Tuesday, 22nd October 2024

Devara OTT Release Date: ಒಟಿಟಿಗೆ ಲಗ್ಗೆ ಇಡಲು ‘ದೇವರ’ ಸಜ್ಜು; ಈ ದಿನದಿಂದ ಜೂನಿಯರ್‌ ಎನ್‌ಟಿಆರ್‌ ಚಿತ್ರ ಸ್ಟ್ರೀಮಿಂಗ್‌

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ, ಟಾಲಿವುಡ್‌ ಸ್ಟಾರ್‌ ಜೂನಿಯರ್‌ ಎನ್‌ಟಿಆರ್‌ (Jr NTR) ಅಭಿನಯದ ‘ದೇವರ: ಪಾರ್ಟ್ 1’ (Devara: Part 1) ಚಿತ್ರ ರಿಲೀಸ್‌ ಆಗಿದೆ. ಎಲ್ಲೆಡೆ ಸಿನಿಮಾ ಬಗ್ಗೆ ಸಾಧಾರಣ ವಿಮರ್ಶೆ ಕೇಳಿ ಬಂದಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಪಡೆದುಕೊಂಡಿಲ್ಲ. ಅದಾಗ್ಯೂ ಈಗಾಗಲೇ 250 ಕೋಟಿ ರೂ. ಕ್ಲಬ್‌ ಸೇರಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾಕ್ಕೆ ಮಾಸ್‌ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಥಿಯೇಟರ್‌ನಲ್ಲಿ ಬಹುತೇಕ ಪ್ರದರ್ಶನ ಮುಕ್ತಾಯ ಕಂಡಿದ್ದು, ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ (Devara OTT Release Date).

ವಿವಿಧ ಭಾಷೆಗಳಲ್ಲಿ ತೆರೆಕಂಡ ‘ದೇವರ: ಪಾರ್ಟ್ 1’ ಇದುವರಗೆ ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 285 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಚಿತ್ರ ತೆರೆಕಂಡ 4ನೇ ಸೋಮವಾರ ‘ದೇವರ’ 80 ಲಕ್ಷ ರೂ. ಗಳಿಸಲಷ್ಟೇ ಶಕ್ತವಾಗಿದೆ. ಈ ಪೈಕಿ ತೆಲುಗು ಭಾಷೆಯೊಂದರಿಂದಲೇ 72 ಲಕ್ಷ ರೂ. ಬಾಚಿಕೊಂಡಿದೆ. ಜಾಗತಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಸುಮಾರು 525 ಕೋಟಿ ರೂ. ʼದೇವರʼ ಮೊದಲ ದಿನವೇ 82.5 ಕೋಟಿ ರೂ. ಗಳಿಸಿದ್ದರೂ ಬಳಿಕ ಕಲೆಕ್ಷನ್‌ ಇಳಿಮುಖವಾಗುತ್ತ ಸಾಗಿದೆ.

ಒಟಿಟಿ ಸ್ಟ್ರೀಮಿಂಗ್‌ ಯಾವಾಗ?

ಸದ್ಯ ‘ದೇವರ: ಪಾರ್ಟ್ 1’ ಒಟಿಟಿ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಿದೆ. ನವೆಂಬರ್‌ 8ರಂದು ಸಿನಿಮಾ ವಿವಿಧ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ತೆಲುಗು ಜತೆಗೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂಗಳಲ್ಲಿ ‘ದೇವರ: ಪಾರ್ಟ್ 1’ ಪ್ರಸಾರವಾಗಲಿದೆ. ದೇವರ ಸಿನಿಮಾದಲ್ಲಿ ಸೈಫ್‌ ಆಲಿಖಾನ್‌ ವಿಲನ್‌ ಆಗಿ ಅಬ್ಬರಿಸಿದ್ದು, ನಾಯಕಿಯಾಗಿ ಜಾನ್ವಿ ಕಪೂರ್‌ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಚೈತ್ರಾ ರೈ, ಪ್ರಕಾಶ್‌ ರೈ, ಶ್ರೀಕಾಂತ್‌, ಶೈನ್‌ ಟಾಮ್‌ ಚಾಕೋ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

2016ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಜನತಾ ಗ್ಯಾರೇಜ್‌ʼ (Janatha Garage) ಸಿನಿಮಾದಲ್ಲಿಒಟ್ಟಾಗಿ ಕೆಲಸ ಮಾಡಿದ್ದ ಜನಪ್ರಿಯ ನಿರ್ದೇಶಕ ಕೊರಟಾಲ ಶಿವ ಮತ್ತು ಜೂನಿಯರ್‌ ಎನ್‌ಟಿಆರ್‌ ಸುಮಾರು 8 ವರ್ಷಗಳ ಬಳಿಕ ʼದೇವರʼ ಚಿತ್ರದ ಮೂಲಕ ಒಂದಾಗಿದ್ದು ಕೂಡ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಹೀಗಾಗಿ ಚಿತ್ರ ಸೆಟ್ಟೇರಿದಾಗಿನಿಂದಲೂ ಪ್ರೇಕ್ಷಕರ ಗಮನ ಸೆಳೆದಿತ್ತು. ಚಿತ್ರ ಬಿಡುಗಡೆಗೆ ಮೊದಲೇ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿರುವ ಹಾಡುಗಳು ಮೋಡಿ ಮಾಡಿದ್ದವು.

2 ವರ್ಷಗಳ ಬಳಿಕ ತೆರೆ ಮೇಲೆ ಬಂದ ಜೂನಿಯರ್‌ ಎನ್‌ಟಿಆರ್‌

ವಿಶೇಷ ಎಂದರೆ ಸುಮಾರು 2 ವರ್ಷಗಳ ಬಳಿಕ ತೆರೆ ಮೇಲೆ ಜೂನಿಯರ್‌ ಎನ್‌ಟಿಆರ್‌ ಪ್ರತ್ಯಕ್ಷವಾಗಿದ್ದು, ಫ್ಯಾನ್ಸ್‌ ಈ ಚಿತ್ರಕ್ಕಾಗಿ ಕಾದು ಕುಳಿತಿದ್ದರು. ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ರಾಜಮೌಳಿ ಅವರ ʼಆರ್‌.ಆರ್‌.ಆರ್‌.ʼ ಸಿನಿಮಾದ ಬಳಿಕ ಜೂನಿಯರ್‌ ಎನ್‌ಟಿಆರ್‌ ಅಭಿನಯದ ಯಾವ ಚಿತ್ರವೂ ತೆರೆಕಂಡಿರಲಿಲ್ಲ. ಹೀಗಾಗಿ ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿತ್ತು. ಕೊನೆಗೂ ಚಿತ್ರ ತೆರೆಕಂಡು ನಿರೀಕ್ಷಿತ ಮಟ್ಟಕ್ಕೆ ತಲುಪದಿದ್ದರೂ ಪಾರ್ಟ್‌ 2 ಬಗ್ಗೆ ಕುತೂಹಲ ಹುಟ್ಟು ಹಾಕಿದೆ.

ಈ ಸುದ್ದಿಯನ್ನೂ ಓದಿ: Devara Part 1: ʼದೇವರʼ ಬಿಡುಗಡೆಗೆ ಮುನ್ನವೇ ದಾಖಲೆಯ ಕಲೆಕ್ಷನ್‌; ಅಡ್ವಾನ್ಸ್‌ ಬುಕ್ಕಿಂಗ್‌ನಿಂದ ಜೂನಿಯರ್‌ ಎನ್‌ಟಿಆರ್‌ ಚಿತ್ರ ಗಳಿಸಿದ್ದೆಷ್ಟು?