Saturday, 14th December 2024

ಜಾಲತಾಣಗಳಲ್ಲಿ ಜಾತಿ ನಿಂದನೆ: ನಟಿ ಮೀರಾ ಮಿಥುನ್ ಬಂಧನ

ತಿರುವನಂತಪುರಂ: ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡಿದ ತಮಿಳು ನಟಿ ಮೀರಾ ಮಿಥುನ್ ಅವರನ್ನು ಕೇರಳದಲ್ಲಿ ತಮಿಳುನಾಡು ಪೊಲೀಸರ ಸೈಬರ್ ಅಪರಾಧ ವಿಭಾಗ ಬಂಧಿಸಿದೆ.

ಆ.12 ರಂದು ಪೊಲೀಸರ ಮುಂದೆ ಹಾಜರಾಗಲು ವಿಫಲವಾದ ನಂತರ ಮಿಥುನ್ ನನ್ನು ಬಂಧಿಸಲಾಯಿತು. ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ಹಾಗೂ ಮಾಜಿ ಸಂಸದೆ ವನ್ನಿ ಅರಸು ನೀಡಿದ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಟ್ವಿಟ್ಟರ್ ವಿಡಿಯೋದಲ್ಲಿ ಮಾಡಿದ ಜಾತಿವಾದಿ ಟೀಕೆಗಳಿಗಾಗಿ ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯ 7 ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.

ಮೀರಾ ವೀಡಿಯೊದಲ್ಲಿ ಹೇಳುವಂತೆ, ನಾನು ಎಸ್ಸಿ ಸಮುದಾಯದ ಸದಸ್ಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿಲ್ಲ. ಆದಾಗ್ಯೂ, ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗಿರುವುದರಿಂದ ಸಮುದಾಯದ ಸದಸ್ಯರು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದಿದ್ದರು.

ಮೀರಾಳನ್ನು ಬಂಧಿಸುವ ಮೊದಲು ತೆಗೆದ ವಿಡಿಯೊದಲ್ಲಿ, ಉದ್ದೇಶಪೂರ್ವಕವಾಗಿ ಕಿರುಚಾಡಿ ತನಗೆ ಚಿತ್ರಹಿಂಸೆ ನೀಡಲಾಗಿದೆ. ಕ್ಯಾಮೆರಾ ಮುಂದೆ ಕಿರುಚಾಡಿ, ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.