ಹೈದರಾಬಾದ್: ಭಾರತೀಯ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ (Bigg Boss). ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲೆಯಾಳಂಗಳಲ್ಲಿ ಈ ಶೋಗೆ ಪ್ರತ್ಯೇಕ ವೀಕ್ಷಕ ವರ್ಗವೇ ಇದೆ. ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 29ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಈ ಮಧ್ಯೆ ಸೆಪ್ಟೆಂಬರ್ 1ರಂದು ಆರಂಭವಾದ ಬಿಗ್‌ಬಾಸ್ ತೆಲುಗು ಸೀಸನ್ 8 (Bigg Boss Telugu 8) ಗಮನ ಸೆಳೆಯುತ್ತಿದೆ. ಟಾಲಿವುಡ್ ಕಿಂಗ್ ನಾಗಾರ್ಜುನ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಕನ್ನಡಿಗರು ಗಮನ ಸೆಳೆಯುತ್ತಿದ್ದಾರೆ.
ಈ ಬಾರಿಯ ತೆಲುಗು ಬಿಗ್‌ಬಾಸ್‌ನಲ್ಲಿ ಒಬ್ಬರಲ್ಲ, ಇಬ್ಬರಲ್ಲ ನಾಲ್ವರು ಕನ್ನಡಿಗರಿದ್ದಾರೆ. ಕನ್ನಡಿಗರಾದ ನಿಖಿಲ್ ಮಾಳಿಯಕ್ಕಲ್, ಯಶ್ಮಿ ಗೌಡ, ಪ್ರೇರಣಾ ಕಂಬಂ ಮತ್ತು ಪೃಥ್ವಿರಾಜ್ ಶೆಟ್ಟಿ ಪ್ರಬಲ ಸ್ಪರ್ಧಿಗಳಾಗಿ ಗುರುತಿಸಿಕೊಂಡಿದ್ದಾರೆ.
ನಿಖಿಲ್ ಮಾಳಿಯಕ್ಕಲ್: ಮೈಸೂರಿನ ಹಿರಿಯ ಪತ್ರಕರ್ತ ಕೆ.ಶಶಿಕುಮಾರ್ ಹಾಗೂ ಸುಲೇಖಾ ದಂಪತಿ ಪುತ್ರ, ಕಿರುತೆರೆ ನಟ ನಿಖಿಲ್ ಮಾಳಿಯಕ್ಕಲ್ ತೆಲುಗು ಬಿಗ್‌ಬಾಸ್ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಮೈಸೂರಿನ ಬೇಡನ್ ಪೊವೆಲ್ ಸ್ಕೂಲ್ ಮತ್ತು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಿಖಿಲ್, ಬಳಿಕ ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಟೂಟ್ ಆಫ್ ಎಜುಕೇಶನ್‌ನಲ್ಲಿ ಡಿಪ್ಲೊಮಾ ಇನ್ ಇಂಟೀರಿಯರ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದಾರೆ. ʼಊಟಿʼ ಎಂಬ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದ ನಿಖಿಲ್ ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. ʼಮನೆಯೇ ಮಂತ್ರಾಲಯʼ ಕನ್ನಡ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ನಿಖಿಲ್ ಬಳಿಕ ತೆಲುಗು ಕಿರುತೆರೆಯಲ್ಲಿ ಮಿಂಚಿದ್ದಾರೆ. ಒಟ್ಟು 6 ತೆಲುಗು ಧಾರಾವಾಹಿಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ಯಶ್ಮಿ ಗೌಡ: ಬೆಂಗಳೂರು ಮೂಲದ ಯಶ್ಮಿ ಗೌಡ ಅವರೂ ತೆಲುಗು ‘ಬಿಗ್‌ಬಾಸ್’ ಶೋನಲ್ಲಿ ಗಮನ ಸೆಳೆದಿದ್ದಾರೆ. ‘ವಿದ್ಯಾ ವಿನಾಯಕ’ ಎನ್ನುವ ಧಾರಾವಾಹಿ ಮೂಲಕ ಯಶ್ಮಿ ಗೌಡ ಅವರು ಕನ್ನಡ ಕಿರುತೆರೆಗೆ ಕಾಲಿಟ್ಟರು. ಬಳಿಕ ತೆಲುಗು ಕಿರಿತೆರೆಯತ್ತ ಮುಖ ಮಾಡಿ ‘ತ್ರಿನಯನಿ’, ‘ಕೃಷ್ಣ ಮುಕುಂದ ಮುರಾರಿ’, ‘ಸ್ವಾತಿ ಚಿನುಕುಲು’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಪ್ರೇರಣಾ ಕಂಬಂ: ‘ಬಿಗ್ ಬಾಸ್ ಕನ್ನಡ ಮಿನಿ ಸೀಸನ್’ನಲ್ಲಿ ಮಿಂಚಿದ್ದ ಪ್ರೇರಣಾ ಕಂಬಂ ಅವರು ಇದೀಗ ತೆಲುಗು ಶೋದಲ್ಲಿಯೂ ಗಮನ ಸೆಳೆದಿದ್ದಾರೆ. ‘ಆನಾ’, ‘ಪೆಂಟಗನ್’, ‘ಫಿಸಿಕ್ಸ್ ಟೀಚರ್’ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಜತೆಗೆ ತೆಲುಗಿನ ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇವರು ಒಂದುಕಾಲದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ರೂಮ್‌ಮೇಟ್ ಆಗಿದ್ದರು ಎನ್ನುವುದು ವಿಶೇಷ.
ಪೃಥ್ವಿರಾಜ್ ಶೆಟ್ಟಿ: ತೆಲುಗು ಬಿಗ್‌ಬಾಸ್‌ನಲ್ಲಿ ಛಾಪು ಮೂಡಿಸಿದ ಇನ್ನೊಬ್ಬ ಕನ್ನಡಿಗರೆಂದರೆ ಮಂಗಳೂರು ಮೂಲದ ಪೃಥ್ವಿರಾಜ್ ಶೆಟ್ಟಿ. ಪೃಥ್ವಿರಾಜ್ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರು, ಕಾಸರಗೋಡು ಮತ್ತು ಉಡುಪಿಯಲ್ಲಿ ಪೂರೈಸಿದ್ದಾರೆ. ಕಾಲೇಜು ದಿನಗಳಲ್ಲಿ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದ ಪೃಥ್ವಿ ಶೆಟ್ಟಿಗೆ ನಂತರ ನಟನೆಯತ್ತ ಆಸಕ್ತಿ ಬೆಳೆಯಿತು. 2022ರಲ್ಲಿ ತೆರೆಕಂಡ ತೆಲುಗು ಸಿನಿಮಾ ʼಮಹಿಷಾʼ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಅದೇ ವರ್ಷ ಕನ್ನಡ ʼಅರ್ಧಾಂಗಿʼ ಧಾರವಾಹಿಯಲ್ಲಿ ನಟಿಸಿದರು. 2023ರಲ್ಲಿ ತೆಲುಗಿನ ʼನಾಗಪಂಚಮಿʼ ಧಾರಾವಾಹಿಯ ಅವಕಾಶ ಸಿಕ್ಕಿತು. ಇದು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ.
ಈ ಸುದ್ದಿಯನ್ನೂ ಓದಿ: Bigg Boss Kannada 11: ಬಿಗ್‌ಬಾಸ್‌ನಲ್ಲೂ ಹೊಸ ಅಧ್ಯಾಯ; ನಿರೂಪಕ ಯಾರಾಗ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