Thursday, 12th September 2024

ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ, ಮಿದುಳು ನಿಷ್ಕ್ರಿಯ

ಬೆಂಗಳೂರು: ಹಿರಿಯ ನಟ ಶಿವರಾಂ ಅವರ ಆರೋಗ್ಯ ಗಂಭೀರ ಪರಿಸ್ಥಿತಿ ತಲುಪಿದೆ.

ಬೆಂಗಳೂರಿನ ಬ್ಯಾಂಕ್​ ಕಾಲೋನಿಯಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಂದನವನದ ಅನೇಕ ಹಿರಿಯ ನಟ-ನಟಿಯರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಸದ್ಯಕ್ಕೆ ಶಿವರಾಂ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಕೇಳಿ ಬಂದಿದೆ. ಅವರ ಮಿದುಳು ನಿಷ್ಕ್ರಿಯ ಗೊಂಡಿದ್ದು, ಕೋಮಾ ಹಂತ ತಲುಪಿದ್ದಾರೆ. ಇದು ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಶಿವರಾಂ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಬ್ರೇನ್​ ಡ್ಯಾಮೇಜ್​ ಆಗಿದ್ದು, ಈಗಾಗಲೇ ಅವರು ಕೋಮಾ ಸ್ಥಿತಿ ತಲುಪಿದ್ದಾರೆ.

ಶಿವರಾಂ ಅವರು ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಟೆರೆಸ್​ನಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದರು. ಅವರ ಮಗ ಮತ್ತು ಮೊಮ್ಮಗಳು ಆಸ್ಪತ್ರೆಗೆ ಕರೆದುಕೊಂಡು ಬಂದರು. ಎಂಆರ್​ಐ ಸ್ಕ್ಯಾನ್​ ಮಾಡಿದಾಗ ತಲೆ ಒಳಗೆ ಪೆಟ್ಟು ಬಿದ್ದಿರುವುದು ತಿಳಿಯಿತು ಎಂದು ಡಾ. ಮೋಹನ್​ ಹೇಳಿದ್ದರು.

ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರು ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರ ಅನುಭವ 6 ದಶಕಗಳಿಗೂ ಹೆಚ್ಚು.