Thursday, 12th December 2024

ಬ್ರೈನ್ ಹ್ಯಾಮ್ರೇಜ್: ನಟಿ ರಿಷ್ತಾ ಲಬೋನಿ ಶಿಮಾನಾ ನಿಧನ

ವದೆಹಲಿ: ಬ್ರೈನ್ ಹ್ಯಾಮ್ರೇಜ್ ಸಮಸ್ಯೆಯಿಂದ ಹೋರಾಡುತ್ತಿದ್ದ ಬಾಂಗ್ಲಾದೇಶ ಚಿತ್ರರಂಗದ ನಟಿ ರಿಷ್ತಾ ಲಬೋನಿ ಶಿಮಾನಾ( 39) ಬಂಗಬಂಧು ಶೇಖ್ ಮುಜೀಬ್ ವೈದ್ಯಕೀಯ ಆಸ್ಪತ್ರೆಯಲ್ಲಿಇಹಲೋಕ ತ್ಯಜಿಸಿದ್ದಾರೆ.

ನಟಿಯ ಸಾವಿನ ಸುದ್ದಿಯನ್ನು ಆಕೆಯ ಸಹೋದರ ಇಜಾಜ್ ಬಿನ್ ಮತ್ತು ಮಾಜಿ ಪತಿ ಪರ್ವೇಜ್ ಸಜ್ಜದ್ ಖಚಿತಪಡಿಸಿದ್ದಾರೆ.

ಮೇ.21 ರಿಷ್ತಾ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಬ್ರೈನ್ ಹ್ಯಾಮ್ರೇಜ್ ನಿಂದ ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ(ಮೇ.29 ರಂದು) ತೀವ್ರ ಗಂಭೀರಗೊಂಡ ಅವರನ್ನು ನ್ಯೂರೋಸೈನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ ಮೆದುಳಿನ ಸರ್ಜರಿಯನ್ನು ಮಾಡಲಾಗಿತ್ತು. ಆದರೆ ಇದರಿಂದ ನಟಿಯ ಆರೋಗ್ಯ ಮತ್ತಷ್ಟ ಹದಗೆಟ್ಟಿತ್ತು. ಹೀಗಾಗಿ ಶೇಖ್ ಮುಜೀಬ್ ಆಸ್ಪತ್ರೆಗೆ ರವಾನಿಸಲಾಗಿತ್ತು.

ಬಾಂಗ್ಲಾದೇಶದ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ರಿಷ್ತಾ 2006 ರಲ್ಲಿ ಸ್ಟಾರ್-ಸ್ಟಡ್ಡ್ ಲಕ್ಸ್-ಚಾನೆಲ್ ಸೂಪರ್‌ಸ್ಟಾರ್ ಕಾರ್ಯಕ್ರಮದಿಂದ ಮನರಂಜನಾ ಲೋಕಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡ ಅವರು, “ದಾರುಚಿನಿ ದ್ವಿಪ್” ಎನ್ನುವ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಿಷ್ತಾ 2014 ರಲ್ಲಿ ಪರ್ವೇಜ್ ಸಜ್ಜದ್ ಅವರೊಂದಿಗೆ ವಿವಾಹವಾಗಿದ್ದರು. ಆ ಬಳಿಕ ಇಬ್ಬರು ವಿಚ್ಚೇದನ ಪಡೆದಿದ್ದರು.