Monday, 23rd September 2024

Bhairadevi Movie: ಅಘೋರಿ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ; ʼಭೈರಾದೇವಿʼ ಚಿತ್ರದ ಟ್ರೈಲರ್‌ ಔಟ್‌

Bhairadevi Movie

ಬೆಂಗಳೂರು: ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ನಿರ್ಮಿಸಿ, ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ ʼಭೈರಾದೇವಿʼ ಸಿನಿಮಾ (Bhairadevi Movie) ಅಕ್ಟೋಬರ್ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದರ ಪೂರ್ವಭಾವಿಯಾಗಿ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ನಿರ್ದೇಶಕ ಶ್ರೀಜೈ, ನೃತ್ಯ ನಿರ್ದೇಶಕ ಮೋಹನ್, ಸಹ ನಿರ್ಮಾಪಕರಾದ ರವಿರಾಜ್, ಯಾದವ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟ್ರೈಲರ್‌ ಬಿಡುಗಡೆ ನಂತರ ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ʼʼನಿರ್ದೇಶಕ ಶ್ರೀಜೈ ನಮ್ಮ ಮನೆಗೆ ಬಂದು ಕಥೆ ಹೇಳಿದರು‌. ಕಥೆ ಇಷ್ಟವಾಗಿ ಈ ಚಿತ್ರ ನಿರ್ಮಾಣಕ್ಕೆ ಹಾಗೂ ನಟಿಸಲು ಒಪ್ಪಿಕೊಂಡೆ. ಈ ಚಿತ್ರ ಆರಂಭವಾದಗಿನಿಂದ ಬಿಡುಗಡೆಯವರೆಗೂ ಸಾಕಷ್ಟು ಅಡೆತಡೆಗಳಾಗಿದೆ‌. ಹಾಗಾಗಿ ನಾನು ಚಿತ್ರದ ಬಿಡುಗಡೆ ಯೋಚನೆ ಮಾಡಿರಲಿಲ್ಲ‌. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ಗಂಡ-ಹೆಂಡತಿ ಹೇಳಿದ ಮಾತೊಂದರ ಸ್ಪೂರ್ತಿಯಿಂದ ಚಿತ್ರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡೋಣ ಎಂದು ನನ್ನ ಅಣ್ಣನಿಗೆ ಹೇಳಿದೆ. ಈ ಸಂದರ್ಭದಲ್ಲಿ ಒಂದು ಮಾತು ಹೇಳುತ್ತೇನೆ. ʼಭೈರಾದೇವಿʼ ಚಿತ್ರ ಪ್ರೇಕ್ಷಕರಿಗೆ ಇಷ್ಟವಾದರೆ ಇನ್ನೊಂದು ಸಿನಿಮಾ ಮಾಡುತ್ತೇನೆ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದ ದೂರ ಹೋಗಿ ಬಿಡುತ್ತೇನೆ. ಇದು ದೊಡ್ಡ ಯಶಸ್ಸಾಗುತ್ತದೆ ಎಂಬ ನಂಬಿಕೆ ನನಗಿದೆ. ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದು. ಈ ಚಿತ್ರದ ಸಂಪೂರ್ಣ ಕ್ರೆಡಿಟ್‍ ನಿರ್ದೇಶಕರಿಗೆ ಸಲ್ಲಬೇಕುʼʼ ಎಂದರು.

ರಮೇಶ್‌ ಅರವಿಂದ್‌ ಮಾತನಾಡಿ, ʼʼನಾನು ಈ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿ. ಅರವಿಂದ್ ನನ್ನ ಪಾತ್ರದ ಹೆಸರು. ಯಾವುದೇ ತರಹದ ರೌಡಿಗಳನ್ನು ಸದ್ದೆ ಬಡೆಯುವ ಖಡಕ್ ಪೊಲೀಸ್ ಆಫೀಸರ್ ನಾನು. ಆದರೆ ಈ ಚಿತ್ರದಲ್ಲಿ ನನ್ನಗಿರುವ ವೈರಿ ಈ ರಾಜ್ಯದವರಲ್ಲ, ಈ ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಇನ್ನು ಈ ಚಿತ್ರದ ಟ್ರೈಲರ್‌ ನೋಡಿದಾಗ, ನನಗೆ ʼಆಪ್ತಮಿತ್ರʼ ಚಿತ್ರ ನೆನಪಾಯಿತು. ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಹಾಗೂ ನಾಯಕಿಯಾಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿ ಪಾತ್ರದಲ್ಲಂತೂ ಅವರ ಅಭಿನಯ ಮನೋಜ್ಞ. ಅವರು ಆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಅವರೊಂದಿಗೆ ಮಾತನಾಡಲಿಕ್ಕೆ ಭಯವಾಗುತ್ತಿತ್ತುʼʼ ಎಂದು ಹೇಳಿದರು.

ʼʼಈ ಚಿತ್ರ ಇಷ್ಟು ಅದ್ಧೂರಿಯಾಗಿ ಬರಲು ಕಾರಣ ನಮ್ಮ‌ ನಿರ್ಮಾಪಕಿ ರಾದಿಕಾ. ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು ಕಲಾವಿದರಿಗೆ ನಾನು ಬಹಳ ತೊಂದರೆ ಕೊಟ್ಟಿದ್ದೇನೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು ಹೀಗೆ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ‌ ಅದ್ಭುತವಾಗಿದೆʼʼ ಎಂದು ನಿರ್ದೇಶಕ ಶ್ರೀಜೈ ತಿಳಿಸಿದರು.

“ನನ್ನ ಮೊದಲ ಸಿನಿಮಾ ʼಹೃದಯ ಹೃದಯʼ ಚಿತ್ರ ತೆರೆಕಂಡು ಇಪ್ಪತ್ತೈದು ವರ್ಷಗಳಾಗಿದೆ. ನಾನು ಈಗ ನನ್ನ‌ ಸಿನಿ ಜರ್ನಿಯ ರಜತ ಮಹೋತ್ಸವ ಆಚರಿಸುತ್ತಿದ್ದೇನೆ. ರಮೇಶ್ ಅವರ ಜತೆ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲೂ ಅವರೊಂದಿಗೆ ಅಭಿನಯಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅದ್ಧೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀಜೈ ಅವರ ಕಥೆಯೂ ಬಹಳ ಚೆನ್ನಾಗಿದೆʼʼ ಎಂದು ಅನು ಪ್ರಭಾಕರ್ ಹೇಳಿದರು.

ಸದ್ಯ ಬಿಡುಗಡೆಗೊಂಡಿರುವ ಟ್ರೈಲರ್‌ ಗಮನ ಸೆಳೆಯುತ್ತಿದ್ದು, ಅಘೋರಿ ಪಾತ್ರದಲ್ಲಿ ರಾಧಿಕಾ ಪ್ರೇಕ್ಷಕರನನು ಮೋಡಿ ಮಾಡಿದ್ದಾರೆ. ಚಿತ್ರದ ಬಗೆಗಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಈ ಸುದ್ದಿಯನ್ನೂ ಓದಿ: Harshika Poonacha: ತಾಯಿಯಾಗುವ ಸಂಭ್ರಮದಲ್ಲಿರುವ ಹರ್ಷಿಕಾಗೆ ಅದ್ಧೂರಿ ಬೇಬಿ ಶವರ್ ಆಯೋಜಿಸಿದ ಗಣೇಶ್ ದಂಪತಿ