ಬೆಂಗಳೂರು: ಹೊಸ ಅಧ್ಯಾಯ ಎನ್ನುವ ಮೂಲಕ ವೀಕ್ಷಕರರಲ್ಲಿ ಕುತೂಹಲ ಹುಟ್ಟುಹಾಕಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಕಿಚ್ಚ ಸುದೀಪ್ ನಡೆಸಿಕೊಡುವ ಈ ಜನಪ್ರಿಯ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 29ರಂದು ಅದ್ಧೂರಿಯಾಗಿ ಆರಂಭವಾಗಲಿದೆ. ಇದೀಗ ಶೋ ಬಗ್ಗೆ ಮೊದಲ ಸೀಸನ್ ವಿನ್ನರ್, ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಮಾತನಾಡಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ಬಿಗ್ಬಾಸ್ ಕನ್ನಡ ಸೀಸನ್ 11ರ ಪ್ರೋಮೊಗಳು ನೋಡುಗರ ಗಮನ ಸೆಳೆದಿದೆ. ಅದರಲ್ಲಿಯೂ ಈ ಬಾರಿ ಮನೆಯೊಳಗೆ ಸ್ವರ್ಗ ಮತ್ತು ನರಕ ಎನ್ನುವ ಎರಡು ವಿಭಾಗ ಇರಲಿದ್ದು, ಈ ಬಗ್ಗೆಯೇ ನೋಡುಗರು ಚರ್ಚೆ ನಡೆಸುತ್ತಿದ್ದಾರೆ. ಈ ಮೂಲಕ ಶೋ ಆರಂಭವಾಗುವ ಮುನ್ನವೇ ಭಾರಿ ಸಂಚಲನ ಸೃಷ್ಟಿಸಿದೆ.
ಚಿನ್ನಾರಿ ಮುತ್ತ ಹೇಳಿದ್ದೇನು?
ಇದೀಗ ಸ್ಯಾಂಡಲ್ವುಡ್ ಚಿನ್ನಾರಿಮುತ್ತ ಎಂದೇ ಕರೆಯಲ್ಪಡುವ ವಿಜಯ್ ರಾಘವೇಂದ್ರ ಶೋ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ʼʼಸೀಸನ್ 1ರಲ್ಲಿ ದೊಡ್ಡಮನೆಯಲ್ಲಿ ಇದ್ದು ಬಂದವನು ನಾನು. ಬಿಗ್ ಬಾಸ್ನಿಂದ ನನಗೆ ಹಾಗೂ ನನ್ನ ಸಹಸ್ಪರ್ಧಿಗಳಿಗೆ ಒಂದೊಳ್ಳೆ ಅವಕಾಶವಾಗಿತ್ತು. ನಮ್ಮ ಜೀವನದ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವಕಾಶ ಇದರಿಂದ ಲಭಿಸಿತು. ಬಹಳ ಮುಖ್ಯವಾಗಿ ಸುದೀಪ್ ಅವರು ಪ್ರತಿ ವಾರ ಬಂದು ಮಾರ್ಗದರ್ಶನ ನೀಡುತ್ತಿದ್ದರು. ಉತ್ತಮ ನಡತೆಗೆ ಮೆಚ್ಚುಗೆ ಸೂಚಿಸುತ್ತಿದ್ದರು. ತಪ್ಪಿದ್ದರೆ ತಿದ್ದುತ್ತಿದ್ದರುʼʼ ಎಂದು ಹೇಳಿದ್ದಾರೆ.
ಮುಂದುವರಿದು, ʼʼ100 ದಿನಗಳ ಕಾಲ ನಾನು ಮನೆಯೊಳಗೆ ಇದ್ದೆ. ಇದೀಗ ಸೀಸನ್ 11 ಆರಂಭವಾಗಲಿದೆ. ಮನೆಯೊಳಗೆ ತೆರಳುವ ಎಲ್ಲ ಸ್ಪರ್ಧಿಗಳಿಗೆ ಶುಭ ಹಾರೈಸುತ್ತೇನೆ. ಜತೆಗೆ ಸುದೀಪ್ ಅವರಿಗೂ ಶುಭಾಶಯ ತಿಳಿಸುತ್ತೇನೆ. ಅವರು 1 ದಶಕ ಮುಗಿಸಿ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ಆಲ್ ದಿ ಬೆಸ್ಟ್ʼʼ ಎಂದಿದ್ದಾರೆ.
