Friday, 20th September 2024

Sandalwood News: ತೆರೆ ಮೇಲೆ ಶೀಘ್ರದಲ್ಲಿಯೇ ʼಭಗೀರಥʼ ಪ್ರಯತ್ನ ಅನಾವರಣ; ಪ್ರಮೋಷನಲ್ ಸಾಂಗ್ ಮೂಲಕ ಪ್ರಚಾರ

ಬೆಂಗಳೂರು: ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು ʼಭಗೀರಥ ಪ್ರಯತ್ನʼ ಎನ್ನುತ್ತಾರೆ. ಇಂತಹ ಒಂದು ವಿಭಿನ್ನ ಕಥೆಯನ್ನಿಟ್ಟಿಕೊಂಡು ಬರುತ್ತಿರುವ ಸಿನಿಮಾ ʼಭಗೀರಥʼ. ಈಗಾಗಲೇ ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರಕ್ಕೆ ಇತ್ತೀಚೆಗೆ ಕೆ.ಆರ್.ಪುರದಲ್ಲಿ ಮೂರು ದಿನಗಳ ಕಾಲ ʼಮಾವ‌ ಮಾವʼ ಎಂಬ ಪ್ರಮೋಷನಲ್ ಹಾಡಿನ ಚಿತ್ರೀಕರಣ ಮಾಡಲಾಗಿದೆ‌‌. ನಾಯಕ ಜಯಪ್ರಕಾಶ್, ನಾಯಕಿಯರಾದ ನಿಸರ್ಗ ಅಣ್ಣಪ್ಪ ಹಾಗೂ ರೂಪಶ್ರೀ ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಾಗಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಹಾಗೂ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು (Sandalwood News).

ʼʼಹದಿನೈದು ವರ್ಷಗಳ ಹಿಂದೆ ʼಬಾಯ್ ಫ್ರೆಂಡ್ʼ ಚಿತ್ರದ ಮೂಲಕ ನಿರ್ದೇಶಕನಾದೆ. ಈಗ ವಿಭಿನ್ನ ಕಥೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ʼಭಗೀರಥʼ ಹೆಸರೆ ಹೇಳುವಂತೆ ಅಸಾಧ್ಯವಾದುದ್ದನ್ನು ಸಾಧಿಸುವವನು ಎಂದರ್ಥ. ನಮ್ಮ ಚಿತ್ರದ ಕಥೆಯೂ ಇದೇ ಅರ್ಥದಲ್ಲಿ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮುಂದಿನವಾರ ಚಿತ್ರ ಸೆನ್ಸಾರ್ ಮುಂದೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಪ್ರಮೋಷನಲ್ ಸಾಂಗ್ ನ ಚಿತ್ರೀಕರಣ ಕೆ.ಆರ್. ಪುರದಲ್ಲಿ ನಡೆದಿದ್ದು, ಜಯಪ್ರಕಾಶ್, ನಿಸರ್ಗ, ರೂಪಶ್ರೀ ಭಾಗಿಯಾಗಿದ್ದರು. ಈ ಹಾಡು ಪ್ರಮೋಷನ್‌ಗೆ ಮಾತ್ರ ಬಳಸಿಕೊಳ್ಳುವುದಿಲ್ಲ. ಚಿತ್ರದಲ್ಲೂ ಇರುತ್ತದೆ. ಮಂಗ್ಲಿ ಹಾಗೂ ವಿಜಯ್ ಪ್ರಕಾಶ್ ಈ ಹಾಡನ್ನು ಸದ್ಯದಲ್ಲೇ ಹಾಡಲಿದ್ದಾರೆʼʼ  ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದ್ದಾರೆ.

ʼʼಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಾನು ಹಾಗೂ ಕೆ.ರಮೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದೇವೆʼʼ ಎಂದು ತಿಳಿಸಿದ ನಿರ್ಮಾಪಕ ಬಿ.ಭೈರಪ್ಪ, ಸಣ್ಣ ಪಾತ್ರ ಕೂಡ ಮಾಡಿರುವುದಾಗಿ ಹೇಳಿದರು.

ʼʼಜರ್ನಿಲಿಸಂ ಮಾಡಿ ಪತ್ರಕರ್ತನಾಗಿದ್ದ ನಾನು, ʼಜಮಾನʼ ಚಿತ್ರದ ಮೂಲಕ ನಟನಾದೆ. ʼಭಗೀರಥʼ ಚಿತ್ರದಲ್ಲಿ ಯಾವುದಕ್ಕೂ ಹೆದರದ, ವಿಲ್ ಪವರ್ ಇರುವವನ ಪಾತ್ರ ನನ್ನದು‌. ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಹೈಲೆಟ್. ನಾನು ಕರಾಟೆ ಪಟು ಆಗಿರುವುದರಿಂದ ಸಾಹಸ ಸನ್ನಿವೇಶದಲ್ಲಿ ನಟಿಸುವುದು ಸುಲಭವಾಯಿತುʼʼ ಎಂದು ತಿಳಿಸಿದ ನಾಯಕ ಜಯಪ್ರಕಾಶ್, ಇದೊಂದು ಕೌಟುಂಬಿಕ ಚಿತ್ರ ಎಂದರು.

Bhageeratha

ನನ್ನದು ಚಿತ್ರದಲ್ಲಿ ರಾಧಾ ಎಂಬ ಪಾತ್ರ ಎಂದು ನಿಸರ್ಗ ಅಣ್ಣಪ್ಪ ತಿಳಿಸಿದರೆ, ರುಕ್ಮಿಣಿ ನನ್ನ ಪಾತ್ರದ ಹೆಸರು ಎಂದರು ಮತ್ತೊಬ್ಬ ನಾಯಕಿ ರೂಪಶ್ರೀ. ಖಳನಟ ಶಶಿಧರ್, ನೃತ್ಯ ನಿರ್ದೇಶಕ ನಾಗಿ, ಛಾಯಾಗ್ರಾಹಕ ಮಹೇಶ್ ತಲಕಾಡು ಮುಂತಾದವರು ʼಭಗೀರಥʼ ಚಿತ್ರದ ಕುರಿತು ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಚೇತನ್ ರಮೇಶ್, ʼಭಗೀರಥʼ ಸಾಗಿಬಂದ ಬಗ್ಗೆ ವಿವರಿಸಿದರು.

ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಹಾಗೂ ಸೂರಿ ಚಿತ್ತೂರು ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್. ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನಾ, ಸುರಭಿ ರವಿ, ಶ್ರೀಯಾ ಪಾವನಿ, ನಿಸರ್ಗ ಅಣ್ಣಪ್ಪ, ರೂಪಶ್ರೀ, ಶಶಿಧರ್ ಮುಂತಾದವರು ಅಭಿನಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sandalwood News: ಭಾರತ-ಬಾಂಗ್ಲಾ ಯುದ್ಧದ ಕಥೆ ಹೇಳುವ ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರದ ಹಾಡು ರಿಲೀಸ್‌