Friday, 22nd November 2024

ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆ ʼಅಮರನ್‌ʼ ತೆರೆಗೆ ಬರಲು ಕ್ಷಣಗಣನೆ; ಚಿತ್ರತಂಡದಿಂದ ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ

Amaran Movie

ಬೆಂಗಳೂರು: ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ಅಭಿನಯದ ‘ಅಮರನ್’ ಸಿನಿಮಾ (Amaran Movie) ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಅ. 31ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಇದರ ಜತೆಗೆ ಸಿನಿಮಾದ ಪ್ರಚಾರ ಕಾರ್ಯ ಕೂಡ ವೇಗ ಪಡೆದುಕೊಂಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್​​ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಾಧಾರಿತ ಸಿನಿಮಾ ಇದಾಗಿದ್ದು, ಕಣ್ತುಂಬಿಕೊಳ್ಳಲಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ನಟ ಶಿವಕಾರ್ತಿಕೇಯನ್ ಮತ್ತು ಚಿತ್ರತಂಡ ಸಿಲಿಕಾನ್​ ಸಿಟಿ ಬೆಂಗಳೂರಿಗೆ ಭೇಟಿ ನೀಡಿತು.

ದಕ್ಷಿಣ ಭಾರತದ ಬಹುಭಾಷಾ ನಟಿ, ಸೌತ್​ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ನಟ ಶಿವಕಾರ್ತಿಕೇಯನ್ ಮೊದಲ ಬಾರಿಗೆ ʼಅಮರನ್ʼ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್​​ನಲ್ಲಿ ಸಿನಿಮಾದ ಪ್ರೀ‌ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವಕಾರ್ತಿಕೇಯನ್ ಕನ್ನಡದಲ್ಲಿಯೇ ನಮಸ್ಕಾರ ಹೇಳಿ ಬೆಂಗಳೂರಿನ ನಂಟಿನ ಬಗ್ಗೆ ವಿವರಿಸಿದರು. ಅರಮನ್ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ಚಿತ್ರದ ಮೇಲೆ ಇರಲಿ ಎಂದು ಶಿವಕಾರ್ತಿಕೇಯನ್ ಮನವಿ ಮಾಡಿದರು.

ಮೊದಲೇ ಹೇಳಿದಂತೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತವೇ ʼಅಮರನ್ʼ ಸಿನಿಮಾದ ಕಥೆ. ದೀಪಾವಳಿಯಂದು ಭರ್ಜರಿ ಓಪನಿಂಗ್ ಪಡೆಯುವ ಸೂಚನೆ ಹುಟ್ಟಿಸಿದೆ. ʼಅಮರನ್ʼ ಸಿನಿಮಾವನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿದ್ದು, ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಸಿ.ಎಚ್.ಸಾಯಿ ಅವರ ಛಾಯಾಗ್ರಹಣ ಮತ್ತು ಆರ್.ಕಲೈವನನ್ ಅವರ ಸಂಕಲನ ಚಿತ್ರಕ್ಕಿದೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ ಜಂಟಿಯಾಗಿ ನಿರ್ಮಾಣ ಮಾಡಿದೆ.

ಗಮನ ಸೆಳೆದ ಟ್ರೈಲರ್‌

ಇತ್ತೀಚೆಗೆ ರಿಲೀಸ್‌ ಆದ ಟ್ರೈಲರ್‌ ಗಮನ ಸೆಳೆದಿದೆ. ರಜೆಯಲ್ಲಿ ಮನೆಗೆ ಬಂದಿರುವ ಯೋಧ ತನ್ನ ಮಗಳೊಂದಿಗೆ ಇರುವ ಕ್ಷಣ, ಮಗಳಿಗೆ ಒಂದು ಪ್ರೀತಿಯ ಅಪ್ಪುಗೆ ಕೊಟ್ಟು ಮತ್ತೆ ದೇಶ ಸೇವೆಗೆ ಹೋಗುವ ದೃಶ್ಯ , ನಮ್ಮನ್ನು ಬಿಟ್ಟು ನೀನು ದೂರ ಆಗಿದ್ದರೂ ಪರವಾಗಿಲ್ಲ, ಸೇಫ್‌ ಆಗಿರು ಎನ್ನುವ ಪತ್ನಿ ಡೈಲಾಗ್ ನೋಡುಗರನ್ನು ಕಾಡುತ್ತದೆ . ಭುವನ್ ಅರೋರಾ, ರಾಹುಲ್ ಬೋಸ್, ಲಲ್ಲು, ಶ್ರೀಕುಮಾರ್‌, ಶ್ಯಾಮ್‌ ಮೋಹನ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ʼ ಕೃತಿಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರು ಈ ಕೃತಿಯಲ್ಲಿ ಮೇಜರ್ ವರದರಾಜನ್ ಅವರ ಬಗ್ಗೆ ಸಾಕಷ್ಟು ಬರೆದಿದ್ದು ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಕಥೆ ಬರೆದು, ನಿರ್ದೇಶಿಸಿದ್ದಾರೆ.

ಕನ್ನಡ, ತಮಿಳು, ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ʼಅಮರನ್ʼ ಸಿನಿಮಾ ತೆರೆ ಕಾಣಲಿದೆ. ಸಿನಿಮಾದಲ್ಲಿ ಎಮೋಷನ್ ಜತೆಗೆ ಆ್ಯಕ್ಷನ್‌ ಅಂಶಗಳನ್ನು ಬ್ಲೆಂಡ್ ಮಾಡಲಾಗಿದ್ದು, ಇದು ಪ್ರೇಕ್ಷಕರ ಗಮನ ಸೆಳೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Actor Yash: ʼರಾಮಾಯಣʼದಲ್ಲಿ ಅಭಿನಯಿಸುತ್ತಿದ್ದಾರಾ ಯಶ್?‌ ಕೊನೆಗೂ ಮೌನ ಮುರಿದ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು?