Monday, 4th November 2024

Bagheera Box Office: ಬಾಕ್ಸ್‌ ಆಫೀಸ್‌ನಲ್ಲಿ ‘ಬಘೀರ’ನ ಮ್ಯಾಜಿಕ್‌; 3 ದಿನಗಳಲ್ಲಿ ಶ್ರೀಮುರಳಿ-ರುಕ್ಮಿಣಿ ಚಿತ್ರ ಗಳಿಸಿದ್ದೆಷ್ಟು?

Bagheera Box Office

ಬೆಂಗಳೂರು: ದೀಪಾವಳಿ (Deepavali) ಸಂಭ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆರೆಕಂಡ ಸ್ಯಾಂಡಲ್‌ವುಡ್‌ನ ʼಬಘೀರʼ (Bagheera) ಚಿತ್ರ ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಲು ಸಜ್ಜಾಗಿದೆ. ಬಹು ದಿನಗಳ ಬ್ರೇಕ್‌ ಬಳಿಕ ಶ್ರೀಮುರಳಿ (Sri Murali) ಮತ್ತೆ ತೆರೆ ಮೇಲೆ ಬಂದಿದ್ದು, ‘ಬಘೀರ’ನಾಗಿ ಸೂಪರ್‌ ಹೀರೋ ಅವತಾರ ತಾಳಿದ್ದಾರೆ. ಅ. 31ರಂದು ಬಿಡುಗಡೆಯಾದ ಈ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು ಎನ್ನುವ ವಿವರ ಇಲ್ಲಿದೆ (Bagheera Box Office).

ʼಕೆಜಿಎಫ್‌ʼ ಸರಣಿ, ʼಕಾಂತಾರʼ ಮುಂತಾದ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್‌ ʼಬಘೀರʼ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದಿದೆ. ಪ್ರಶಾಂತ್‌ ನೀಲ್‌ ಕಥೆಗೆ ಡಾ.ಸೂರಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸೂಪರ್‌ ಹೀರೋ ಕಾನ್ಸೆಪ್ಟ್‌ನ ಈ ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಶ್ರೀಮುರಳಿ ಜತೆಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಕಂಡ ಈ ಸಿನಿಮಾ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ದಿನ ಕಳೆದಂತೆ ಕಲೆಕ್ಷನ್‌ ಹೆಚ್ಚಿಸಿಕೊಳ್ಳುತ್ತಿದೆ.

3 ದಿನಗಳ ಕಲೆಕ್ಷನ್‌ ವಿವರ

ʼಬಘೀರ’ ಸಿನಿಮಾ ಮೊದಲ ದಿನ 3.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದರಲ್ಲಿ ಕನ್ನಡದ್ದು 2.55 ಕೋಟಿ ರೂ. ಆದರೆ, ಉಳಿದ ಮೊತ್ತ ತೆಲುಗು ವರ್ಷನ್​ನಿಂದ ಹರಿದು ಬಂದಿತ್ತು. ಎರಡನೇ ದಿನ ಕಲೆಕ್ಷನ್‌ ಹೆಚ್ಚಿಸಿಕೊಂಡ ಚಿತ್ರ ಸುಮಾರು ಚಿತ್ರ 3.30 ಕೋಟಿ ರೂ. ಗಳಿಸಿತ್ತು. ಇನ್ನು 3ನೇ ದಿನವಾದ ನ. 2ರಂದು ಬಘೀರನ ಜೋಳಿಗೆಗೆ ಹರಿದು ಬಂದಿದ್ದು 3.5 ಕೋಟಿ ರೂ. ಈ ಮೂಲಕ 3 ದಿನಗಳ ಒಟ್ಟು ಗಳಿಕೆ ಸುಮಾರು 9.85 ಕೋಟಿ ರೂ. ಭಾನುವಾರವಾದ ಇಂದು ಚಿತ್ರದ ಗಳಿಕೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡು ಬರುವ ನಿರೀಕ್ಷೆ ಇದೆ. ಕನ್ನಡ ಜತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿಯೂ ʼಬಘೀರʼ ತೆರೆಗೆ ಬಂದಿದೆ. ಕನ್ನಡ ಮತ್ತು ತೆಲುಗು ಬಿಟ್ಟರೆ ಉಳಿದ ಭಾಷೆಗಳ ಕಲೆಕ್ಷನ್‌ ಹೇಳಿಕೊಳ್ಳುವಷ್ಟಿಲ್ಲ ಎಂದು ಮೂಲಗಳು ವರದಿ ಮಾಡಿವೆ.

ಪ್ರಬಲ ಪೈಪೋಟಿ

ಪ್ರಬಲ ಪೈಪೋಟಿ ಕೂಡ ʼಬಘೀರʼ ಸಿನಿಮಾದ ಕಲೆಕ್ಷನ್‌ ಮೇಲೆ ಪ್ರಭಾವ ಬೀರಿದೆ. ಹಬ್ಬದ ಸೀಸನ್‌ ಹಿನ್ನೆಲೆಯಲ್ಲಿ ವಿವಿಧ ಚಿತ್ರರಂಗಗಳ ಬಹು ನಿರೀಕ್ಷಿತ ಚಿತ್ರಗಳೂ ತೆರೆಕಂಡಿವೆ. ಬಾಲಿವುಡ್‌ನ ʼಸಿಂಗಂ ಎಗೈನ್‌ʼ ಮತ್ತು ‘ಭೂಲ್​ ಭುಲಯ್ಯ 3’, ತಮಿಳಿನ ʼಅಮರನ್‌ʼ ಮತ್ತು ತೆಲುಗಿನ ʼಲಕ್ಕಿ ಭಾಸ್ಕರ್‌ʼ ಕೂಡ ಇದೇ ವೇಳೆ ಬಿಡುಗಡೆಯಾಗಿದೆ. ಇವು ಕೂಡ ಬಿಗ್‌ ಬಜೆಟ್‌ನ, ಬಹು ನಿರೀಕ್ಷಿತ ಸಿನಿಮಾಗಳಾಗಿರುವುದರಿಂದ ʼಬಘೀರʼನ ಗಳಿಕೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ ಮೊದಲ ಕನ್ನಡ ಚಿತ್ರ

ವಿಶೇಷ ಎಂದರೆ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ ʼಬಘೀರʼನ ಪ್ರಸಾರದ ಹಕ್ಕು ಪಡೆದುಕೊಂಡಿದೆ. ಈ ಮೂಲಕ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿರುವ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಪ್ರಸಾರವಾಗುವ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಮಂಗಳೂರು ಹಿನ್ನೆಲೆಯ ಕಥೆ ಹೊಂದಿರುವ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಸುಧಾರಾಣಿ, ಪ್ರಕಾಶ್‌ ರಾಜ್‌, ಜಗಪತಿ ಬಾಬು, ಅಚ್ಯುತ ಕುಮಾರ್‌, ಚಿಕ್ಕಣ್ಣ, ಪ್ರಮೋದ್‌ ಶೆಟ್ಟಿ ಮತ್ತಿತರರು ನಟಿಸಿದ್ದಾರೆ.

ಇದನ್ನೂ ಓದಿ: Bagheera Movie: ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರದ ‘ಪರಿಚಯವಾದೆ’ ಸಾಂಗ್‌ ರಿಲೀಸ್‌