Thursday, 12th December 2024

Actor Rajinikanth: ಶ್ರೀದೇವಿ, ಐಶ್ವರ್ಯಾ ರೈ; ರಜನಿಕಾಂತ್‌ ಜತೆ ತೆರೆ ಹಂಚಿಕೊಂಡ ಟಾಪ್‌ 5 ಸ್ಟಾರ್‌ ನಾಯಕಿಯರು

Actor Rajinikanth

ಚೆನ್ನೈ: ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌, ಕಾಲಿವುಡ್‌ ತಲೈವಾ ರಜನಿಕಾಂತ್‌ (Actor Rajinikanth) ಇಂದು (ಡಿ. 12) ತಮ್ಮ 75ನೇ ವರ್ಷದ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಮೂಲದ ಅವರು 1975ರಲ್ಲಿ ತೆರೆಕಂಡ ʼಅಪೂರ್ವ ರಾಗಂಗಳ್‌ʼ ತಮಿಳು ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿ ಕಳೆದ 5 ದಶಕಗಳಿಂದ ಅದೇ ಚಾರ್ಮ್‌ ಉಳಿಸಿಕೊಂಡಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಕಲಾವಿದರ ಪಟ್ಟಿಯಲ್ಲಿ ಇಂದಿಗೂ ಇವರ ಹೆಸರಿದೆ. ಭಾರತ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಖ್ಯಾತಿ ಇವರದ್ದು. ಹಲವು ಸೂಪರ್‌ ಹಿಟ್‌ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಇವರೊಂದಿಗೆ ತೆರೆಮೇಲೆ ಮಿಂಚಿದ ಟಾಪ್‌ 5 ನಾಯಕಿಯ ಪಟ್ಟಿ ಇಲ್ಲಿದೆ.

ರಜನಿಕಾಂತ್‌-ಶ್ರೀದೇವಿ

ರಜನಿಕಾಂತ್‌ ಮತ್ತು ಶ್ರೀದೇವಿ ಭಾರತೀಯ ಚಿತ್ರರಂಗದ ಟಾಪ್‌ ಆನ್‌ಸ್ಕ್ರೀನ್‌ ಜೋಡಿಗಳಲ್ಲಿ ಒಂದು ಎನಿಸಿಕೊಂಡಿದೆ. ಬಹುಭಾಷಾ ನಟಿ ಶ್ರೀದೇವಿ ಅವರು ಹಲವು ಚಿತ್ರಗಳಲ್ಲಿ ರಜನಿಕಾಂತ್‌ಗೆ ನಾಯಕಿಯಾಗಿ ಕಾನಿಸಿಕೊಂಡಿದ್ದಾರೆ. 1976ರಲ್ಲಿ ರಿಲೀಸ್‌ ಆದ ʼಮೂಂಡ್ರು ಮುಡಿಚುʼ ತಮಿಳು ಸಿನಿಮಾದಲ್ಲಿ ಇವರಿಬ್ಬರು ಮೊದಲ ಬಾರಿ ಜತೆಯಾಗಿ ನಟಿಸಿದರು. ಈ ಚಿತ್ರದಲ್ಲಿ ಕಮಲ್‌ ಹಾಸನ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಬಳಿಕ ರಜನಿಕಾಂತ್‌ ಮತ್ತು ಶ್ರೀದೇವಿ ʼಪ್ರಿಯಾʼ, ʼಜಾನಿʼ ಮತ್ತು ʼಪೋಕಿರಿ ರಾಜʼ ಮುಂತಾದ ಸೂಪರ್‌ ಹಿಟ್‌ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ರಜನಿಕಾಂತ್‌-ಜಯಲಕ್ಷ್ಮೀ

ರಜನಿಕಾಂತ್‌ ಮತ್ತು ಫಟಾಫಟ್‌ ಜಯಲಕ್ಷ್ಮೀ ಜೋಡಿ 1978ರಲ್ಲಿ ಬಿಡುಗಡೆಯಾದ ಮಹೇಂದ್ರ ಅವರ ʼಮುಳ್ಳುಂ ಮಲರುಂʼ ತಮಿಳು ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿತು. ಈ ಹಿಂದೆ ಸಂದರ್ಶನವೊಂದರಲ್ಲಿ ರಜನಿಕಾಂತ್‌ ಅವರು ಜಯಲಕ್ಷ್ಮೀ ತಮ್ಮ ನೆಚ್ಚಿನ ಸಹಕಲಾವಿದೆಯಾಗಿದ್ದರು ಎಂದು ತಿಳಿಸಿದ್ದರು. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದ ಜಯಲಕ್ಷ್ಮೀ 1980ರಲ್ಲಿ ತಮ್ಮ 22ನೇ ವಯಸ್ಸಿಗೆ ನಿಧನ ಹೊಂದಿದರು.

