ಮುಂಬೈ: ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ (A.R. Rahman) ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಎ.ಆರ್.ರೆಹಮಾನ್ ಅವರ ಪತ್ನಿ ಸೈರಾ ಬಾನು (Saira Banu) ಸುಮಾರು 3 ದಶಕಗಳ ದಾಂಪತ್ಯ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಎ.ಆರ್.ರೆಹಮಾನ್ 1995ರಲ್ಲಿ ಸೈರಾ ಬಾನು ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
ಪತಿ ಮತ್ತು ಪತ್ನಿ ನಡುವೆ ಪ್ರೀತಿ ಇದ್ದರೂ ಇಬ್ಬರ ಸಂಬಂಧದಲ್ಲಿ ಬಿರುಕು ಮಾಡಿದೆ. ಹೀಗಾಗಿ ಸೈರಾ ಅವರು ಪತಿ ರೆಹಮಾನ್ ಅವರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
“ಮದುವೆಯಾದ ಸುಮಾರು 29 ವರ್ಷಗಳ ನಂತರ ಸೈರಾ ತನ್ನ ಪತಿ ಎ.ಆರ್.ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರ ಸಂಬಂಧದಲ್ಲಿ ಕಂಡುಬಂದ ಭಾವನಾತ್ಮಕ ಒತ್ತಡದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ಪರಸ್ಪರರ ಬಗ್ಗೆ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಯ ಮಧ್ಯೆ ಆಳವಾದ ಕಂದಕ ಸೃಷ್ಟಿಯಾಗಿದೆ. ಸೈರಾ ಅವರ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕುʼʼ ಎಂದು ವಕೀಲರು ಮನವಿ ಮಾಡಿದ್ದಾರೆ.
ಎ.ಆರ್.ರೆಹಮಾನ್ ಮತ್ತು ಸೈರಾ ಅವರದ್ದು ಹಿರಿಯರು ನಿಶ್ಚಿಯಿಸಿದ ಮದುವೆಯಾಗಿತ್ತು. ಈ ಹಿಂದೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದ ಎ.ಆರ್.ರೆಹಮಾನ್ ಈ ವಿಚಾರ ತಿಳಿಸಿದ್ದರು. ತಾಯಿ ನಿಶ್ಚಯಿಸಿದ ಹುಡುಗಿಯೊಂದಿಗೆ ವಿವಾಹವಾದ ಸಂಗತಿಯನ್ನು ಅವರು ವಿವರಿಸಿದ್ದರು. ಕೆಲಸದಲ್ಲಿ ನಿರತರಾಗಿದ್ದರಿಂದ ವಧುವನ್ನು ಹುಡುಕಲು ಸಮಯವಿಲ್ಲ ಎಂದು ತಾಯಿ ಜತೆ ಹೇಳಿದ್ದನ್ನು ನೆನಪಿಸಿಕೊಂಡಿದ್ದರು. “ಆಗ ನನಗೆ 29 ವರ್ಷ ವಯಸ್ಸಾಗಿತ್ತು. ತಾಯಿ ಬಳಿ ನನಗೆ ವಧುವನ್ನು ಹುಡುಕಿಕೊಡಿ ಎಂದು ನಾನು ಕೇಳಿದ್ದೆʼʼ ಎಂಬುದಾಗಿ ಅವರು ಹೇಳಿದ್ದರು. ಸೈರಾ ಅವರು ಗುಜರಾತ್ ಮೂಲದವರು.
ಎ.ಆರ್.ರೆಹಮಾನ್ ಅವರ ಮಗಳು ಖತೀಜಾ ರೆಹಮಾನ್ ಅವರ ವಿವಾಹ 2022ರಲ್ಲಿ ನೆರವೇರಿತು. ಈ ವೇಳೆ ಎ.ಆರ್.ರೆಹಮಾನ್ ಅವರು ತಮ್ಮ ಕುಟುಂಬದೊಂದಿಗಿನ ಫೋಟೊ ಹಂಚಿಕೊಂಡಿದ್ದರು.
ʼಸ್ಲಂ ಡಾಗ್ ಮಿಲಿಯನೇರ್ʼ ಚಿತ್ರಕ್ಕಾಗಿ 2 ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಎ.ಆರ್.ರೆಹಮಾನ್ ಅವರು ಬರೋಬ್ಬರಿ 6 ಬಾರಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕರಾಗಿಯೂ ಗಮನ ಸೆಳೆಯುತ್ತಿರುವ ಅವರು ಸಿಂಗರ್ ಆಗಿಯೂ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಪ್ರತಿ ಹಾಡಿಗೆ 3 ಕೋಟಿ ರೂ. ಚಾರ್ಜ್ ಮಾಡುತ್ತಾರಂತೆ. ಇದು ದೇಶದ ಇತರ ಪ್ರಸಿದ್ಧ ಗಾಯಕರು ಪಡೆಯುವ ಸಂಭಾವನೆಗಿಂತ ಸುಮಾರು 12-15 ಪಟ್ಟು ಅಧಿಕ. ಡಿವೋರ್ಸ್ ವಿಚಾರದ ಬಗ್ಗೆ 57 ವರ್ಷದ ಅವರು ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಸುದ್ದಿಯನ್ನೂ ಓದಿ: Isha Koppikar: ಆತ ಬೇಜವಾಬ್ದಾರಿ ಮನುಷ್ಯ… ವಿಚ್ಛೇದನ ಕಾರಣ ಬಿಚ್ಚಿಟ್ಟ ʻಸೂರ್ಯವಂಶʼ ನಾಯಕಿ