Sunday, 15th December 2024

ರಾಜ್ಯಾದ್ಯಂತ ಜೇಮ್ಸ್ ಜಾತ್ರೆ: ವಿ ಮಿಸ್​ ಯೂ ಅಪ್ಪು ಅಂದ್ರು ಅಭಿಮಾನಿ ವೃಂದ

ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಗುರುವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲ. ಕೊನೆಯ ಬಾರಿ ತೆರೆಯ ಮೇಲೆ ನಟನನ್ನ ಅಭಿಮಾನಿಗಳು ಕಣ್ತುಂಬಿಕೊಂಡಿದ್ದು, ವಿ ಮಿಸ್​ ಯೂ ಅಪ್ಪು ಎನ್ನುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ 5 ಗಂಟೆಯಿಂದಲೇ ಅಪ್ಪು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಿದ್ದೆಗೆಟ್ಟು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ. ಮುಂಜಾನೆಯೇ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡಿ ದ್ದಾರೆ.

ಅಪ್ಪು ಅಭಿನಯದ ಜೇಮ್ಸ್, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದ್ದು, ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಕನ್ನಡದಲ್ಲಿ ಬರೋಬ್ಬರಿ 13.80 ಕೋಟಿಗೆ ಮಾರಾಟವಾಗಿದೆ. ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 6 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿತ್ತು. ಕೆಜಿಎಫ್ ಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಜೇಮ್ಸ್ ರೈಟ್ಸ್ ಸೇಲ್​ ಆಗಿದ್ದು, ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಗೆ ಸೇಲಾಗಿದೆ ಎನ್ನಲಾಗಿದೆ.

ಇನ್ನು ಬಿಡುಗಡೆಗೂ ಮುನ್ನವೇ ಹಲವಾರು ಚಿತ್ರಮಂದಿರಗಳಲ್ಲಿ ಹೆಚ್ಚು ಶೋಗಳು ಬುಕ್​ ಆಗಿದ್ದು, ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರಲ್ಲಿ ಶೋ ಆರಂಭವಾಗಿದೆ. ವೀರೇಶ್ ಚಿತ್ರಮಂದಿರದ 12 ಶೋ ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ರಾಯಚೂರಿನ ನೀಲಕಂಠೇಶ್ವರ ಥಿಯೇಟರ್, ಚಿಕ್ಕಬಳ್ಳಾಪುರ ನಗರದ ವಾಣಿ ಟಾಕೀಸ್ ಹಾಗೂ ಬಾಲಾಜಿ ಟ್ಯಾಕೀಸ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.