ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರಿಗೆ ಇಂದು (ಡಿ. 12) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳಿಂದ ಶುಭ ಹಾರೈಕೆ ಹರಿದು ಬರುತ್ತಿದೆ. ಇದರ ಜತೆಗೆ ಅವರ ಮುಂಬರುವ ಬಹು ನಿರೀಕ್ಷಿತ ‘ಕೂಲಿ’ (Coolie) ಚಿತ್ರದ ಸಾಂಗ್ ಟೀಸರ್ ರಿಲೀಸ್ ಆಗಿದೆ. ಆ ಮೂಲಕ ರಜನಿ ಅಭಿಮಾನಿಗಳಿಗೆ ಭರ್ಜರಿ ಬರ್ತ್ ಡೇ ಟ್ರೀಟ್ ಸಿಕ್ಕಿದೆ (Chikitu Vibe).
ಹೊಸ ಅಲೆಯ, ಪ್ರಯೋಗಾತ್ಮಕ ಚಿತ್ರಗಳ ಮೂಲಕ ಕಾಲಿವುಡ್ನಲ್ಲಿ ಗಮನ ಸೆಳೆದ ಲೋಕೇಶ್ ಕನಕರಾಜನ್ ನಿರ್ದೇಶನದ ಚಿತ್ರ ʼಕೂಲಿʼ. ಸೆಟ್ಟೇರಿದಾಗಿನಿಂದಲೇ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಆ್ಯಕ್ಷನ್, ಥ್ರಿಲ್ಲರ್ ಮಾದರಿಯ ಈ ಚಿತ್ರದ ಹಾಡಿನ ತುಣುಕು ಇದೀಗ ಅಭಿಮಾನಿಗಳನ್ನು ಆಕರ್ಷಿಸಿದೆ. ʼಚಿಕಿಟು ವೈಬ್ʼ ಹೆಸರಿನ ಹೆಸರಿನ ಈ ವಿಡಿಯೊದಲ್ಲಿ ರಜನಿಕಾಂತ್ ಡ್ಯಾನ್ಸ್ ಸ್ಟೆಪ್ ಮೂಲಕ ಮೋಡಿ ಮಾಡಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ತಮ್ಮದೇ ಆದ ಸ್ಟೈಲ್, ಮ್ಯಾನರಿಸಂ ಮೂಲಕ ತಲೈವಾ ಮತ್ತೊಮ್ಮೆ ಮಿಂಚು ಹರಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಗಮನ ಸೆಳೆದಿದೆ.
ರಜನಿಕಾಂತ್ ಅಭಿನಯದ 171ನೇ ಚಿತ್ರ ಇದು ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಭಿನಯಿಸುತ್ತಿದ್ದಾರೆ. ಜತೆಗೆ ನಾಗಾರ್ಜುನ್, ಶ್ರುತಿ ಹಾಸನ್, ಸೌಬಿನ್ ಶಬೀರ್, ಸತ್ಯರಾಜ್ ಮತ್ತು ರೆಬಾ ಮೋನಿಕಾ ಜಾನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅತಿಥಿ ಪಾತ್ರದಲ್ಲಿ ಆಮೀರ್ ಖಾನ್ ?
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಈ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರತಂಡ ಅಂತಿಮ ಹಂತದ ಶೂಟಿಂಗ್ಗಾಗಿ ರಾಜಸ್ಥಾನದ ಜೈಪುರಕ್ಕೆ ತೆರಳಿದೆ. ಅಲ್ಲಿ ಆಮೀರ್ ಖಾನ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.
ಮತ್ತೊಮ್ಮೆ ರಜನಿಕಾಂತ್-ಅನಿರುದ್ಧ್ ಜೋಡಿ
ಸದ್ಯ ದಕ್ಷಿಣ ಭಾರತದ ಟಾಪ್ ಮ್ಯೂಸಿಕ್ ಡೈರಕ್ಟರ್ ಅನಿರುದ್ಧ್ ರವಿಚಂದರ್ ಮತ್ತೊಮ್ಮೆ ರಜನಿಕಾಂತ್ ಜತೆ ಕೈಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ನ 5ನೇ ಚಿತ್ರವಿದು. 2019ರಲಲಿ ತೆರೆಕಂಡ ʼಪೆಟ್ಟಾʼ ಸಿನಿಮಾದಲ್ಲಿ ಇವರಿಬ್ಬರು ಮೊದಲ ಬಾರಿಗೆ ಜತೆಯಾಗಿ ಕೆಲಸ ಮಾಡಿದ್ದರು. ಬಳಿಕ 2020ರಲ್ಲಿ ರಿಲೀಸ್ ಆದ ʼದರ್ಬಾರ್ʼ ಸಿನಿಮಾದಲ್ಲಿ ಮತ್ತೊಮ್ಮೆ ಇವರ ಕಾಂಬಿನೇಷನ್ ರಿಪೀಟ್ ಆಗಿತ್ತು. ಕಳೆದ ವರ್ಷ ಬಿಡುಗಡೆಯಾದ ʼಜೈಲರ್ʼ ಚಿತ್ರದಲ್ಲಿ ಮತ್ತೆ ರಜನಿಕಾಂತ್-ಅನಿರುದ್ಧ್ ಒಂದಾಗಿದ್ದರು. ಈ ಸಿನಿಮಾದ ʼಕಾವಾಲಯ್ಯʼ ಹಾಡು ಸೂಪರ್ ಹಿಟ್ ಆಗಿತ್ತು. ಅಲ್ಲದೆ ಇತ್ತೀಚೆಗೆ ತೆರೆಕಂಡ ಇವರಿಬ್ಬರ ಕಾಂಬಿನೇಷನ್ನ ʼವೆಟ್ಟೈಯನ್ʼ ಸಿನಿಮಾದ ʼಮನಸಿಲಾಯೋʼ ಹಾಡು ಕೂಡ ಟ್ರೆಂಡ್ ಸೃಷ್ಟಿಸಿದೆ. ಇದೀಗ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಈ ಹಿಟ್ ಜೋಡಿ ಸಿದ್ದವಾಗಿದೆ.
ಯಾವಾಗ ರಿಲೀಸ್?
ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ʼಕೂಲಿʼ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ. ಬೇಸಗೆ ರಜೆಯ ವೇಳೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Actor Rajinikanth: ಶ್ರೀದೇವಿ, ಐಶ್ವರ್ಯಾ ರೈ; ರಜನಿಕಾಂತ್ ಜತೆ ತೆರೆ ಹಂಚಿಕೊಂಡ ಟಾಪ್ 5 ಸ್ಟಾರ್ ನಾಯಕಿಯರು