ಶೋ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಮಾಹಿತಿ
ವಿಶೇಷ ಎಂದರೆ ಈ ಬಾರಿ ಶೋ ಆರಂಭಕ್ಕೂ ಮೊದಲೇ ಕೆಲವು ಸ್ಪರ್ಧಿಗಳ ಮಾಹಿತಿ ಬಹಿರಂಗಗೊಳ್ಳಲಿದೆ. ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲ ಬಾರಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಲಾಗಿದೆ. ಸೆಪ್ಟೆಂಬರ್ 28ರಂದು ನಡೆಯುವ ಕಲರ್ಸ್ ಕನ್ನಡದ ʼರಾಜಾರಾಣಿʼ ಶೋದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮನೆಗೆ ತೆರಳುವ ಕೆಲವು ಸ್ಪರ್ಧಿಗಳ ವಿವರ ಬಹಿರಂಗಗೊಳ್ಳಲಿದೆ.
ಸಂಭಾವ್ಯ ಸ್ಪರ್ಧಿಗಳು
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಬಗ್ಗೆ ಮಾತುಕತೆ ಜೋರಾಗಿಯೇ ನಡೆಯುತ್ತಿದೆ. ಸಂಭಾವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಹುಲಿ ಕಾರ್ತಿಕ್, ‘ಗಿಚ್ಚಿ ಗಿಲಿಗಿಲಿ 3’ ರನ್ನರ್ ಮಾನಸಾ ಸಂತು, ಚಂದ್ರಪ್ರಭ, ರೀಲ್ಸ್ ರೇಷ್ಮಾ, ರಾಘವೇಂದ್ರ ಮುಂತಾದವರ ಹೆಸರು ಸಂಭಾವ್ಯರ ಪೈಕಿ ಹೆಚ್ಚು ಪ್ರಚಲಿತದಲ್ಲಿದೆ. ಜತೆಗೆ ಸ್ಯಾಂಡಲ್ವುಡ್ನ ಹಿರಿಯ ನಟಿ ಪ್ರೇಮಾ, ಗಾಯಕಿಯರಾದ ಆಶಾ ಭಟ್, ಐಶ್ವರ್ಯಾ ರಂಗರಾಜನ್, ಸೀರಿಯಲ್ ಕಲಾವಿದರಾದ ಮೋಕ್ಷಿತಾ ಪೈಕಿ, ಗೌತಮಿ ಜಾಧವ್, ಸುಕೃತಾ ನಾಗ್, ಅಮೂಲ್ಯ ಭಾರದ್ವಾಜ್, ಶರ್ಮಿತಾ ಗೌಡ, ದೀಪಕ್ ಗೌಡ, ಅಕ್ಷಯ್ ನಾಯಕ್, ತ್ರಿವಿಕ್ರಮ್, ನಿರೂಪಕಿ ಜಾಹ್ನವಿ, ವಿವಾದದ ಮೂಲಕ ಸುದ್ದಿಯಾಗಿರುವ ಹಿಂದೂ ಸಂಘಟನೆಯು ನಾಯಕಿ ಚೈತ್ರಾ ಕುಂದಾಪುರ, ರೀಲ್ಸ್ ಮೂಲಕ ಜನಪ್ರಿಯರಾದ ವರುಣ್ ಆರಾಧ್ಯ ಹೆಸರೂ ಕೇಳಿಬರುತ್ತಿದೆ.
ಈ ಸುದ್ದಿಯನ್ನೂ ಓದಿ: Bigg Boss Kannada 11: ಬಿಗ್ ಬಾಸ್ನಲ್ಲಿ ರಮ್ಮಿ ಯಾಕೆ? ಸೋಷಿಯಲ್ ಮೀಡಿಯಾದಲ್ಲಿ ಕಾವೇರಿದ ಚರ್ಚೆ