ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ನಾಲ್ಕನೇ ವಾರದ ಪಂಚಾಯಿತಿಗೆ ಗೈರಾಗಿದ್ದರು. ಅಕ್ಟೋಬರ್ 19ರಂದು ಶನಿವಾರ ಸುದೀಪ್ ತಾಯಿ ಸರೋಜಾ ಸಂಜೀವ್ ಅವರ ಆರೋಗ್ಯದಲ್ಲಿ ಏರುಪೇರಾಗಿ ನಿಧನ ಹೊಂದಿದರು. ಈ ದುಃಖದಿಂದ ಇನ್ನೂ ಹೊರಬರದ ಸುದೀಪ್ ವಾರದ ಪಂಚಾಯಿತಿ ನಡೆಸಿಕೊಡಲಿಲ್ಲ. ಇವರ ಬದಲು ಶನಿವಾರ ಯೋಗರಾಜ್ ಭಟ್ ಮತ್ತು ಭಾನುವಾರ ಸೃಜನ್ ಲೋಕೇಶ್ ಅತಿಥಿಯಾಗಿ ಬಂದು ಕಾರ್ಯಕ್ರಮ ನಿರೂಪಿಸಿದರು.
ಅ. 20 ಭಾನುವಾರದ ಎಪಿಸೋಡ್ ಅನ್ನು ಕೂಡ ಸುದೀಪ್ ಮಾಡಲಿಲ್ಲ. ಇದು ಸ್ಪರ್ಧಿಗಳ ಮನದಲ್ಲಿ ಪ್ರಶ್ನೆಯಾಗಿಯೇ ಉಳಿದಿತ್ತು. ಶನಿವಾರ ತಾಯಿಯ ಆರೋಗ್ಯ ಸಮಸ್ಯೆ ಗಂಭೀರವಾಗಿದೆ ಎಂಬುದು ಅವರಿಗೆ ಗೊತ್ತಿದ್ದರೂ ಸುದೀಪ್ ಅಂದಿನ ಶೋ ಮುಗಿಸಿಕೊಟ್ಟು ಅವರು ತಾಯಿಯನ್ನು ನೋಡಲು ತೆರಳಿದ್ದರು. ಅಷ್ಟರಲ್ಲಾಗಲೇ ಅವರ ತಾಯಿ ನಿಧನರಾಗಿದ್ದರು. ಈ ವಿಷಯದಿಂದ ಇಡೀ ಕರುನಾಡಿನ ಜನತೆಗೆ ಕಣ್ಣೀರು ಬಂತು. ಆದರೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಈ ಸುದ್ದಿಯೇ ಗೊತ್ತಿರಲಿಲ್ಲ.
ಆದರೆ, ಯೋಗರಾಜ್ ಭಟ್ ಅವರು ದೊಡ್ಮನೆಗೆ ಹೋಗಿ ಈ ಸುದ್ದಿ ತಿಳಿಸಿದ್ದಾರೆ. ಇದನ್ನು ಕೇಳಿ ಮನೆಯೊಳಗಿನ ಸ್ಪರ್ಧಿಗಳಿಗೆ ಆಘಾತವಾಗಿದೆ. ಸುದೀಪ್ ತಾಯಿ ನಿಧನದ ಸುದ್ದಿ ಕೇಳಿ ಸ್ಪರ್ಧಿಗಳೆಲ್ಲಾ ಕಣ್ಣೀರು ಹಾಕಿದರು. ಉಗ್ರಂ ಮಂಜು, ಅನುಷಾ ರೈ, ಗೌತಮಿ ಜಾದವ್ ಸೇರಿದಂತೆ ಎಲ್ಲರೂ ದುಃಖಿತರಾದರು. ಸುದೀಪ್ ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿಗ್ ಬಾಸ್ ಮನೆಯಲ್ಲಿ ಮೌನಾಚರಣೆ ಮಾಡಲಾಯಿತು.
ಯೋಗರಾಜ್ ಭಟ್ ಹೇಳಿದ್ದೇನೆ?:
ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ತಿದ್ದ ವೇಳೆ ಸುದೀಪ್ ಅವರಿಗೆ ಪಿಸಿಆರ್ ಮೂಲಕವೇ ಎಮರ್ಜೆನ್ಸಿ ಫೋಲ್ ಕಾಲ್ ಬಂದಿದೆ ಎಂದು ತಿಳಿಸಿದ್ದಾರೆ. ನೀವು ಮಾತಾಡಲೇಬೇಕು ಎಂದಿದ್ದರಂತೆ. ತಕ್ಷಣವೇ ಸುದೀಪ್ ವೇದಿಕೆಯಿಂದ ಹೋಗಿ ಮಾತಾಡಿದ್ದಾರೆ. ಅಮ್ಮನ ಸ್ಥಿತಿ ಗಂಭೀರವಾಗಿದೆ ಎನ್ನುವ ಸಂದೇಶ ಸುದೀಪ್ ಅವರಿಗೆ ತಲುಪಿಸಿದ್ದರು. ಆದರೆ, ಈ ವಿಷಯ ಕೇಳಿದ ಮೇಲೂ ಕೂಡ ಅವರು ತಮ್ಮ ಬಿಗ್ ಬಾಸ್ನ ಕರ್ತವ್ಯವನ್ನು ಪೂರ್ಣಗೊಳಿಸಿದರು. ವಾರದ ಪಂಚಾಯ್ತಿಯನ್ನು ಅವರು ಅರ್ಥಕ್ಕೆ ನಿಲ್ಲಿಸಲಿಲ್ಲ. ಶನಿವಾರದ ಶೂಟಿಂಗ್ ಮುಗಿಸಿ ರಾತ್ರಿ ಮನೆಗೆ ಹೋಗಿ ಅವರು ಬಿಗ್ ಬಾಸ್ ಟೀಮ್ಗೆ ನನ್ನ ತಾಯಿಯನ್ನು ಕಳೆದುಕೊಂಡೆ ಎಂದು ಹೇಳಿದರು ಎಂದು ಯೋಗರಾಜ್ ಭಟ್ ಮನೆಮಂದಿಗೆ ಹೇಳಿದರು.