ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈಗಾಗಲೇ 7 ವಾರಗಳು ಕೊನೆಗೊಂಡಿದೆ. ಊಹಿಸಲಾಗದ ನಾಮಿನೇಟ್ ಕೂಡ ಶುರುವಾಗಿದೆ. ಏಳನೇ ವಾರ ಪ್ರಬಲ ಸ್ಪರ್ಧಿಯೇ ಮನೆಯಿಂದ ಔಟ್ ಆಗಿದ್ದಾರೆ. ಅಚ್ಚರಿ ಎಂಬಂತೆ ಅನುಷಾ ರೈ ಅರ್ಧಶತಕಕ್ಕೆ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ 5 ಸ್ಪರ್ಧಿಗಳು ಆಚೆ ಹೋಗಿದ್ದಾರೆ. ನಟಿ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ರಂಜಿತ್, ಹಂಸ ಹಾಗೂ ಮಾನಸಾ ಔಟ್ ಆಗಿದ್ದರು. ಸದ್ಯ ಈ ಲಿಸ್ಟ್ಗೆ ಅನುಷಾ ಸೇರಿಕೊಂಡಿದ್ದಾರೆ.
ಧರ್ಮಾ ಕೀರ್ತಿರಾಜ್ ಹಾಗೂ ಅನುಷಾ ರೈ ಕೊನೆಯದಾಗಿ ಡೇಂಜರ್ ಝೋನ್ನಲ್ಲಿ ಇದ್ದರು. ಇವರನ್ನು ಆ್ಯಕ್ಟಿವಿಟಿ ರೂಮ್ಗೆ ಕಳುಹಿಸಲಾಗಿತ್ತು. ಯಾರ ಮೇಲೆ ರೆಡ್ ಲೈಟ್ ಕೊನೆಯದಾಗಿ ನಿಲ್ಲುತ್ತೊ ಅವರ ಪ್ರಯಾಣ ಕೊನೆಯಾಗಲಿದೆ ಎಂದು ಸುದೀಪ್ ಹೇಳಿದ್ದರು. ಅದರಂತೆ ಕೊನೆಯಲ್ಲಿ ಅನುಷಾ ಆರನೇ ಸ್ಪರ್ಧಿಯಾಗಿ ಮನೆಯಿಂದ ನಿರ್ಗಮಿಸಿದ್ದಾರೆ. ಧರ್ಮಾ ಕೂದಲೆಳೆಯಲ್ಲಿ ಸೇವ್ ಆಗಿದ್ದಾರೆ.
ಇತರೆ ಸ್ಪರ್ಧಿಗಳಿಗೆ ಹೋಲಿಸಿಕೊಂಡರೆ ಅನುಷಾ ರೈ ಅವರು ಮನೆಯಲ್ಲಿ ತುಸು ಕಡಿಮೆ ಗಮನ ಸೆಳೆದಿದ್ದಾರೆ. ಟಾಸ್ಕ್ಗಳಲ್ಲಿಯೂ ಅದ್ಭುತ ಎಂಬಂತಹ ಪ್ರದರ್ಶನ ತೋರಿಲ್ಲ. ವಾರ-ವಿವಾದಗಳಲ್ಲಿ, ಮನೊರಂಜನೆಯನ್ನೂ ಹೆಚ್ಚಾಗಿ ನೀಡಿಲ್ಲ. ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರಾದರೂ ಅದು ಮುಂದಿನ ವಾರಕ್ಕೆ ಉಳಿದುಕೊಳ್ಳುವಷ್ಟು ಸಾಕಾಗಿಲ್ಲ. ಹೀಗಾಗಿ ಅನುಷಾ ಮನೆಯಿಂದ ಔಟ್ ಆಗಿದ್ದಾರೆ.
ವೇದಿಕೆ ಮೇಲೆ ಬಂದ ನಂತರ ಸ್ವತಃ ಅನುಷಾ ಅವರೇ ತಾನು ಮನೆಯಿಂದ ಔಟ್ ಆಗಲು ಏನು ಕಾರಣ ಎಂದು ಹೇಳಿದ್ದಾರೆ. ಕೆಲವೊಂದು ಕಡೆ ನಾನು ಇನ್ನೂ ಸ್ಟ್ರಾಂಗ್ ಆಗಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಬಿಗ್ ಬಾಸ್ನ ಆಟವನ್ನು ಬಿಗ್ ಬಾಸ್ ರೀತಿಯಲ್ಲೇ ಆಡಬೇಕಿತ್ತು. ಎಲ್ಲೋ ಒಂದು ಕಡೆ ನಾನು ಭಾವನೆಗೆ ಒಳಗಾದ ಅನಿಸುತ್ತದೆ.
ಅಂದರೆ ನಾನು ತೆಗೆದುಕೊಳ್ಳುವ ನಿರ್ಧಾರ, ಆಡುವ ಮಾತುಗಳು ಇತರೆ ಸ್ಪರ್ಧಿಗಳಿಗೆ ಎಲ್ಲಿ ನೋವು ಆಗುತ್ತೋ ಅನ್ನೋ ಭಾವನೆ ನನ್ನಲ್ಲಿತ್ತು. ಇದೇ ಕಾರಣಕ್ಕೆ ಎಷ್ಟೋ ಕಡೆ ಮಾತನಾಡಲು ಹಿಂದೇಟು ಹಾಕಿದ್ದು ಉಂಟು. ಎಷ್ಟೋ ಸಲ ನನಗೆ ಮೋಸ ಆಗುತ್ತಿದ್ದರೂ ನಾನು ಧ್ವನಿ ಎತ್ತಲಿಲ್ಲ. ಈ ಕಾರಣಕ್ಕೆ ನನ್ನ ಆಟದಲ್ಲಿ ನಾನು ಸೋತು ಬಿಟ್ಟೆ. ಗೇಮ್ ವಿಚಾರದಲ್ಲಿ ಬಂದಾಗ ಇನ್ನೂ ಶ್ರಮ ಹಾಕಬೇಕಾಗಿತ್ತು ಎಂದು ಸುದೀಪ್ ಮುಂದೆ ಅನುಷಾ ಹೇಳಿಕೊಂಡಿದ್ದಾರೆ.
BBK 11: ಬಿಗ್ ಬಾಸ್ ಮನೆಗೆ ಸ್ಫೋಟಕ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು: ಯಾರಿವರು?