ರಜನಿಕಾಂತ್‌-ಶ್ರೀಪ್ರಿಯಾ

1980ರ ದಶಕದಲ್ಲಿ ರಜನಿಕಾಂತ್‌ ಜತೆಗೆ ತೆರೆ ಮೇಲೆ ಮಿಂಚಿದವರು ಶ್ರೀಪ್ರಿಯಾ. 1978ರಲ್ಲಿ ರಿಲೀಸ್‌ ಆದ ತಮಿಳಿನ ʼಭೈರವಿʼ ಸಿನಿಮಾದಲ್ಲಿ ಇವರಿಬ್ಬರು ಮೊದಲ ಬಾರಿಗೆ ಜತೆಯಾಗಿ ನಟಿಸಿದರು. ಬಳಿಕ ಈ ಜೋಡಿ ʼಬಿಲ್ಲಾʼ, ʼಪೊಲ್ಲಾಧವನ್‌ʼನಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿತು. ʼತಾಯ್‌ ಮೇಲ್‌ ಸತ್ಯಂʼ, ʼಅಣ್ಣೈ ಒರು ಆಲಯಂʼ, ʼತನಿಕಟ್ಟುರಾಜʼ, ʼಕಾಳಿʼ ಮುಂತಾದ ಚಿತ್ರಗಳಲ್ಲಿ ರಜನಿಕಾಂತ್‌ ಮತ್ತು ಶ್ರೀಪ್ರಿಯಾ ಮೋಡಿ ಮಾಡಿದ್ದಾರೆ.

ರಜನಿಕಾಂತ್‌-ಶ್ರೀಯಾ ಶರಣ್‌

2007ರಲ್ಲಿ ರಿಲೀಸ್‌ ಆದ ʼಶಿವಾಜಿʼ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಶ್ರೀಯಾ ಶರಣ್‌ ತೆರೆ ಮೇಲೆ ರಜನಿಕಾಂತ್‌ ಜತೆ ಮಿಂಚು ಹರಿಸಿದರು. ತಮಿಳಿನ ಖ್ಯಾತ ನಿರ್ದೇಶಕ ಎಸ್‌. ಶಂಕರ್‌ ಅವರ ಈ ಚಿತ್ರದಲ್ಲಿ ರಜನಿಕಾಂತ್‌ ಮತ್ತು ಶ್ರೀಯಾ ಶರಣ್‌ ಗಂಡ-ಹೆಂಡತಿ ಪಾತ್ರದಲ್ಲಿ ಗಮನ ಸೆಳೆದರು. ಸಾಕಷ್ಟು ವಯಸ್ಸಿನ ಅಂತರ ಇದ್ದರೂ ಈ ಜೋಡಿ ಮೋಡಿ ಮಾಡಿತು.

ರಜನಿಕಾಂತ್‌-ಐಶ್ವರ್ಯಾ ರೈ ಬಚ್ಚನ್‌

ʼಶಿವಾಜಿʼ ಯಶಸ್ಸಿನ ಬಳಿಕ ನಿರ್ದೇಶಕ ಎಸ್‌.ಶಂಕರ್‌ ಮತ್ತು ರಜನಿಕಾಂತ್‌ ಮತ್ತೊಮ್ಮೆ ಒಂದಾದ ಚಿತ್ರ 2010ರಲ್ಲಿ ರಿಲೀಸ್‌ ಆದ ʼಎಂದಿರನ್‌ʼ. ಈ ಸಿನಿಮಾದಲ್ಲಿ ನಾಯಕಿಯಾಗಿ ಐಶ್ವರ್ಯಾ ರೈ ಬಚ್ಚನ್‌ ಕಾಣಿಸಿಕೊಂಡರು. ಇವರಿಬ್ಬರು ಮೊದಲ ಬಾರಿ ಜತೆಯಾಗಿ ನಟಿಸಿದ್ದ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ರೋಬೋಟ್‌ ಮತ್ತು ವಿಜ್ಞಾನಿ ಪಾತ್ರದಲ್ಲಿ ರಜನಿಕಾಂತ್‌ ಕಾಣಿಸಿಕೊಂಡರೆ ಸನಾ ಆಗಿ ಐಶ್ವರ್ಯಾ ಮೋಡಿ ಮಾಡಿದರು. ಬಾಕ್ಸ್‌ ಆಫೀಸ್‌ನಲ್ಲಿ 320 ಕೋಟಿ ರೂ. ಗಳಿಸಿದ ಈ ಚಿತ್ರ ಇಂದಿಗೂ ಹಲವರ ಹಾಟ್‌ ಫೆವರೇಟ್‌ ಎನಿಸಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Actor Rajinikanth: ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ರಜನಿಕಾಂತ್‌; ಬರೋಬ್ಬರಿ 34 ವರ್ಷಗಳ ಬಳಿಕೆ ಒಂದಾಗಲಿದೆ ಹಿಟ್‌ ಜೋಡಿ