ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ (Daali Dhananjaya) ಹಾಗೂ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ (Satyadev) ನಟನೆಯ ಬಹುನಿರೀಕ್ಷಿತ ಮಲ್ಟಿಸ್ಟಾರ್ ಸಿನಿಮಾ ʼಜೀಬ್ರಾʼ (Zebra). ತೆಲುಗಿನ ಈ ಪ್ಯಾನ್ ಇಂಡಿಯಾ ಚಿತ್ರ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿತ್ತು. ಇದೀಗ ʼಜೀಬ್ರಾʼದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್‌ನಲ್ಲಿ ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್, ಡಾಲಿ ಧನಂಜಯ್ ಮತ್ತು ಸತ್ಯದೇವ್ ಅವರನ್ನು ಪರಿಚಯಿಸಲಾಗಿದೆ.
ಮೋಷನ್ ಪೋಸ್ಟರ್‌ನಲ್ಲಿ ಚೆಸ್ ಆಟ, ಕಾಯಿನ್ ಫ್ಲಿಪ್ಪಿಂಗ್, ಕರೆನ್ಸಿ ನೋಟುಗಳು ಮತ್ತು ಫ್ಲೈಓವರ್‌ನಿಂದ ಕಾರು ಇಳಿಯುವ ದೃಶ್ಯಗಳು ರೋಚಕವಾಗಿ ಮೂಡಿ ಬಂದಿವೆ. ಬಹಳ ಕ್ರಿಯೇಟಿವಿಟಿಯಾಗಿ ಮೋಷನ್ ಪೋಸ್ಟರ್ ಅನ್ನು ಕಟ್ಟಿಕೊಡಲಾಗಿದೆ. ʼಜೀಬ್ರಾʼ ಸಿನಿಮಾವನ್ನ ಈಶ್ವರ್ ಕಾರ್ತಿಕ್ ನಿರ್ದೇಶಿಸುತ್ತಿದ್ದಾರೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಚಿತ್ರ ಇದಾಗಿದೆ.
ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್.ಎನ್. ರೆಡ್ಡಿ, ಎಸ್.ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಿಸುತ್ತಿದ್ದಾರೆ. ʼಕೆಜಿಎಫ್ʼ ಮತ್ತು ʼಸಲಾರ್ʼ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್. ಶ್ರೀಲಕ್ಷ್ಮೀ ರೆಡ್ಡಿ ಸಹ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ,ಮೀರಾಖ್ ಸಂಭಾಷಣೆ ಇದೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಕಾಸ್ಟ್ಯೂಮ್ ಡಿಸೈನರ್ ಆಗಿ ದುಡಿದಿದ್ದಾರೆ.
ಮೋಷನ್ ಪೋಸ್ಟರ್ ಜತೆಗೆ ಚಿತ್ರತಂಡ ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡಿದೆ. ಅಕ್ಟೋಬರ್ 31ರಂದು ಅಂದರೆ ಬೆಳಕಿನ ಹಬ್ಬ ದೀಪಾವಳಿಗೆ ʼಜೀಬ್ರಾʼ ತೆರೆಗೆ ಬರಲಿದೆ.
ಸದ್ಯ ಡಾಲಿ ಧನಂಜಯ್ ಕನ್ನಡದ ಜತೆಗೆ ತೆಲುಗಿನಲ್ಲಿಯೂ ನಟಿಸುತ್ತಿದ್ದಾರೆ. ಬಹು ನಿರೀಕ್ಷಿತ, ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ʼಪುಷ್ಪ 2ʼ ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಲಿ ರೆಡ್ಡಿ ಪಾತ್ರದಲ್ಲಿ ಅವರು ಮೋಡಿ ಮಾಡಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಡಿಸೆಂಬರ್ 6ರಂದು ತೆರೆಗೆ ಬರಲಿದೆ.
ʼಜೀಬ್ರಾʼ ತೆಲುಗಿನ ಜತೆಗೆ ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿಯೂ ಬಿಡುಗಡೆಯಾಗಲಿದೆ. ಇದರ ಜತೆಗೆ ಧನಂಜಯ್ ಹಲವು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼಉತ್ತರಕಾಂಡʼ, ʼಅಣ್ಣ ಫ್ರಂ ಮೆಕ್ಸಿಕೊʼ, ʼನಾಡಪ್ರಭು ಕೆಂಪೇಗೌಡʼ ಮತ್ತು ʼಜಿಂಗೊʼ ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ.
2011ರಲ್ಲಿ ತೆರೆಕಂಡ ʼಮಿ.ಪರ್ಫೆಕ್ಟ್ʼ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಸತ್ಯದೇವ್ 2022ರಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ ʼರಾಮಸೇತುʼ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಸದ್ಯ 4 ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼಕೃಷ್ಣಮ್ಮʼ, ʼಫುಲ್ ಬಾಟಲ್ʼ, ʼಜೀಬ್ರಾʼ ಮತ್ತು ʼಗರುಡ: ಚಾಪ್ಟರ್ 1ʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ʼಜೀಬ್ರಾʼ ನಿರೀಕ್ಷೆ ಮೂಡಿಸಿದೆ.
ಈ ಸುದ್ದಿಯನ್ನೂ ಓದಿ: Kodalli Shivaram: ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಕೋಡಳ್ಳಿ ಶಿವರಾಮ್ ನಿಧನ