ಚೆನ್ನೈ: ತಮಿಳಿನ ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಚಿತ್ರ(Amaran Movie) ಬಿಡುಗಡೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಇದೀಗ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಎಡೆಬಿಡದ ಕರೆಗಳಿಂದಾಗಿ ನಿದ್ದೆ ಮತ್ತು ಓದಿಗೆ ತೊಂದರೆಯಾಗಿದೆ. ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಅಮರನ್ ಸಿನಿಮಾ ತಂಡದ ವಿರುದ್ಧ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಲೀಗಲ್ ನೊಟೀಸ್ ಕಳುಹಿಸಿದ್ದಾನೆ.
ಏನಿದು ಪ್ರಕರಣ?
ವಾಗೀಶನ್ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿ ʼಅಮರನ್ʼ ಚಿತ್ರದ ನಿರ್ಮಾಪಕರಿಗೆ ಚೆನ್ನೈ ವಿದ್ಯಾರ್ಥಿಯೊಬ್ಬರು ಕೋರ್ಟ್ ನೋಟಿಸ್ ಕಳುಹಿಸಿರುವ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಚಿತ್ರದಲ್ಲಿ ತನ್ನ ಫೋನ್ ನಂಬರನ್ನು ಬಳಸಲಾಗಿದೆ ಎಂದು ಆರೋಪಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ವಿ.ವಿ ವಾಗೀಶನ್ ನೋಟಿಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ಸಾಯಿ ಪಲ್ಲವಿ ನಿರ್ವಹಿಸಿದ ಪಾತ್ರಕ್ಕೆ ವಿದ್ಯಾರ್ಥಿಯ ಫೋನ್ ನಂಬರ್ ಬಳಸಲಾಗಿದೆ. ಚಿತ್ರ ಬಿಡುಗಡೆಯಾದ ನಂತರ ಸಾಯಿ ಪಲ್ಲವಿ ಅವರ ಅಭಿಮಾನಿಗಳಿಂದ ರಾತ್ರಿಯಿಡೀ ಈ ನಂಬರ್ ಗೆ ನಿರಂತರ ಕರೆಗಳು ಬರುತ್ತಿವೆ. ಇದರಿಂದ ತನಗೆ ಮಾನಸಿಕ ತೊಂದರೆಯಾಗಿದೆ ಎಂದು ವಾಗೀಶನ್ ಆರೋಪಿಸಿದ್ದಾರೆ.
ನಿರಂತರ ಫೋನ್ ಕರೆಗಳಿಂದಾಗಿ ನಿದ್ದೆ ಮತ್ತು ಓದಿಗೆ ತೊಂದರೆಯಾಗಿದ್ದು,ಮಾನಸಿಕ ನೆಮ್ಮದಿ ಹಾಳಾಗಿದೆ. ಸಿನಿಮಾದಲ್ಲಿ ತನ್ನ ಫೋನ್ ನಂಬರ್ ಬಳಸಿದ್ದಕ್ಕಾಗಿ 1.1 ಕೋಟಿ ರುಪಾಯಿ ಪರಿಹಾರ ನೀಡಬೇಕೆಂದು ವಾಗೀಶನ್ ಒತ್ತಾಯಿಸಿದ್ದಾರೆ. ಈ ನಂಬರ್ ಸಾಯಿ ಪಲ್ಲವಿ ಅವರದ್ದಲ್ಲ ಎಂದರೂ ಕೇಳುತ್ತಿಲ್ಲ. ನಿರಂತರವಾಗಿ ಅಪರಿಚಿತ ನಂಬರ್ ಗಳಿಂದ ಕರೆಗಳು ಬರುತ್ತಲೇ ಇವೆ. ಈ ಮೊದಲು ವಿಷಯ ತಿಳಿದಿರಲಿಲ್ಲ. ನಂತರ ʼಅಮರನ್ʼ ಚಿತ್ರದಲ್ಲಿ ನನ್ನ ಫೋನ್ ನಂಬರ್ ಬಳಕೆಯಾಗಿದೆ ಎಂಬುದು ತಿಳಿಯಿತು. ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಮತ್ತು ಇನ್ನಿತರ ದಾಖಲೆಗಳಲ್ಲಿ ಈ ನಂಬರ್ ಲಿಂಕ್ ಆಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಫೋನ್ ನಂಬರ್ ಬದಲಾಯಿಸಲಾಗುವುದಿಲ್ಲ. ಚಿತ್ರತಂಡ ಈ ಕೂಡಲೇ ನನ್ನ ಫೋನ್ ನಂಬರ್ ಅನ್ನು ತೆಗೆಯಬೇಕು ಎಂದು ವಿದ್ಯಾರ್ಥಿ ಹೇಳಿದ್ದಾರೆ.
ಇದು ಮೊದಲ ಎಡವಟ್ಟೇನಲ್ಲ!
