಪ ಪಟ್ಟಿಯಲ್ಲಿ ಪವಿತ್ರಾ ಗೌಡ 1ನೇ ಆರೋಪಿಯಾಗಿ, ದರ್ಶನ್ ಅವರನ್ನು 2ನೇ ಆರೋಪಿ ಎಂದೇ ಉಲ್ಲೇಖಿಸಲಾಗಿದೆ. ಇನ್ನು 3 ಪ್ರತ್ಯಕ್ಷ ಸಾಕ್ಷಿಗಳು, ಎಫ್‌ಎಸ್‌ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿರುವುದು, ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳಿರುವುದಾಗಿ ತಿಳಿಸಲಾಗಿತ್ತು. ಪ್ರಕರಣ ತನಿಖೆ ಪೂರ್ಣಗೊಂಡಿಲ್ಲದಿರುವುದರಿಂದ ಸಿಆರ್ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ | Actor Darshan: ದರ್ಶನ್ ಗ್ಯಾಂಗ್ ಮುಂದೆ ಅಂಗಲಾಚುತ್ತಿರುವ ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋ ವೈರಲ್
ಪ್ರಕರಣದಲ್ಲಿ ತನಿಖೆ ಇನ್ನೂ ಬಾಕಿ ಇದೆ. ಇದು ಪ್ರಾಥಮಿಕ ದೋಷಾರೋಪ ಪಟ್ಟಿಯಾಗಿದ್ದು, ತನಿಖೆ ಪೂರ್ಣವಾದ ಬಳಿಕ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದರು. ಇನ್ನು ಎಫ್‌ಐಆರ್‌ನಲ್ಲಿ ಇರುವಂತೆಯೇ ದರ್ಶನ್ ಅವರನ್ನು 2ನೇ ಆರೋಪಿ, ಪವಿತ್ರಾ ಗೌಡ 1ನೇ ಆರೋಪಿ ಎಂದು ಉಲ್ಲೇಖಿಸಲಾಗಿದ್ದು, ಉಳಿದ 15 ಆರೋಪಿಗಳ ಪಾತ್ರ ಹಾಗೂ ಎಫ್‌ಎಸ್‌ಎಲ್, ಡಿಎನ್‌ಎ, ಮರಣೋತ್ತರ ಪರೀಕ್ಷಾ ವರದಿ, ಸ್ಥಳ ಮಹಜರು ವೇಳೆ ದೊರೆತ ಮಾಹಿತಿಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.