Sunday, 22nd September 2024

Beguru Colony Movie: ʼಬೇಗೂರು ಕಾಲೋನಿʼಗೆ ‘ಭೀಮ’ ಬಲ; ರಾಜೀವ್ ಸಿನಿಮಾಗೆ ಸಾಥ್ ಕೊಟ್ಟ ದುನಿಯಾ ವಿಜಯ್

Beguru Colony Movie

ಬೆಂಗಳೂರು: ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರ ಕನ್ನಡ ಚಿತ್ರರಂಗಕ್ಕೆ ಬಲ ತುಂಬಿದೆ. ಇದೀಗ ದುನಿಯಾ ವಿಜಯ್ ಬಿಗ್‌ಬಾಸ್ ಖ್ಯಾತಿಯ ರಾಜೀವ್ ಹನು ಹೊಸ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು ಕಥೆ ಬರೆದು ನಿರ್ದೇಶಿಸಿರುವ ‘ಬೇಗೂರು ಕಾಲೋನಿ’ ಸಿನಿಮಾದ (Beguru Colony Movie) ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ , ಖ್ಯಾತ ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಮತ್ತಿತರರು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಈ ವೇಳೆ ವಿಜಯ್ ಮಾತನಾಡಿ, ʼʼನಿರ್ಮಾಪಕರು ನಮ್ಮ ಊರಿನ ಕಡೆಯವರು. ನಮ್ಮದು ಎನ್ನುವ ಸೆಳತವಿದೆ. ನಿರ್ಮಾಪಕ ಹಾಗೂ ನಿರ್ದೇಶಕ ಮಂಜು ಅವರಿಗೆ ಒಳ್ಳೆದಾಗಲಿದೆ. ಹೋರಾಟ ಇಟ್ಕೊಂಡು ಮಾಡಿರುವ ಕಥೆ ʼಬೇಗೂರು ಕಾಲೋನಿʼ ಎನಿಸುತ್ತದೆ. ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ. ಕಾಲೋನಿ ಇಲ್ಲದೇ ನಗರ ಆಗಲ್ಲ. ಕಾಲೋನಿ ಶಕ್ತಿ ಅಪಾರ. ಕಾಲೋನಿ ಜನರಿಂದಲೇ ಎಲ್ಲ. ಕಾಲೋನಿಯವರು ಮೊದಲು ಸಿನಿಮಾ ನೋಡಿ ಆಮೇಲೆ ಮಾಲ್‌ನವರು ಬಂದು ನೋಡ್ತಾರೆ. ರಾಜೀವ್ ನಟನೆಯಲ್ಲಿ ಪೋರ್ಸ್ ಇದೆ. ರಾಜೀವ್ ಹಾರ್ಡ್ ವರ್ಕರ್. ಇಡೀ ತಂಡಕ್ಕೆ ಒಳ್ಳೆದಾಗಲಿʼʼ ಎಂದರು.

ನಿರ್ದೇಶಕ ಫ್ಲೈಯಿಂಗ್ ಮಂಜು ಮಾತನಾಡಿ, ʼʼಕಾಲೋನಿಯಲ್ಲ ಎಲ್ಲ ರೀತಿಯ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆ ಇದು. ಇದು ಹೋರಾಟದ ಕಥೆ. ಇದರಲ್ಲಿ ಫೈಟ್ಸ್ ಚೆನ್ನಾಗಿ ಮಾಡಿದ್ದರೆ ಆ ಕ್ರೆಡಿಟ್ ವಿಜಯ್‌ಗೆ ಹೋಗುತ್ತದೆ. ನನ್ನಂತಹ ಸಣ್ಣ ನಿರ್ದೇಶಕನಿಗೆ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು ನಾನು ಎಂದಿಗೂ ಮರೆಯುವುದಿಲ್ಲʼʼ ಎಂದು ಹೇಳಿದರು.

ನಟ ರಾಜೀವ್ ಹನು ಮಾತನಾಡಿ, ʼʼಫ್ಲೈಕಿಂಗ್ ಮಂಜು ನನಗೆ 15 ವರ್ಷಗಳ ಪರಿಚಯ. ತನಗೆ ಏನು ಬೇಡ. ಹೊಟ್ಟೆ ತುಂಬಿದರೆ ಸಾಕು ಎಂದು ಕೆಲಸ ಮಾಡುವ ವ್ಯಕ್ತಿ. ಆ ಕೆಲಸ ಪರದೆಯ ಮೇಲೆ ಕಾಣುತ್ತಿದೆ. ಇವತ್ತು ಇಷ್ಟು ಜನ ಒಟ್ಟುಗೂಡಿಸುವ ಕೆಲಸ ಕೂಡ ಅವರದ್ದು ಹಾಗೂ ನಿರ್ಮಾಪಕರದ್ದು. ರಾಜೀವ್ ರಾಘವನಾಗಿ ನಿಂತುಕೊಳ್ತಾನೆ ಎಂಬ ನಂಬಿಕೆ ಇದೆʼʼ ಎಂದರು.

ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ʼಬೇಗೂರು ಕಾಲೋನಿʼ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲ ಪಾತ್ರಧಾರಿಗಳನ್ನು ಈ ವಿಡಿಯೋದಲ್ಲಿ ಪರಿಚಯಿಸಲಾಗಿದ್ದು, ಇನ್ನೇನು ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ನಿರೀಕ್ಷೆಯಲ್ಲಿದೆ.

ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್‌ನಲ್ಲಿ ಎಂ. ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಫೈಯಿಂಗ್ ಕಿಂಗ್ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಪೋಸಾಗ್ನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ. ವಿಜಯ್ ಸೋವರ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಪ್ರಮೋದ್ ತಳವಾರ್ ಸಂಕಲನ, ಹಾಗೂ ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ.

ಈ ಸುದ್ದಿಯನ್ನೂ ಓದಿKannada New Movie: ಆದಿತ್ಯ ಶಶಿಕುಮಾರ್ ಹುಟ್ಟುಹಬ್ಬಕ್ಕೆ “ರಾಶಿ” ಉಡುಗೊರೆ!: