Sunday, 15th December 2024

6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ ಮುದ್ದಾಡಿದ ನಟ ರಕ್ಷಿತ್ ಶೆಟ್ಟಿ

ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಚಾರ್ಲಿ ನಾಯಿ ಇದೀಗ ಸಿಹಿ ಸುದ್ದಿ ನೀಡಿದೆ. ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದ್ದು ಸುದ್ದಿ ಕೇಳಿದ ನಟ ರಕ್ಷಿತ್ ಶೆಟ್ಟಿ ಮೈಸೂರಿಗೆ ಓಡೋಡಿ ಬಂದು ಚಾರ್ಲಿಯನ್ನು ಮುದ್ದಾಡಿದ್ದಾರೆ.

ಚಾರ್ಲಿ ಮರಿಗಳಿಗೆ ಜನ್ಮ ನೀಡಿದ ಸುದ್ದಿಯನ್ನು ನಟ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು, ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದ ಶ್ವಾನವು ಈಗ ರಿಯಲ್ ಆಗಿ ತಾಯಿ ಆಗಿದೆ. ಒಂದಲ್ಲಾ ಎರಡಲ್ಲಾ ಆರು ಮರಿಗಳಿಗೆ ಚಾರ್ಲಿ ಈಗ ಜನ್ಮ ನೀಡಿದ್ದಾಳೆ. ಅದರಲ್ಲಿ ಐದು ಹೆಣ್ಣು ಮರಿಗಳಿದ್ದರೆ, ಒಂದು ಗಂಡು ಮರಿ ಇದೆ. ಅಂದಹಾಗೆ, ಚಾರ್ಲಿ ಮೈಸೂರಿನಲ್ಲಿ ಇದ್ದಾಳೆ. ‘777 ಚಾರ್ಲಿ’ ಸಿನಿಮಾಕ್ಕಾಗಿ ಚಾರ್ಲಿಗೆ ತರಬೇತಿ ನೀಡಿದ್ದವರು ಪ್ರಮೋದ್. ಸದ್ಯ ಅವರ ಮನೆಯಲ್ಲಿ ಚಾರ್ಲಿ ವಾಸವಾಗಿದ್ದು, ಇದೀಗ ಸಂತಸದ ವಿಷಯ ತಿಳಿದು ನಟ ರಕ್ಷಿತ್ ಶೆಟ್ಟಿ ಅವರು ಮೈಸೂರಿಗೆ ಭೇಟಿ ನೀಡಿ, ಚಾರ್ಲಿಯನ್ನು ಕಂಡು ಸಂಭ್ರಮಿಸಿದ್ದಾರೆ.

ಚಾರ್ಲಿ ಮರಿಗಳಿಗೆ ಜನ್ಮ ನೀಡಿದ ವಿಚಾರ ತಿಳಿಯುತ್ತಿದ್ದಂತೆಯೇ ಸಖತ್ ಖುಷಿಯಾದ ರಕ್ಷಿತ್ ಶೆಟ್ಟಿ ಅವರು, ಮೈಸೂರಿಗೆ ಹೋಗಿ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ. ಮೇ 9ರಂದು 6 ಮರಿಗಳಿಗೆ ಚಾರ್ಲಿ ಜನ್ಮ ನೀಡಿದ್ದಾಳೆ.

“ನಮ್ಮ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿ 2 ವರ್ಷ ಆಯ್ತು. ಸಿನಿಮಾ ಬಿಡುಗಡೆ ಆದಮೇಲೆ ಚಾರ್ಲಿ ತಾಯಿ ಆಗಬೇಕು, ಅದು ಮರಿಗಳಿಗೆ ಜನ್ಮ ನೀಡಬೇಕು ಎಂಬ ಆಸೆ ನಮಗೆಲ್ಲರಿಗೂ ಇತ್ತು. ಆಗಲೇ ಅವಳ ಜರ್ನಿಗೆ ಒಂದು ಪರಿಪೂರ್ಣತೆ ಸಿಗುತ್ತದೆ ಎಂಬ ಫೀಲಿಂಗ್ ನಮ್ಮ ತಂಡಕ್ಕೆ ಇತ್ತು. ಚಾರ್ಲಿ ತಾಯಿ ಆಗಬೇಕು ಎಂಬುದನ್ನು ನಾನು ತುಂಬ ಸಮಯದಿಂದ ಎದುರು ನೋಡುತ್ತಿದ್ದೆ. ಪ್ರಮೋದ್‌ಗೆ ಫೋನ್ ಮಾಡಿದಾಗೆಲ್ಲಾ, ಇದರ ಬಗ್ಗೆ ಕೇಳ್ತಾ ಇದ್ದೆ. ‘ವಯಸ್ಸಾಗಿದೆ, ಅನುಮಾನ..’ ಅಂತಲೇ ಅವರು ಹೇಳುತ್ತಿದ್ದರು. ಅಚ್ಚರಿ ಎಂದರೆ, ಮೇ 9ರಂದು 6 ಪಪ್ಪಿಗಳಿಗೆ ಜನ್ಮ ನೀಡಿದ್ದಾಳೆ ಚಾರ್ಲಿ. ಅವುಗಳನ್ನು ನೋಡುವುದಕ್ಕಾಗಿ ಮೈಸೂರಿಗೆ ಬಂದಿದ್ದೇನೆ” ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.