Sunday, 15th December 2024

Bigg Boss Kannada 11: ದರ್ಶನ್‌ ಪರ ಹೋರಾಟದಿಂದ ಜಾತಿ ನಿಂದನೆ ಆರೋಪದವರೆಗೆ; ಬಿಗ್‌ ಬಾಸ್‌ ಸ್ಪರ್ಧಿ ಲಾಯರ್ ಜಗದೀಶ್ ಹಿನ್ನೆಲೆ ಇದು

Bigg Boss Kannada 11

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 11’ (Bigg Boss Kannada 11) ರಿಯಾಲಿಟಿ ಶೋ ಇಂದು (ಸೆಪ್ಟೆಂಬರ್‌ 29) ಆರಂಭವಾಗಲಿದೆ. ಅದಕ್ಕೂ ಮುಂಚಿತವಾಗಿ ಶನಿವಾರ (ಸೆಪ್ಟೆಂಬರ್‌ 28) ಸ್ಪರ್ಧಿಗಳ ಪೈಕಿ ನಾಲ್ವರ ಹೆಸರು ರಿವೀಲ್‌ ಆಗಿದೆ. ಈ ಮೂಲಕ ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾರ್ಯಕ್ರಮದ ಗ್ರ್ಯಾಂಡ್‌ ಓಪನಿಂಗ್‌ಗೂ ಮೊದಲೇ ಸ್ಪರ್ಧಿಗಳ ವಿವರ ಬಹಿರಂಗಗೊಂಡಿದೆ. ʼರಾಜಾ ರಾಣಿʼ ರಿಯಾಲಿಟಿ ಶೋದ ಫಿನಾಲೆ ವೇದಿಕೆಯಲ್ಲಿ ಇವರ ಹೆಸರು ಪ್ರಕಟಿಸಲಾಗಿದೆ.

‘ಸತ್ಯ’ ಸೀರಿಯಲ್ ಖ್ಯಾತಿಯ ನಟಿ ಗೌತಮಿ ಜಾಧವ್‌, ವಿವಾದಗಳಿಂದಲೇ ಸುದ್ದಿ ಮಾಡುತ್ತಿದ್ದ ಲಾಯರ್ ಜಗದೀಶ್, ಉದ್ಯಮಿಗೆ ಮೋಸ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ಮತ್ತು ಉದ್ಯಮಿ ಗೋಲ್ಡ್ ಸುರೇಶ್‌ – ಇವರೇ ಈ ನಾಲ್ಕು ಸ್ಪರ್ಧಿಗಳು. ಉಳಿದವರ ವಿವರ ಇಂದು ಬಹಿರಂಗಗೊಳ್ಳಲಿದೆ. ಈ ಪೈಕಿ ವಿವಾದಾತ್ಮಕ ಆರೋಪಗಳಿಂದಲೇ ಗಮನ ಸೆಳೆದ ಲಾಯರ್ ಜಗದೀಶ್ ಅಚ್ಚರಿಯ ಆಯ್ಕೆ ಎನಿಸಿಕೊಂಡಿದ್ದಾರೆ.

ಯಾರು ಈ ಲಾಯರ್ ಜಗದೀಶ್?

ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳು, ನಟಿಯರು, ಕಲಾವಿದರ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡುವ ಮೂಲಕ ಸದ್ದು ಮಾಡಿದವರು ಲಾಯರ್ ಜಗದೀಶ್‌. ಲಾಯರ್ ಜಗದೀಶ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ರವಿ ಡಿ. ಚನ್ನಣ್ಣನವರ್ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ವಕೀಲ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಬೆನ್ನಲ್ಲೇ ಕರ್ನಾಟಕದಲ್ಲಿ ವಕೀಲಿಕೆ ಮಾಡದಂತೆ ಬೆಂಗಳೂರು ವಕೀಲರ ಸಂಘ ನಿರ್ಬಂಧ ವಿಧಿಸಿತ್ತು. ಇನ್ನೂ ಜಾತಿ ನಿಂದನೆ ಪ್ರಕರಣದಲ್ಲೂ ಲಾಯರ್ ಜಗದೀಶ್ ಅವರನ್ನು ಅರೆಸ್ಟ್ ಮಾಡಲಾಗಿತ್ತು.

ಇತ್ತೀಚೆಗೆ ನಟ ದರ್ಶನ್ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದರು. ಶಾಸಕ ಮುನಿರತ್ನ ವಿರುದ್ಧವೂ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಅಲ್ಲದೆ ಮಾಜಿ ಸಿಎಂ ಹಾಗೂ ಸ್ವಾಮೀಜಿಯೊಬ್ಬರ ವಿರುದ್ಧ ವಕೀಲ ಜಗದೀಶ್‌ ಆರೋಪ ಹೊರಿಸಿದ್ದರು. ಕನ್ನಡ ನಟಿಯರ ಬಗ್ಗೆಯೂ ಮಾತನಾಡಿದ್ದ ವಿಡಿಯೊ ವೈರಲ್ ಆಗಿದ್ದವು. ”ಭ್ರಷ್ಟರ ವಿರುದ್ಧ ಅನ್ಯಾಯದ ವಿರುದ್ಧ ಹೋರಾಡುತ್ತೇನೆ”ಎನ್ನುವುದು ಅವರ ಟ್ಯಾಗ್‌ಲೈನ್. ಅವರ ಪೂರ್ತಿ ಹೆಸರು ಜಗದೀಶ್ ಮಹಾದೇವ್ (ಕೆ.ಎನ್‌. ಜಗದೀಶ್‌ ಕುಮಾರ್). ಅವರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾನೆ.

ಜಾತಿ ನಿಂದನೆ ಆರೋಪ

2 ವರ್ಷಗಳ ಹಿಂದೆ ವಕೀಲ ಜಗದೀಶ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಬಳಿಕ ಅವರು ಗೋವಾದಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಆಗಸ್ಟ್ 30ರಂದು ಕೊಡಿಗೇಹಳ್ಳಿ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಯಾವ ರೀತಿ ಕೋಲಾಹಲ ಎಬ್ಬಿಸುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ.

ಈ ಬಾರಿಯ ಇನ್ನೊಂದು ವಿಶೇಷ ಎಂದರೆ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಗೆ ಇರುವ ಸ್ವರ್ಗಕ್ಕೆ ಹೋಗಬೇಕಾ? ಅಥವಾ ನರಕಕ್ಕೆ ಹೋಗಬೇಕಾ? ಎನ್ನುವುದನ್ನು ವೀಕ್ಷಕರೇ ವೋಟ್‌ ಮಾಡುವ ಮೂಲಕ ನಿರ್ಧರಿಸಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada 11 : ಬಿಗ್‌ಬಾಸ್‌ಗೆ ಆಯ್ಕೆಯಾದ ಮೊದಲ ನಾಲ್ವರು ಸ್ಪರ್ಧಿಗಳು ಯಾರೆಲ್ಲ? ಇಲ್ಲಿದೆ ಅವರ ವಿವರ