Thursday, 12th December 2024

ವಿ-ಟಾಕೀಸ್‌: ಮಹಾಶಿವರಾತ್ರಿಯಂದೇ ರಾಬರ್ಟ್ ತೆರೆಗೆ

ಕಳೆದ ಒಂದು ವರ್ಷದಿಂದ ಕನ್ನಡ ಸಿನಿಪ್ರಿಯರು ಕಾದುಕುಳಿತಿದ್ದ ರಾಬರ್ಟ್ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆ ಯಾಗಿದ್ದು ಮಾರ್ಚ್ 11 ರಂದು ಮಹಾಶಿವರಾತ್ರಿಯ ಶುಭ ದಿನದಂದೇ ಭರ್ಜರಿಯಾಗಿ ತೆರೆಗೆ ಬರಲಿದೆ.

ಅಪರೂಪಕ್ಕೆ ಎಂಬಂತೆ ಇಂದು ದರ್ಶನ್ ಫೇಸ್‌ಬುಕ್ ಲೈವ್ ಬಂದು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಸುಮಾರು ಒಂದು ಗಂಟೆಯ ಫೇಸ್ ಬುಕ್ ಲೈವ್‌ನಲ್ಲಿ ಹಲವು ಅಭಿಮಾನಿಗಳು ಕಾಮೆಂಟ್ ಮೂಲಕ ಪ್ರಶ್ನೆ ಕೇಳಿದರು. ರಾಬರ್ಟ್ ಬಿಡುಗಡೆ ಯಾವಾಗ ಎಂಬುದೇ ಬಹುತೇಕ ಅಭಿಮಾನಿಗಳು ಕೇಳಿದ ಪ್ರಶ್ನೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದಾಸ, ಮಾರ್ಚ್ ತಿಂಗಳಿನಲ್ಲಿ ರಾಬರ್ಟ್ ಬಿಡಗಡೆ ಖಚಿತ. ವಿಶೇಷವಾಗಿ ಮಾರ್ಚ್ 11ರಂದೇ ಚಿತ್ರವನ್ನು ತೆರೆಗೆ ತರಬೇಕು ಎಂಬ ಬಯಕೆ ನಮ್ಮದು ಎಂದರು.

ರಾಬರ್ಟ್ ಟಾಲಿವುಡ್‌ನಲ್ಲೂ ಸದ್ದು ಮಾಡಲು ಸಿದ್ಧವಾಗುತ್ತಿದ್ದು, ಈಗಾಗಲೇ ತೆಲುಗು ವರ್ಷನ್ ಡಬ್ಬಿಂಗ್ ಕಾರ್ಯ ಆರಂಭವಾಗಿದೆ. ಈ ಹಿಂದೆ ಕುರುಕ್ಷೇತ್ರ ಚಿತ್ರಕ್ಕೆ ದನಿ ನೀಡಿದ್ದ ಕಲಾವಿದರೇ ರಾಬರ್ಟ್ ಚಿತ್ರದ ತೆಲುಗು ಡಬ್ಬಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಫೆಬ್ರವರಿ 16ರಂದು ದರ್ಶನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಹುಟ್ಟು
ಹಬ್ಬದಂದು ಸಾವಿರಾರು ಅಭಿಮಾನಿಗಳು ದೂರದೂರಿನಿಂದ ಬಂದು ದರ್ಶನ್ ಅವರಿಗೆ ಶುಭ ಕೋರುತ್ತಿದ್ದರು. ಆದರೆ ಈ ಬಾರಿ ಯಾರು ಮನೆಯ ಬಳಿ ಬರಬಾರದೆಂದು ದರ್ಶನ್ ಮನವಿ ಮಾಡಿದ್ದಾರೆ. ಇದೇ ವಿಚಾರ ತಿಳಿಸಲು ತಾವು ಫೇಸ್‌ಬುಕ್ ಲೈವ್ ಬಂದಿರುವುದಾಗಿಯೂ ದರ್ಶನ್ ಹೇಳಿದರು.

ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುತ್ತೇನೆ
ಸದ್ಯ ಮದುವೆ, ಮಾಲ್, ಮಾರ್ಕೆಟ್‌ಗಳಲ್ಲಿ ಜನಜಂಗುಳಿಯಿದೆ. ಶಾಲಾ ಕಾಲೇಜುಗಳು ಕೂಡ ತೆರೆದಿವೆ. ಆದರೆ ಚಿತ್ರಮಂದಿರದಲ್ಲಿ ಮಾತ್ರ ಶೇ 100 ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ದರ್ಶನ್ ಬೇಸರ ವ್ಯಕ್ತಪಡಿಸಿದರು. ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯದ ಹಿಂದೆ, ಉದ್ಯಮಿ ಅಂಬಾನಿ ಕೈವಾಡ ಇರಬಹುದು ಎಂದು ದರ್ಶನ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಂಬಾನಿ 5ಜಿ ನೆಟ್‌ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎಂದು ನನಗೆ ಅನ್ನಿಸುತ್ತದೆ.

5ಜಿ ಮುಂಚೂಣಿಗೆ ಬರಬೇಕು ಎಂದರೆ ಒಟಿಟಿ, ಆನ್‌ಲೈನ್ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ಆದಾಯ. ಒಂದು ವೇಳೆ
ಚಿತ್ರಮಂದಿರಗಳು ತೆರೆದು ಬಿಟ್ಟರೆ, ಒಟಿಟಿ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ಕೆಲವು ಪ್ರಭಾವಿಗಳಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸಿರಬಹುದು ಎಂದು ದರ್ಶನ್ ಅನುಮಾನ ವ್ಯಕ್ತಪಡಿಸಿದರು. ಚಿತ್ರಮಂದಿರಗಳಲ್ಲಿ ಸದ್ಯ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದು ಶೇ 25ಕ್ಕೆ ಇಳಿದರು ಸರಿಯೇ ನನ್ನ ಸಿನಿಮಾವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ದರ್ಶನ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಹೇಳಿಕೆ

ಕರೋನಾ ಎಲ್ಲರನ್ನೂ ಕಂಗೆಡಿಸಿದೆ. ಎಲ್ಲರೂ ಸಂಕಷ್ಟದಲ್ಲಿದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಮೊದಲು ಗಮನಹರಿಸಿ. ಅದರ ಮುಂದೆ ಇನ್ಯಾವ ಜವಾಬ್ದಾರಿಗಳು ಇಲ್ಲ. ಈ ಬಾರಿ ನನ್ನ ಹುಟ್ಟು ಹಬ್ಬವನ್ನು ಇಲ್ಲಿಗೆ ಬಂದು ಆಚರಣೆ ಮಾಡುವುದು ಬೇಡ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ನನ್ನನ್ನು ಹರಸಿ.
-ದರ್ಶನ್ ನಟ