ಮುಂಬೈ: ವೈವಿಧ್ಯಮಯ ಪಾತ್ರ, ಅಭಿನಯದಿಂದಲೇ ಪ್ರೇಕ್ಷಕರ ಗಮನ ಸೆಳೆದ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಕೆಲವು ದಿನಗಳ ಬ್ರೇಕ್ ನಂತರ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಬಾಲಿವುಡ್‌ನ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Kii Prem Kahaani) ಮತ್ತು ಹಾಲಿವುಡ್‌ನ ʼಹಾರ್ಟ್ ಆಫ್ ಸ್ಟೋನ್ʼ (Heart of Stone) ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಅವರು ಈ ವರ್ಷ ʼಜಿಗ್ರಾʼ (Jigra) ಹಿಂದಿ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ವಿಶೇಷ ಎಂದರೆ ಆಲಿಯಾ ಭಟ್ ನಟಿಸುವ ಜೊತೆಗೆ ಈ ಚಿತ್ರದ ನಿರ್ಮಾಣದಲ್ಲಿಯೂ ಕೈಜೋಡಿಸಿದ್ದಾರೆ. ವಾಸನ್ ಬಾಲ ನಿರ್ದೇಶನದ ಈ ಸಿನಿಮಾದ ಟೀಸರ್ ಸೆಪ್ಟೆಂಬರ್ 8ರಂದು ರಿಲೀಸ್ ಆಗಲಿದೆ. ಈ ಬಗ್ಗೆ ಆಲಿಯಾ ಭಟ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ.
ಕುತೂಹಲ ಮೂಡಿಸಿದ ಪೋಸ್ಟರ್
ಉದ್ದನೆಯ ಷರ್ಟ್ ಮತ್ತು ಪ್ಯಾಂಟ್ ಧರಿಸಿದ ಆಲಿಯಾ ಭಟ್ ಗಂಭೀರವಾಗಿ ಲುಕ್ ಕೊಡುತ್ತಿರುವುದು ಪೋಸ್ಟರ್‌ನಲ್ಲಿ ಕಂಡು ಬಂದಿದೆ. ಕೆಂಪು ಬಣ್ಣದ ಹಿನ್ನಲೆಯಲ್ಲಿ ಡ್ರ್ಯಾಗನ್ ಮತ್ತು ಲೈಟ್‌ಗಳು ಕಂಡು ಬರುತ್ತಿದೆ. ಈ ಮೂಲಕ ಆಲಿಯಾ ಭಟ್ ಮತ್ತೊಂದು ಪವರ್‌ಫುಲ್ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುವುದು ಖಚಿತ ವಾದಂತಾಗಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ಆಲಿಯಾ ಭಟ್ ಅವರು, ಈ ಚಿತ್ರದ ಪಾತ್ರಕ್ಕಾಗಿ ಬಾಸ್ಕೆಟ್ ಬಾಲ್ ಕಲಿಯುತ್ತಿರುವುದಾಗಿ ತಿಳಿಸಿದ್ದರು.
ಸಿನಿಮಾ ರಿಲೀಸ್ ಯಾವಾಗ?
ʼಜಿಗ್ರಾʼ ಹೆಸರೇ ಸೂಚಿಸುವಂತೆ ಧೈರ್ಯವಂತ ಯುವತಿಯೊಬ್ಬಳ ಕಥೆಯನ್ನು ಹೊಂದಿದ್ದು, ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ. ಆಲಿಯಾ ಭಟ್ ಜೊತೆಗೆ ಈ ಆ್ಯಕ್ಷನ್ ಚಿತ್ರದಲ್ಲಿ ವೇದಾಂಗ್ ರೈನಾ, ಆದಿತ್ಯ ನಂದ ಮತ್ತು ಶೋಭಿತಾ ಧೂಲಿಪಾಲ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2022ರಲ್ಲಿ ತೆರೆಕಂಡ ʼಮೋನಿಕಾ, ಓ ಮೈ ಡಾರ್ಲಿಂಗ್ʼ ಬಾಲಿವುಡ್ ಚಿತ್ರದ ಮೂಲಕ ಗಮನ ಸೆಳದ ವಾಸನ್ ಬಾಲ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
2022ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ ʼಗಂಗೂಭಾಯಿ ಕಥಿಯಾವಾಡಿʼ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಆಲಿಯಾ ಭಟ್ ಅದೇ ವರ್ಷ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದರು. ಆಲಿಯಾ ಭಟ್ ನಿರ್ಮಾಣದ ಮೊದಲ ಚಿತ್ರವಾಗಿ ʼಡಾರ್ಲಿಂಗ್ಸ್ʼ ತೆರೆಕಂಡಿತ್ತು. ಅದಾದ 2 ವರ್ಷಗಳ ಬಳಿಕ 2ನೇ ಸಿನಿಮಾ ʼಜಿಗ್ರಾʼ ಬಿಡುಗಡೆಯಾಗಲು ಸಜ್ಜಾಗಿದೆ.
ಇದನ್ನೂ ಓದಿ: Emergency Movie: ಹೈಕೋರ್ಟ್‌ನಲ್ಲೂ ಕಂಗನಾ ಸಿನಿಮಾ ʻಎಮರ್ಜೆನ್ಸಿʼಗೆ ಹಿನ್ನಡೆ
ʼಜಿಗ್ರಾʼ ಮೇಲಿದೆ ನಿರೀಕ್ಷೆ
ಕಳೆದ ವರ್ಷ ತೆರೆಕಂಡ, ರಣವೀರ್ ಸಿಂಗ್ ಜತೆಗೆ ನಟಿಸಿದ್ದ ಆಲಿಯಾ ಭಟ್ ಚಿತ್ರ ʼರಾಣಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ವಿಯಾಗಿತ್ತು. ಅದಾದ ಬಳಿಕ ತೆರೆಕಂಡ ಅಮೆರಿಕನ್ ಚಿತ್ರ ʼಹಾರ್ಟ್ ಆಫ್ ಸ್ಟೋನ್ʼ ಮುಗ್ಗರಿಸಿತ್ತು. ಹೀಗಾಗಿ ʼಜಿಗ್ರಾʼ ಸಿನಿಮಾದ ಮೇಲೆ ಭರವಸೆ ಇಟ್ಟಿದ್ದಾರೆ.