ಬೆಂಗಳೂರು: ‘ಹುಲಿಬೇಟೆ’ (Hulibete) ಸಿನಿಮಾ ಮೂಲಕ ಭೂಗತ ಲೋಕದ ಪ್ರೇಮಕಥೆ ಹೇಳಿದ್ದ ನಿರ್ದೇಶಕ ರಾಜ್ ಬಹದ್ದೂರ್ ಈಗ ದರೋಡೆಯ ಕಥೆ ಹೊತ್ತು ಬಂದಿದ್ದು, ʼಅಸುರರುʼ ಸಿನಿಮಾ (Asuraru Movie)ದ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಸಂತ ನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇತ್ತೀಚೆಗೆ ಜರುಗಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಈ ವೇಳೆ ನಿರ್ದೇಶಕ ರಾಜ್ ಬಹದ್ದೂರ್ ಮಾತನಾಡಿ, ʼʼಈ ಹಿಂದೆ ನಾನು ʼಹುಲಿಬೇಟೆʼ ಸಿನಿಮಾ ಮಾಡಿದ್ದೆ. ತಾತ ಹೇಳುತ್ತಿದ್ದ ಕಥೆ ಇದು. ಚಿಕ್ಕಂದಿನಲ್ಲಿ ಈ ಕಥೆ ಕೇಳಿ ರೋಮಾಂಚನವಾಗುತ್ತಿತ್ತು. ಅಂದು ನನಗೆ ತಲೆಯಲ್ಲಿತ್ತು. ಹಿಂದೆ ನಮಗೆ ಗೊತ್ತಿಲ್ಲದ ವಿಷಯ ತುಂಬಾ ನಡೆದಿದೆ. ಅಂತಹ ವಿಷಯವನ್ನು ಜನರಿಗೆ ಪರಿಚಯಸಬೇಕು ಎಂದಾಗ ʼಅಸುರರುʼ ಸಿನಿಮಾ ಮಾಡಿದ್ದು. ʼಅಸುರರುʼ ಅಂದರೆ ರಾಕ್ಷಸರರು. ಇವರು ಬೇರೆ. ಇವರು ಊರಿನ ಜನಗಳ ಮಧ್ಯೆ ಇರುತ್ತಿರಲಿಲ್ಲ. ಇವರ ಕೆಲಸ ದರೋಡೆ ಮಾಡುವುದು. ಅವರೇ ಅಸುರರುʼʼ ಎಂದು ತಿಳಿಸಿದರು.
ನಾಯಕ ತಮ್ಮಣ್ಣ ಮಾತನಾಡಿ, ʼʼಸಿನಿಮಾ ಇಲ್ಲಿವರೆಗೂ ಬರಲು ಕಾರಣ ಇಡೀ ಸಿನಿಮಾ ತಂಡ. ಎಲ್ಲರೂ ಎಲ್ಲಾ ಕೆಲಸ ಮಾಡಿದ್ದಾರೆ. ನವೆಂಬರ್ 1ರಂದು ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿದೆʼʼ ಎಂದು ಮನವಿ ಮಾಡಿದರು.
ʼಅಸುರರುʼ ಚಿತ್ರಕ್ಕೆ ರಾಜ್ ಬಹದ್ದೂರ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ರಾಜ್ ಬಹದ್ದೂರ್ ಜೊತೆಯಲ್ಲಿ ರಾಹುಲ್ ಗಾಯಕವಾಡ, ತಮ್ಮಣ್ಣ ಟಿ.ಕೆ., ತಿಪ್ಪಣ್ಣ ಟಿ.ಎಸ್, ಮಲ್ಲಿಕಾರ್ಜುನ್ ಮಿಮಿಕ್ರಿ, ಸುಪ್ರಿತಾ ರಾಜ್ ತಾರಾಬಳಗದಲ್ಲಿದ್ದಾರೆ.
ರಾಜ್ ಬಹದ್ದೂರ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್‌ನಡಿ ನಿರ್ಮಾಣವಾಗಿರುವ ʼಅಸುರರುʼ ಸಿನಿಮಾಕ್ಕೆ ಸುರೇಶ್ ಅರಸ್ ಸಂಕಲನ, ಸುಭಾಷ್ ಸಂಗೀತ, ನವೀನ್ ಸೂರ್ಯ ಛಾಯಾಗ್ರಹಣ ಒದಗಿಸಿದ್ದಾರೆ. ನೈಜ ಘಟನೆಯಾಧಾರಿತ ʼಅಸುರರುʼ ಸಿನಿಮಾದಲ್ಲಿ ದರೋಡೆ ಕಥೆಯನ್ನು ಕಟ್ಟಿ ಕೊಡಲಾಗಿದೆ. ಟೀಸರ್ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಚಿತ್ರತಂಡ ನವೆಂಬರ್ 1ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.
ಈ ಸುದ್ದಿಯನ್ನೂ ಓದಿ: Sandalwood News: ನೂರೆಂಟು ಗಣೇಶನ ದರ್ಶನ ಪಡೆದ ʼಮಿ. ರಾಣಿʼ ಚಿತ್ರತಂಡ!