Tuesday, 24th September 2024

Balya Movie: ಪೋಷಕರು, ಮಕ್ಕಳು ನೋಡಲೇ ಬೇಕಾದ ಚಿತ್ರ ʼಬಾಲ್ಯʼ; ಟೀಸರ್‌ ಔಟ್‌

Balya Movie

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಅಮೂಲ್ಯ. ಆ ಬಾಲ್ಯದ ದಿನಗಳು ಹೇಗಿರಬೇಕು? ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ʼಬಾಲ್ಯʼ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ (Balya Movie). ಸತ್ಯನಾರಾಯಣಾಚಾರ್ ನಿರ್ಮಾಣದ ಈ ಚಿತ್ರವನ್ನು ವಿ.ಎಂ.ರಾಜು (ಸುಲ್ತಾನ್ ರಾಜು) ನಿರ್ದೇಶಿಸಿದ್ದಾರೆ. ಇತ್ತೀಚಿಗೆ ನಡೆದ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ʼಬಾಲ್ಯʼ ಸಿನಿಮಾದ ಬಗ್ಗೆ ಮಾತನಾಡಿದರು.

ಸುಮಾರು ಒಂದುವರೆ ವರ್ಷಗಳ ಹಿಂದೆ ಈ ಚಿತ್ರದ ಕಥೆ ಸಿದ್ದವಾಯಿತು ಎಂದ ನಿರ್ದೇಶಕ ವಿ.ಎಂ.ರಾಜು, ʼʼಬಿ.ಪಟೇಲಪ್ಪ ಅವರು ಸೇರಿದಂತೆ ಅನೇಕ ಸ್ನೇಹಿತರು ʼಬಾಲ್ಯʼದ ಕಥೆಗೆ ಸಾಥ್ ನೀಡಿದ್ದಾರೆ. ಈ ಕಥೆಯನ್ನು ಮೆಚ್ಚಿಕೊಂಡ ಸತ್ಯನಾರಾಯಣಾಚಾರ್ ಅವರು ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ. ಮಕ್ಕಳಿಗೆ ಆರರಿಂದ ಹದಿನಾಲ್ಕು ವರ್ಷ ಅಮೂಲ್ಯವಾದದ್ದು. ಆ ಸಮಯದಲ್ಲಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಇಂತಹ ಯೂನಿವರ್ಸಲ್ ಸಬ್ಜೆಕ್ಟ್ ಇಟ್ಟುಕೊಂಡು ಈ ಚಿತ್ರ ಬರುತ್ತಿದೆ. ಪ್ರತಿಯೊಬ್ಬ ಪೋಷಕರು ಹಾಗೂ ಮಕ್ಕಳು ನೋಡಲೇ ಬೇಕಾದ ʼಬಾಲ್ಯʼ ಚಿತ್ರದಲ್ಲಿ ನಾರಾಯಣಸ್ವಾಮಿ, ನಿಶ್ಚಿತಾ, ಬುಲೆಟ್ ವಿನೋದ್, ಅಪ್ಸರ, ಮಾಸ್ಟರ್ ಆರ್ಯನ್, ಮಾಸ್ಟರ್ ದಕ್ಷಿತ್, ದೀಕ್ಷ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ಇಂದು ವಿಶ್ವನಾಥ್ ಸಂಗೀತ ನೀಡಿದ್ದಾರೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆʼʼ ಎಂದರು.

ʼʼಕನ್ನಡ ಚಿತ್ರರಂಗದ ಮೊದಲ ಪಿ.ಆರ್.ಒ. ಸುಧೀಂದ್ರ ನನ್ನ ಗುರು ಸಮಾನರು. ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆʼʼ ಎಂದು ನಿರ್ದೇಶಕ ವಿ.ಎಂ.ರಾಜು ತಿಳಿಸಿದರು.

ʼʼನಾನು ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿದ್ದೇನೆ. ಇದು ಮೂರನೇ ಚಿತ್ರ. ರಾಜು ಅವರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿʼʼ ಎಂದರು ನಿರ್ಮಾಪಕ ಸತ್ಯನಾರಾಯಣಾಚಾರ್ ಮನವಿ ಮಾಡಿದರು.

ಚಿತ್ರದಲ್ಲಿ ನಟಿಸಿರುವ ಕಲಾವಿದರಾದ ಬುಲೆಟ್ ವಿನೋದ್, ಅಪ್ಸರಾ, ಮಾಸ್ಟರ್ ಆರ್ಯನ್, ಮಾಸ್ಟರ್ ದೀಕ್ಷಿತ್, ದೀಕ್ಷಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಕುರಿತು ಇಂದು ವಿಶ್ವನಾಥ್ ಮಾಹಿತಿ‌ ನೀಡಿದರು. ಸಂಕಲನಕಾರ ಲಕ್ಮಣ್ ರೆಡ್ಡಿ ಉಪಸ್ಥಿತರಿದ್ದರು. ರಮೇಶ್ ಕೊಯಿರಾ ಛಾಯಾಗ್ರಹಣವಿರುವ ʼಬಾಲ್ಯʼ ಚಿತ್ರಕ್ಕೆ ಎ.ಟಿ.ರವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನೀಲ್ ಕೆಂಗಾಪುರ್ ʼಬಾಲ್ಯʼ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Sanju Movie: ಬದುಕಿನ ಆಳವನ್ನು ಶೋಧಿಸುವ ನವಿರಾದ ಪ್ರೇಮಕಥೆ ʼಸಂಜುʼ; ಸೆ. 27ರಂದು ಚಿತ್ರ ಬಿಡುಗಡೆ