2019ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್ನ ಅರ್ಜುನ್ ಪಟಿಯಾಲಾ ಸಿನಿಮಾದಲ್ಲಿ ಇಂತಹುದೇ ಒಂದು ಎಡವಟ್ಟು ನಡೆದಿತ್ತು. ಈ ಚಿತ್ರದಲ್ಲಿ ನಟಿ ಸನ್ನಿಲಿಯೋನ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಸಿನಿಮಾ ನಾಯಕನಿಗೆ ಸನ್ನಿ ಲಿಯೋನ್ ಮೊಬೈಲ್ ನಂಬರ್ ನೀಡುವ ದೃಶ್ಯವೊಂದಿತ್ತು. ಈ ವೇಳೆ ಸನ್ನಿ ಲಿಯೋನ್ 10 ಸಂಖ್ಯೆಯನ್ನು ಹೇಳುತ್ತಾರೆ. ಇದನ್ನೇ ಹಲವರು ಸನ್ನಿ ಲಿಯೋನ್ ಎಂದು ನಂಬಿ ಕರೆ ಮಾಡಿದ್ದರು. ಆದರೆ ಕರೆ ದೆಹಲಿ ನಿವಾಸಿಯೊಬ್ಬರಿಗೆ ಹೋಗುತ್ತಿತ್ತು. ಈ ಸಂಬಂಧ ಅರ್ಜುನ್ ಪಟಿಯಾಲಾ ಚಿತ್ರತಂಡದ ವಿರುದ್ಧ ದೂರನ್ನು ದಾಖಲಿಸಲಾಗಿತ್ತು. ದೆಹಲಿ ನಿವಾಸಿಯೊಬ್ಬರು ತಮಗೆ ಬರುತ್ತಿದ್ದ ಅಪರಿಚಿತ ಕರೆಗಳಿಂದ ತನ್ನ ಮಾನಸಿಕ ನೆಮ್ಮದಿ ಹಾಳಾಗಿದ್ದು, ತಾನು ಸನ್ನಿಲಿಯೋನ್ ಕಡೆಯವನಲ್ಲ ಎಂದರೂ ಕೇಳುತ್ತಿಲ್ಲ, ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. ಚಿತ್ರತಂಡವು ಶೂಟಿಂಗ್ ವೇಳೆ ನನಗೆ ಹೇಳಿದ ಫೋನ್ ನಂಬರನ್ನಷ್ಟೇ ನಾನು ಹೇಳಿದ್ದೆ ಈ ಕುರಿತು ನನಗೇನು ಗೊತ್ತಿಲ್ಲ ಎಂದು ಸ್ವತಃ ಸನ್ನಿಲಿಯೋನ್ ಪ್ರತಿಕ್ರಿಯಿಸಿದ್ದರು.
ಇರುವ ನಿಯಮವೇನು?
ಸಿನಿಮಾಗಳಲ್ಲಿ ಬಳಕೆಯಲ್ಲಿರದ ಫೋನ್ ನಂಬರ್ ಬಳಸಬೇಕು ಎಂಬ ನಿಯಮವಿದೆ. ಸಾಮಾನ್ಯವಾಗಿ ಪ್ರಚಾರದ ಉದ್ದೇಶಕ್ಕಾಗಿ ನೋಂದಾಯಿಸಿಕೊಂಡಿರುವ ಸಂಖ್ಯೆಯನ್ನು ಬಳಸಬೇಕು ಎಂಬ ನಿಯಮವೂ ಇದೆ. ಆದರೆ ಅಮರನ್ ಚಿತ್ರತಂಡ ಈ ನಿಯಮ ಪಾಲನೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿ ವಿ.ವಿ.ವಾಗೀಶನ್ ನೀಡಿರುವ ನೋಟಿಸ್ಗೆ ಚಿತ್ರತಂಡದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗುತ್ತಿದೆ.
ʼಅಮರನ್ʼ ಚಿತ್ರ
ಮೇಜರ್ ಮುಕುಂದ್ ವರದರಾಜನ್ ಅವರ ಜೀವನಕಥೆಯನ್ನು ಆಧರಿಸಿದ ‘ಅಮರನ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. 2024ರ ಅಕ್ಟೋಬರ್ 31ರಂದು ಬಿಡುಗಡೆಯಾದ ಅಮರನ್ ಚಿತ್ರವನ್ನು ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಮತ್ತು ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಜಂಟಿಯಾಗಿ ನಿರ್ಮಿಸಿವೆ.
ನಟ ಶಿವಕಾರ್ತಿಕೇಯನ್ ಮೇಜರ್ ಮುಕುಂದ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಾಯಿ ಪಲ್ಲವಿ ನಾಯಕ ನಟಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಭುವನ್ ಅರೋರಾ, ರಾಹುಲ್ ಬೋಸ್, ಶ್ರೀಕುಮಾರ್, ವಿಕಾಸ್ ಬಂಗರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Amaran Movie: ಶಿವಕಾರ್ತಿಕೇಯನ್-ಸಾಯಿಪಲ್ಲವಿ ಜೋಡಿಯ ‘ಅಮರನ್’ಗೆ ಪ್ರೇಕ್ಷಕರ ಜೈಕಾರ; 259 ಕೋಟಿ ರೂ. ಗಳಿಕೆ