ಬೆಂಗಳೂರು: ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ತೇಜೇಶ್ವರ್ (Aniissh) ʼಆರಾಮ್ ಅರವಿಂದ ಸ್ವಾಮಿʼ (Araam Aravinda Swamy) ಸಿನಿಮಾ ಮೂಲಕ ರೊಮ್ಯಾಂಟಿಕ್ ಹೀರೋ ಆಗಿ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರನ್ನು ಗಮನಸೆಳೆಯುತ್ತಿರುವ ಚಿತ್ರತಂಡ ಮತ್ತೊಂದು ಹಾಡನ್ನು ರಿಲೀಸ್ ಮಾಡಿದೆ. ಜತೆಗೆ ಈಗ ಬಿಡುಗಡೆ ದಿನಾಂಕ ಘೋಷಿಸಿದೆ. ʼಆರಾಮ್ ಅರವಿಂದ ಸ್ವಾಮಿʼ ಸಿನಿಮಾ ನವೆಂಬರ್ 22ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ.
ʼಮುಂದೆ ಹೇಗೋʼ ಕುಣಿದ ಅನೀಶ್
ಟೈಟಲ್ ಟ್ರ್ಯಾಕ್ ಮೂಲಕ ಜಬರ್ದಸ್ತ್ ಆಗಿ ಕುಣಿದಿದ್ದ ಅನೀಶ್ ತೇಜೇಶ್ವರ್ ಈಗ ʼಮುಂದೆ ಹೇಗೋ ಏನೋʼ ಎನ್ನುತ್ತಾ ನಾಯಕಿ ಮಿಲನಾ ನಾಗರಾಜ್ ಎದುರು ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಅನೀಶ್‌ಗೆ ಮೊದಲ ಬಾರಿಗೆ ಮಿಲನಾ ನಾಗರಾಜ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಮಲ್ಲು ಕುಟ್ಟಿಯಾಗಿ ಮಿಂಚಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯದ ʼಮುಂದೆ ಹೇಗೋ ಏನೋʼ ಮೆಲೋಡಿ ಹಾಡಿಗೆ ನಿಹಾಲ್ ಥೌರೊ ಧ್ವನಿಯಾಗಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ.
‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಆ್ಯಂಡ್ ಗ್ಯಾಂಗ್’ ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಲ್ಲಿ ಅನೀಶ್‌ಗೆ ಮಿಲನಾ ನಾಗರಾಜ್ ಜತೆಗೆ ಹೃತಿಕಾ ಶ್ರೀನಿವಾಸ್ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಅಕಿರ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ‘ಗುಳ್ಟು’ ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ವೈ.ವಿ.ಬಿ. ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್. ಬಿ. ಸಂಕಲನ ಈ ಸಿನಿಮಾಕ್ಕಿದೆ. ಚಿತ್ರತಂಡ ಇದೀಗ ಭರದಿಂದ ಪ್ರಚಾರ ನಡೆಸುತ್ತಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ.
ಕಳೆದ ತಿಂಗಳು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿರುವ ಮಿಲನಾ ನಾಗ್‌ರಾಜ್ ಅವರೂ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೊದಲ ಬಾರಿಗೆ ಮಲಯಾಳಂ ಮೂಲದ ಯುವತಿ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ಅಲ್ಲದೆ ಅನೀಶ್ ಮತ್ತು ಮಿಲನಾ ನಟನೆಯ ಮೊದಲ ಸಿನಿಮಾ ಇದಾಗಿದ್ದು, ಸೆಟ್ಟೇರಿದ ದಿನದಿಂದಲೇ ಗಮನ ಸೆಳೆದಿದೆ. ಕೆಲವು ದಿನಗಳ ಹಿಂದೆ ಮಿಲನಾ ಡಬ್ಬಿಂಗ್ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: Milana Nagaraj: ಮುದ್ದು ಮಗಳ ಮುಖ ರಿವೀಲ್ ಮಾಡಿದ ಮಿಲನಾ-ಡಾರ್ಲಿಂಗ್ ಕೃಷ್ಣ; ವಿಡಿಯೊ ಇಲ್ಲಿದೆ
2010ರಲ್ಲಿ ಬಿಡುಗಡೆಯಾದ ʼಪೊಲೀಸ್ ಕ್ವಾರ್ಟಸ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅನೀಶ್ ಈಗ ನಿರ್ಮಾಪಕ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. 2021ರಲ್ಲಿ ರಿಲೀಸ್ ಆದ ʼರಾಮಾರ್ಜುನʼ ಸಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಅವರು ಇದೀಗ ʼಬೆಂಕಿʼ, ʼಎನ್‌ಆರ್‌ಐʼ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. 2018ರಲ್ಲಿ ಬಿಡುಗಡೆಯಾದ ʼವಾಸು ನಾನ್ ಪಕ್ಕಾ ಕಮರ್ಶಿಯಲ್ʼ ಅನೀಶ್ ನಿರ್ಮಾಣದ ಮೊದಲ ಚಿತ್ರ. ಅವಿನಾಶ್, ರಾಜ್ ದೀಪಕ್ ಶೆಟ್ಟಿ, ನಿಶ್ವಿಕಾ ನಾಯ್ಡು ಮುಂತಾದವರು ನಟಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು.