ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಧರ್ಮಾ ಕೀರ್ತಿರಾಜ್ ಮೂಲೆಗುಂಪಾಗುತ್ತಿದ್ದಾರೆ ಎಂಬ ಮಾತು ಕಳೆದ ಕೆಲವು ವಾರಗಳಿಂದ ಕೇಳಿ ಬರುತ್ತಲೇ ಇದೆ. ಇದು ಸುಳ್ಳು ಎಂದು ಧರ್ಮಾ ಅನೇಕ ಬಾರಿ ಹೇಳಿದ್ದರೂ ಮೇಲ್ನೋಟಕ್ಕೆ ನಿಜದಂತೆ ಕಾಣುತ್ತಿದೆ. ಇವರಿಗೆ ಅವಕಾಶ ಸಿಕ್ಕಿದ್ದು ಕಮ್ಮಿ, ಆದರೆ, ಸಿಕ್ಕ ಅವಕಾಶವನ್ನು ದೊಡ್ಟ ಮಟ್ಟದಲ್ಲಿ ಉಳಿಸಿಕೊಂಡಿಲ್ಲ ಎಂಬುದು ಕೂಡ ನಿಜ. ಇದು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಕೂಡ ನಡೆದಿದೆ.
ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಧರ್ಮಾ ಹಾಗೂ ಹನುಮಂತ ಟಾಪ್ ಎರಡರಲ್ಲಿ ಬಂದಿದ್ದರು. ಆದರೆ, ಚೆಂಡನ್ನು ಹಿಡಿದುಕೊಂಡು ಬಲೆಯಿಂದ ಹೊರಬರಲು ತಡಮಾಡಿದ ಧರ್ಮಾ ಅದ್ಭುತ ಅವಕಾಶವನ್ನು ಮಿಸ್ ಮಾಡಿಕೊಂಡರು. ಪರಿಣಾಮ ಹನುಮಂತ ಮನೆಯ ನಾಯಕರಾದರು. ಈ ವಾರ ಧರ್ಮಾ ಕ್ಯಾಪ್ಟನ್ಸಿ ಟಾಸ್ಕ್ನಿಂದಲೇ ಹೊರಗುಳಿದಿದ್ದಾರೆ. ಸ್ವಲ್ಪ ತಲೆ ಯೋಚಿಸಿದರೂ ಇಲ್ಲಿ ಧರ್ಮಾ ಅವರು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯಬಹುದಿತ್ತು.
ಟಾಸ್ಕ್ ಏನಾಗಿತ್ತು?:
ಈ ವಾರದ ಕ್ಯಾಪ್ಟನ್ಸಿ ರೇಸ್ಗೆ ಮಂಜು, ಭವ್ಯಾ, ಸುರೇಶ್ ಅವರು ನೇರವಾಗಿ ಎಂಟ್ರಿ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ರೇಸ್ನಿಂದ ಐಶ್ವರ್ಯಾ, ಚೈತ್ರಾ, ಗೌತಮಿ ಅವರನ್ನು ಈಗಿನ ಕ್ಯಾಪ್ಟನ್ ಹನುಮಂತು ಹೊರಗಿಟ್ಟಿದ್ದಾರೆ. ಉಳಿದ ಆರು ಸದಸ್ಯರಾದ ಮೋಕ್ಷಿತಾ, ಧರ್ಮ, ಧನರಾಜ್ ಆಚಾರ್, ತ್ರಿವಿಕ್ರಮ್, ಶಿಶಿರ್, ಅನುಷಾ ರೈ ಅವರುಗಳಲ್ಲಿ ಇಬ್ಬರನ್ನು ಈ ರೇಸ್ನಿಂದ ಹೊರಗಿಡುವ ಅವಕಾಶವನ್ನು ಬಿಗ್ ಬಾಸ್ ಟಾಸ್ಕ್ ರೂಪಪದಲ್ಲಿ ನೀಡಿದರು.
ಟಾಸ್ಕ್ ಏನೆಂದರೆ ಮನೆಯ ಸದಸ್ಯರು ಕ್ಯಾಪ್ಟನ್ಸಿ ರೇಸ್ಗೆ ಹೋಗಲು ಅರ್ಹತೆ ಇಲ್ಲದ ಇಬ್ಬರು ಸ್ಪರ್ಧಿಗಳ ಫೋಟೋಗಳನ್ನು ಮನೆಯಲ್ಲಿ ಇಟ್ಟಿರುವ ಬೋರ್ಡ್ನಲ್ಲಿ ಇಡಬೇಕು. ಆಗ ಸ್ಪರ್ಧಿಗಳು ಸಮರ್ಥನೆ ಮಾಡಿಕೊಂಡು, ತಮ್ಮ ಫೋಟೋಗಳ ಬದಲು ಬೇರೆಯವರ ಫೋಟೋಗಳನ್ನು ಇಡುತ್ತಾ ಹೋಗಬೇಕು. ಈ ಪ್ರಕ್ರಿಯೆ ಒಟ್ಟು 30 ನಿಮಿಷಗಳ ಕಾಲ ನಡೆಯುತ್ತದೆ.
ಅಂತಿಮವಾಗಿ 30ನೇ ನಿಮಿಷ ಆದಾಗ ಆ ಬೋರ್ಡ್ ಮೇಲೆ ಯಾರ ಇಬ್ಬರ ಫೋಟೋ ಇರುತ್ತದೆಯೋ, ಅವರು ಕ್ಯಾಪ್ಟನ್ಸಿ ರೇಸ್ನಿಂದ ಹೊರಗೆ ಬೀಳುತ್ತಾರೆ. ಹಾಗೇ ಉಳಿದ ಎರಡು ಫೋಟೋಗಳು ಮೋಕ್ಷಿತಾ ಮತ್ತು ಧರ್ಮಾ ಅವರದ್ದು. ಹಾಗಾಗಿ, ಇವರಿಬ್ಬರು ಕ್ಯಾಪ್ಟನ್ಸಿ ಓಟದಿಂದ ಔಟ್ ಆದರು. ಸಮಯದ ಬಗ್ಗೆ ಎಲ್ಲರಿಗೂ ಒಂದಿಷ್ಟು ಲೆಕ್ಕಾಚಾರ ಇರುತ್ತದೆ. ಇಲ್ಲಿ ಧರ್ಮಾ ಸರಿಯಾಗಿ ತಲೆ ಓಡಿಸಿದ್ದರೆ ತಮ್ಮ ಫೋಟೋವನ್ನು ತೆಗೆದು ಬೇರೆಯವರ ಫೋಟೋ ಹಾಕಬಹುದಿತ್ತು. ಆದರೆ, ಇವರು ಚರ್ಚೆ ಮಾಡುತ್ತಲೇ ಮಗ್ನರಾದರು.
ಅಲ್ಲದೆ ಈ ವಾರ ಮನೆಯಿಂದ ಹೊರಹೋಗಲು ಧರ್ಮಾ ಕೂಡ ನಾಮಿನೇಟ್ ಆಗಿದ್ದಾರೆ. ಕಳೆದ ಕೆಲವು ವಾರಗಳಿಂದ ಸೈಲೆಂಟ್ ಆಗಿರುವ ಧರ್ಮಾ ಅವರು ತಮ್ಮ ಕಳಪೆ ಪ್ರದರ್ಶನದಿಂದ ಈ ವಾರ ಹೊರಹೋದರು ಅಚ್ಚರಿ ಪಡಬೇಕಿಲ್ಲ. ಇವರ ಜೊತೆಗೆ ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಅವರು ನಾಮಿನೇಟ್ ಆಗಿದ್ದಾರೆ.