Friday, 22nd November 2024

Dua Padukone Singh: ದೀಪಿಕಾ-ರಣವೀರ್ ದಾಂಪತ್ಯಕ್ಕೆ ಸಿಕ್ಕಿದ ‘ದುವಾ’ – ಸ್ಟಾರ್‌ ಜೋಡಿಯ ಮುದ್ದು ಕಂದಮ್ಮ ಹೇಗಿದ್ದಾಳೆ ನೋಡಿ..!

ಮುಂಬೈ: ಬಾಲಿವುಡ್​ ತಾರಾ ದಂಪತಿ ರಣ್​​ವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಅವರ ಪ್ರೇಮಕಥೆ ಯಾವುದೇ ಫೇರಿ ಟೇಲ್​​​ಗಿಂತ ಕಡಿಮೆಯೇನಿಲ್ಲ. ಪ್ರೇಮ ಪಕ್ಷಿಗಳ ಪ್ರಯಾಣ 2013ರಲ್ಲಿ ”ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ” ಸೆಟ್‌ಗಳಲ್ಲಿ ಪ್ರಾರಂಭವಾಯಿತು. ಸೂಪರ್​ ಡೂಪರ್​​ ಚಿತ್ರದಲ್ಲಿ ಜೋಡಿಯ ಆನ್-ಸ್ಕ್ರೀನ್ ಬಹಳ ಅದ್ಭುತವಾಗಿ ಮೂಡಿಬಂದಿತ್ತು.

ನಂತರದ ದಿನಗಳಲ್ಲಿ ಜೋಡಿಯ ಪ್ರೇಮ ಪ್ರಣಯ ಉತ್ತುಂಗಕ್ಕೇರಿತು. ಸಿನಿಮಾ ಮಾತ್ರವಲ್ಲದೇ ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳಲು ಶುರುವಾಯಿತು. 2018ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಈ ಲವ್​ಬರ್ಡ್ಸ್ ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದರು.

2018ರ ನವೆಂಬರ್​ನಲ್ಲಿ ದೀಪ್​ವೀರ್​​ ಇಟಲಿಯ (Italy) ಲೇಕ್ ಕೊಮೋದಲ್ಲಿ (Lake Como) ಅದ್ಧೂರಿಯಾಗಿ ಹಸೆಮಣೆ ಏರಿದರು. ವಿವಾಹ ಸಮಾರಂಭ ಕೊಂಕಣಿ ಮತ್ತು ಸಿಂಧಿ ಪದ್ಧತಿಗಳ ಪ್ರಕಾರ ಬಹಳ ಸುಂದರವಾಗಿ ನಡೆದಿತ್ತು. ಪ್ರೀತಿ, ನಗು ಮತ್ತು ಕುಟುಂಬ – ಸ್ನೇಹಿತರನ್ನೊಳಗೊಂಡ ಸುಂದರ ಕ್ಷಣವನ್ನು ಸೃಷ್ಟಿಸಿದ್ದರು. ಮದುವೆ ಬಳಿಕ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ಫೋಟೋಗಳನ್ನು ಹಂಚಿಕೊಂಡು ಸಖತ್​ ಸದ್ದು ಮಾಡಿದ್ದರು.

ಹೀಗೆ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಜೋಡಿ ಇತ್ತೀಚೆಗಷ್ಟೇ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲೀಗ ಫ್ಯಾನ್​ ಮೇಡ್​​ ಫೋಟೋಗಳು ನೆಟ್ಟಿಗರ ಗಮನ ಸೆಳೆದಿವೆ. ಅದಾಗ್ಯೂ ದಂಪತಿ ತಮ್ಮ ಮಗಳ ಯಾವುದೇ ನೈಜ ಫೋಟೋಗಳನ್ನು ಇನ್ನೂ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ದೀಪಿಕಾ ರಣವೀರ್‌ ಮಗಳನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮಗು ಹುಟ್ಟಿದ ನಂತರ ಈ ಜೋಡಿ ಎಲ್ಲೂ ಮಗಳ ಫೋಟೋ ರಿವೀಲ್‌ ಮಾಡಿರಲಿಲ್ಲ. ಈಗ ಮಗುವಿನ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಮಗಳ ಹೆಸರನ್ನೂ ತಿಳಿಸಿದ್ದಾರೆ.

ದೀಪಿಕಾ ಹಾಗೂ ರಣವೀರ್‌ ಮಗಳ ಪೂರ್ತಿ ಫೋಟೋವನ್ನು ರಿವೀಲ್‌ ಮಾಡಿಲ್ಲ. ಪಿಂಕ್‌ ಬಣ್ಣದ ಬಟ್ಟೆ ಧರಿಸಿದ ಮಗುವಿನ ಕಾಲುಗಳನಷ್ಟೇ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗಳಿಗೆ ದುವಾ ಪಡುಕೋಣೆ ಸಿಂಗ್‌ (Dua Padukone Singh) ಎಂದು ಹೆಸರಿಟ್ಟಿರುವುದಾಗಿ ಹೇಳಿದ್ಧಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಗುವಿನ ಫೋಟೋ ರಿವೀಲ್‌ ಮಾಡಿರುವ ದೀಪ್‌ವೀರ್‌, ದುವಾ ಪಡುಕೋಣೆ ಸಿಂಗ್‌, ದುವಾ ಎಂದರೆ ಪ್ರಾರ್ಥನೆ, ಏಕೆಂದರೆ ಅವಳು ನಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ. ನಮ್ಮ ಹೃದಯದಲ್ಲಿ ಪ್ರೇಮ, ಕೃತಜ್ಞತೆಯಿಂದ ತುಂಬಿ ಹೋಗಿದೆ. ದೀಪಿಕಾ ಹಾಗೂ ರಣವೀರ್‌ ಎಂಬ ಕ್ಯಾಪ್ಷನ್‌ ಬರೆದಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಹಾಗೂ ಬಾಲಿವುಡ್‌ ಸೆಲೆಬ್ರಿಟಿಗಳು ಕೂಡಾ ಕಾಮೆಂಟ್‌ ಮಾಡುತ್ತಿದ್ದಾರೆ.

ಇನ್ನು ಅಭಿಮಾನಿಗಳು ನಿಮ್ಮ ಮನೆಯ ಪುಟ್ಟ ಲಕ್ಷ್ಮೀ ದುವಾ ಎಂದು ಒಬ್ಬರು ಹೇಳಿದರೆ, ಹೆಸರು ಚೆನ್ನಾಗಿದೆ, ಮಗುವಿನ ಮೇಲೆ ನಮ್ಮೆಲ್ಲರ ಆಶೀರ್ವಾದ ಇದೆ ಎಂದಿದ್ದಾರೆ. ಕಾಮೆಂಟ್‌ ಬಾಕ್ಸ್‌ ತುಂಬಾ ಲವ್‌ ಎಮೋಜಿಗಳು ತುಂಬಿ ಹೋಗಿವೆ. ಈ ಫೋಟೋಗೆ 3 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಲೈಕ್‌ ಮಾಡಿದ್ದಾರೆ. ಭೂಮಿ ಪೆಡ್ನೇಕರ್‌, ಕರಣ್‌ ಜೋಹರ್‌, ವಿಜಯ್‌ ಯೇಸುದಾಸ್‌ ಕಾಮೆಂಟ್‌ ಮಾಡಿ ಮಗುವಿನ ಹೆಸರು ಬಹಳ ಮುದ್ದಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Deepika Padukone: ದೀಪಿಕಾ ಪಡುಕೋಣೆಯಿಂದ 17.78 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